ನಮ್ಮ ಕಾಂಕ್ರೀಟ್ ರಸ್ತೆ ಮತ್ತು ನಾವು..!
(ನಮ್ಮ ಕನಸಿನ ರಸ್ತೆಗಳ ಅಸಲಿಯತ್ತು)
ಮುಂಡಗೋಡವನ್ನು ಒಂದಿಪ್ಪತ್ತು ವರ್ಷಗಳ ಹಿಂದೆ ನೋಡಿದ್ದರೆ ಆಗಿನ್ನೂ ರಸ್ತೆಗಳ ಅಭಿವೃದ್ಧಿ ಆಗಿರಲಿಲ್ಲ , ರಸ್ತೆ ಏನು ಯವಾದರಲ್ಲೂ ಸಹ ಮುಂಡಗೋಡ ಅಷ್ಟಕ್ಕಷ್ಟೇ. ಈಗಲೂ ಸಹ ಅಕ್ಕಪಕ್ಕದ ಊರಗಳಿಗೆ ಹೋಲಿಸದರೆ ಮುಂಡಗೋಡ ಅಭಿವೃದ್ಧಿಯ ಪಥದಲ್ಲಿ ಅಷ್ಟಕ್ಕಷ್ಟೇ.. ಇರ್ಲಿ ಇವೆಲ್ಲದರ ಹಿಂದಿನ ಒಂದಿಷ್ಟು ರಸ್ತೆಯ ಕಥೆಗಳನ್ನ ನೋಡೋಣ. ಮೊದಲೆಲ್ಲ ಮುಂಡಗೋಡದ ಮುಖ್ಯ ಬೀದಿಗಳು ಮಾತ್ರ ಡಾಂಬರ್ ರಸ್ತೆಗಳನ್ನ ಕಂಡಿದ್ದು ಬಿಟ್ಟರೆ ಮಿಕ್ಕ ರಸ್ತೆಗಳೆಲ್ಲವು ಕಚ್ಚಾ ಮಣ್ಣಿನ ರಸ್ತೆಗಳೇ , ನಿಧಾನಕ್ಕೆ ಡಾಂಬರಿನ ರಸ್ತೆಗಳು ಬರುತ್ತಿದ್ದಂತೆ ಮುಂಡಗೋಡಿಗರಿಗೆ ಖುಷಿಯೋ , ಖುಷಿ ಯಾಕಂದ್ರೆ ರಸ್ತೆಯ ಮೇಲೆ ಡಾಂಬರನ್ನು ಸುರಿತಾ ಇರೋದನ್ನ ಕಂಡು. ಆದ್ರೆ ಏನೂ ಈ ಖುಷಿ ತುಂಬಾ ದಿನ ಉಳಿಯಲೇ ಇಲ್ಲ ಧೋ ಧೋ ಎಂದು ಧರೆಗೆ ಸುರಿದ ಮಳೆರಾಯ ಡಾಂಬರನ್ನು ಕೊಚ್ಚಿಕೊಂಡು ಹೋಗುತ್ತಿದ್ದ. ಅಗೊಂದು ಸತ್ಯದ ಅರಿವಾಗುವದರೊಳಗೆ ಅದಾಗಲೇ ಸಮಯ ಮಿಕ್ಕಿ ಹೋಗಿತ್ತು.. ಈ ಡಾಂಬರಿನ ರಸ್ತೆಯನ್ನು ಮಾಡುವದರಲ್ಲಿ ಏನೋ ಸರಿಯಾಗಿ ಇರಲ್ಲ , ಸಿಕ್ಕಾಪಟ್ಟೆ ಕಳಪೆ ಮಟ್ಟದ ರಸ್ತೆಗಳಿವು ಮತ್ತು ಇಲ್ಲೇನೋ ಅವ್ಯವಹಾರ ನಡೆಯುತ್ತದೆ ಎಂಬುದು ಖಾತ್ರಿಯಾಗಿ ಹೋಗಿತ್ತು . ಮತ್ತದೇ ನಾವೇ ಕಟ್ಟಿದ ನಮ್ಮದೇ ತೆರಿಗೆಯ ದುಡ್ಡು ಪ್ರತಿ ಮಳೆಗಾಲದಲ್ಲೂ ನೀರುಪಾಲು. ಇದಕ್ಕೆಲ್ಲ ಪರಿಹಾರ ಎಂಬಂತೆ ಈಗ ಕಾಂಕ್ರೀಟಿನಿ ರಸ್ತೆಗಳನ್ನು ಮಾಡಲಾಗುತ್ತಿದೆ. ಈ ರಸ್ತೆಗಳು ಶಾಶ್ವತ ಹಾಗೂ ಡಾಂಬರಿನ ರಸ್ತೆಗಳಿಗಿಂತ ದುಪ್ಪಟ್ಟು ಬಾಳಿಕೆ ಬರುತ್ತದೆ ಎಂಬುದನ್ನು ನಂಬಿಸಲಾಗುತ್ತಿದೆ ಹೊರತು ಅದು ನಿಜವೋ ಸುಳ್ಳೋ ಎಂಬುವದನ್ನ ಕಾಲವೇ ಉತ್ತರಿಸಬೇಕು. ಹೌದು ಈ ಮಾತು ನಿಜವೇ ಅಂತ ಒಪ್ಪೊಣ. ಆದರೆ ಸಿಮೆಂಟಿನ ರಸ್ತೆಗಳನ್ನ ಮಾಡುವ ರೀತಿಯಲ್ಲೇ ಸರಿಯಾಗಿ ನಿರ್ವಹಣೆ ಮಾಡಿ ನಿರ್ಮಾಣ ಮಾಡಿದರೆ ಕನಿಷ್ಠ 50 ವರ್ಷವಾದರೂ ಬಾಳಿಕೆ ಬರುತ್ತೆ. ಆದರೆ ಸಿಮೆಂಟಿನ ರಸ್ತೆಗಳನ್ನ ನಿರ್ಮಾಣ ಮಾಡುವ ರೀತಿಯಲ್ಲೇ ನಿರ್ಮಾಣ ಮಾಡಲಾಗುತ್ತಿದೆಯೇ ಎಂಬುದು ಪ್ರಶ್ನೆ..? ಮಿತ್ರರೇ ನೆನಪಿರಲಿ ಈ ಡಾಂಬರಿನ ರಸ್ತೆಯ ನಿಮಿತ್ಯ ನಾವು ಕಟ್ಟಿದ ತೆರಿಗೆಯ ಅದೆಷ್ಟೋ ಕೋಟ್ಯಂತರ ರೂಪಾಯಿಗಳು ವ್ಯರ್ಥ ನೀರಿನ ಪಾಲಾಗಿವೆ . ಕಾಂಕ್ರೀಟಿನ ರಸ್ತೆಯ ನಿರ್ಮಾಣದಲ್ಲಿ ಮತ್ತೆ ಹೀಗೆಯೇ ಆಗುವದು ಬೇಡ. ಈಗಲಾದರೂ ಜಾಗ್ರತವಾಗೋಣ ನಮ್ಮ ತೆರಿಗೆ ರೂಪದ ಹಣ ವ್ಯರ್ಥವಾಗುವ ಮುನ್ನ ತಡೆಯುವ ಪ್ರಯತ್ನ ಮಾಡೋಣ. ಹಾಗಾದರೆ ಬನ್ನಿ ಕಾಂಕ್ರೀಟಿನಿ ರಸ್ತೆಯ ನಿರ್ಮಾಣದ ಕುರಿತು ಅರಿಯೋಣ .
ಕಾಂಕ್ರಿಟ್ ರಸ್ತೆಯ ಕಥೆ
ಯಾವದೇ ಒಂದು ಕೆಲಸಕ್ಕೆ ಒಟ್ಟು ಸರಕಾರದಿಂದ ಬಿಡುಗಡೆಯಾದ ಅನುದಾನದ ಮೊತ್ತಕ್ಕಿಂತ ಕನಿಷ್ಠ 20 ರಿಂದ 25%ನಷ್ಟು ಕಡಿಮೆ ದರದಲ್ಲಿ ಕಾಮಗಾರಿಯ ಟೆಂಡರ್ ನಿಗದಿಯಾಗುತ್ತೆ. ಅದರಲ್ಲಿ 15 % ಕನಿಷ್ಠ ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾಲಾಗುತ್ತದೆ. ಇನ್ನು ಕಡಿಮೆ ಎಂದರು 10% ನಷ್ಟು ಮೊತ್ತ ಕಾಮಗಾರಿ ಪಡೆದುಕೊಂಡವನ ಪಾಲಾಗುತ್ತದೆ. ನೆನಪಿರಲಿ ಇವೆಲ್ಲವೂ ಹೇಳಿದ್ದು ಕನಿಷ್ಠ ಮೊತ್ತದಲ್ಲಿ. ಒಟ್ನಲ್ಲಿ ಬಿಡುಗಡೆಯಾದ ಅನುದಾನದ ಒಟ್ಟು ಮೊತ್ತದ ಅರ್ಧದಷ್ಟು ಹಣ ಮಾತ್ರ ಕಾಮಗಾರಿಯಲ್ಲಿ ಬಳಕೆಯಾಗುತ್ತೆ . ಅಲ್ಲಿಯೂ ಸಹ ಅಸಮರ್ಥ ಕಾರ್ಯಾಗಾರ ಹಾಗೂ ಗುಣಮಟ್ಟದ ಪರಿಣಾಮ 10% ನಷ್ಟು ಕೆಲಸ ವ್ಯರ್ಥ . ಹೆಚ್ಚು ಕಡಿಮೆ ನಾವು ಒಂದು ಅನುದಾನಿತ ಕಾಂಕ್ರೀಟ್ ರಸ್ತೆಯ 40% ನಷ್ಟು ಮಾತ್ರ ನಿರೀಕ್ಷಿಸಬಹುದು ಅಷ್ಟೇ.
ಇಂತಹ ಗುಣಮಟ್ಟದಲ್ಲಿ ನಡೆದ ಕಾಮಗಾರಿ ಐವತ್ತು ಆರವತ್ತು ವರ್ಷ ಬಾಳಿಕೆ ಬರತ್ತೆ ಅಂತ ಅನಿಸುತ್ತೆಯಾ..?
ಮೊದಲನೆಯದಾಗಿ ಯಾವದೇ ಕಾಂಕ್ರೀಟ್ ನಿರ್ಮಾಣವಾದರು ಸರಿ ಅದನ್ನ ಮೊನೊಲಿಥಿಕ್ ಕಾಸ್ಟಿಂಗ್ ( monolithic casting process) ನಿಯಮದಲ್ಲೇ ನಿರ್ಮಿಸಬೇಕು . ಇದರ ಅರ್ಥ ಸ್ಪಷ್ಟವಾಗಿದೆ ಕಾಂಕ್ರೀಟ್ ಅನ್ನು ಒಂದೇ ಬಾರಿಗೆ ಮಾಡಿ ಮುಗಿಸಬೇಕು. ಒಮ್ಮೆ ಕಾಂಕ್ರೀಟ್ ನಿರ್ಮಾಣವಾಯುತೆಂದರೆ ಆಮೇಲೆ ಅದನ್ನ ಗಟ್ಟಿಗೊಳಿಸುವ ಪ್ರಕಿಯೆಯಾಗಲಿ ಅಥವಾ ಅದನ್ನ ಬದಲಾವಣೆ ಅಥವಾ ಮರುಕಾಮಗಾರಿಯಗಲಿ ಎಲ್ಲವೂ ವ್ಯರ್ಥ. ಒಮ್ಮೆ ಕಾಂಕ್ರೀಟ್ ನಿರ್ಮಾಣವತೆಂದರೆ 21 ದಿನಗಳ ಕಾಲ ಅದನ್ನು ನೀರುಣಿಸಬೇಕು. (curing process ) . ಇನ್ನು ಕಾಂಕ್ರೀಟ್ ಹಾಕುವಾಗ ಬಳಸುವ ಜೆಲ್ಲಿ ಕಲ್ಲು (ಖಡಿ) , ಮರಳು ಹಾಗೂ ಸಿಮೆಂಟಿನ ಮಿಶ್ರಣಕ್ಕೂ ಸಹ ಅದರದೇ ಆದ ರೀತಿ ನಿಯಮಗಳಿವೆ .ಮನಸ್ಸಿಗೆ ಬಂದಂತೆ ಮಿಶ್ರಣಗಳನ್ನ ಮಾಡಿ ಕಾಂಕ್ರೀಟುಗಳನ್ನ ಹಾಕುವದಲ್ಲ . ಕಾಂಕ್ರೀಟಿನ ಮಿಶ್ರಣಗಳು M10 ನಿಂದ M70 ವರೆಗಿನ ಶ್ರೇಣಿಗಳಲ್ಲಿ ಇವೆ . ಉದಾಹರಣೆಗೆ M20 ಕಾಂಕ್ರೀಟ್ ಎಂದರೆ 1(ಸಿಮೆಂಟು):1.5(ಮರಳು):3(ಜೆಲ್ಲಿ ಕಲ್ಲು) ಅನುಪಾತದಲ್ಲಿ ಮಿಶ್ರಣ ಮಾಡಬೇಕು . ಮನೆಗಳ ನಿರ್ಮಾಣಕ್ಕೆ ಹೆಚ್ಚಾಗಿ ಬಳಸುವದು M20 ಕಾಂಕ್ರೀಟು. ಮನೆಯ ನಿರ್ಮಾಣದ M20 ನೆ ಇಷ್ಟು ಬಾಳಿಕೆ ಮತ್ತು ಘಟ್ಟಿಯಾಗಿ ಬರುತ್ತೆ ಅಂದರೆ ಯೋಚಿಸಿ ರಸ್ತೆಯ ನಿರ್ಮಾಣಕ್ಕೆ ಬಳಸುವದು M25 ಮತ್ತು ಅದಕ್ಕೂ ಹೆಚ್ಚಿನ ಶ್ರೇಣಿಯನ್ನ. ಈಗೊಂದು ಪ್ರಶ್ನೆ ನಿಮ್ಮಲ್ಲಿ ಏಳತ್ತೆ ಕೆಲಸ ಮಾಡುವವನಿಗೆ ಇದೆಲ್ಲವನ್ನು ನೋಡುವ ಪುರಸೊತ್ತು ಎಲ್ಲಿರುತ್ತೆ ಅಂತ. ಇಂತವೆಲ್ಲ ವಿಚಾರಗಳನ್ನು ನೋಡಿಕೊಳ್ಳಲೆಂದೇ ಪ್ರತಿ ಪ್ರೊಜೆಕ್ಟ್ ಗೂ ಸಹ ಒಬ್ಬ ಟೆಕ್ನಿಕಲ್ (technical) ಮನುಷ್ಯ ಇರುವದು ಕಡ್ಡಾಯ. ಮುಂದಿನ ಬಾರಿ ನಿಮ್ಮ ಮನೆಯ ಮುಂದೆ ಅಥವಾ ಇನ್ನೆಲ್ಲೋ ಕೆಲಸ ನಡೆಯಬೇಕಾದರೆ ತಪ್ಪದೆ ಕೇಳಿ ಎಲ್ಲಿ ಟೆಕ್ನಿಕಲ್ ಟೀಮು ಅಂತ..? ಒಮ್ಮೆ ನನ್ನ ಮನೆಯ ಮುಂದೆ ಕಾಂಕ್ರೀಟಿನ ರಸ್ತೆ ನಿರ್ಮಾಣವಾಯಿತು ಅಂದ್ರೇ ಮತ್ತೆ ನನ್ನ ಜೀವಮಾನಪೂರ್ತಿ ರಸ್ತೆಯ ನಿರ್ಮಾಣವಾಗುವದನ್ನು ನಾನು ನೋಡಬಾರದು. ಇವತ್ತಿನ ದಿನಗಳಲ್ಲಿ ಹೀಗೆ ಆಗುದಕ್ಕೆ ಸಾಧ್ಯ ಇದೆಯಾ..? ಕಾಂಕ್ರೀಟಿನ ರಸ್ತೆಯ ನಿರ್ಮಾಣದಲ್ಲಿ ಇಷ್ಟೇ ಇಂಚಿನ ದಪ್ಪದಾಗಿರಬೇಕು ಎಂಬ ನಿಯಮ. ಇಲ್ಲಿಯೂ ಸಹ ಏನಾಗತ್ತೆ ಗೊತ್ತಾ ಉದಾಹರಣೆಗೆ 8 ಇಂಚಿನ ಕಾಂಕ್ರೀಟ್ ರಸ್ತೆ ಎಂದುಕೊಳ್ಳೋಣ ಎರಡು ಬದುಯಲ್ಲಿ ರಸ್ತೆ 8 ಇಂಚಿನ ಎತ್ತರ ತೋರಿಸಿ ಆದರೆ ರಸ್ತೆಯ ಮಧ್ಯೆದಲ್ಲಿ 6 , 7 ಅಥವಾ ಇನ್ನು ಕಡಿಮೆ ಎತ್ತರದ ಕಾಂಕ್ರಿಟವನ್ನು ಹಾಕಲಾಗುತ್ತೆ. ಇಲ್ಲಿ ಇನ್ನೊಂದು ಕಡ್ಡಾಯವಾಗಿ ಗಮನಿಸಲೇ ಬೇಕಾದ ಸಂಗತಿ ಏನೆಯೆಂದರೆ , ಒಳಚರಂಡಿ , UG ಕೇಬಲ್ ಹಾಗೂ ನೀರಿನ ಪೈಪುಗಳ ಕೆಲಸ ಕಾಂಕ್ರೀಟ್ ರಸ್ತೆಯ ನಿರ್ಮಾದಣ ಮೊದಲೇ ಆಗಬೇಕು, ಇಲ್ಲವಾದಲ್ಲಿ ಇವಗಳ ನೆಪ ಇಟ್ಟು ನಿರ್ಮಿಸದ ರಸ್ತೆಗಳನ್ನು ಒಡೆದು ಅಲ್ಲಿ ಇನ್ನಿಷ್ಟು ಹಣದ ವ್ಯರ್ಥ ಪೋಲಾಗುವದಲ್ಲದೆ , ನಿಮ್ಮ ರಸ್ತೆಯ ಕಥೆಯೂ ಹರೋ ಹರ ಆಗಿರತ್ತೆ. ಇವೆಲ್ಲ ಸತ್ಯದ ಅರಿವಾಗುತ್ತಿದ್ದಂತೆ ಬೆಂಕಿ ಹತ್ತಿದಂತೆಯಾಗುತ್ತದೆಯಲ್ಲವೇ. ಖಂಡಿತವಾಗಿಯೂ ಆಗಲೇ ಬೇಕು ಯಾಕಂದ್ರೆ ವ್ಯರ್ಥವಾಗುತ್ತಿರುವದು ನಮ್ಮ ದುಡ್ಡಲ್ಲವೆ. ಮಿತ್ರರೇ ಯೋಚಿಸಿ ಇಷ್ಟು ವರ್ಷಗಳ ಕಾಲ ಹೀಗೆಯೇ ಮೋಸ ಹೋಗಿದ್ದೀವಿ ನಾವು ಹೀಗೆಯೇ ಬೇರೆ ಬೇರೆ ರೀತಿಯಲ್ಲಿ ವಂಚಿಸಿ ನಮ್ಮನ್ನ ಕೊಳ್ಳೆ ಹೊಡೆದು ಬಿಟ್ಟಿದ್ದಾರೆ. ಇಲ್ಲಿ ಹೇಳಿದ ಯಾವ ಸಂಗತಿಗಳು ಸಹ ಯಾರಿಗೂ ತಿಳಿಯದೆ ಇರುವಂತ ಸಂಗತಿಗಳೇನಲ್ಲ. ಯಾವದೇ ಒಬ್ಬ ಸಿವಿಲ್ ಇಂಜಿನಿಯರ್ ಅಥವಾ ಸಿವಿಲ್ ಡಿಪ್ಲೊಮಾ ಓದಿದ ವಿದ್ಯಾರ್ಥಿಗಳನ್ನ ನಿಲ್ಲಿಸಿ ಒಂದೈದು ನಿಮಿಷ ನಿಲ್ಲಿಸಿ ಕೇಳಿದರೆ ಆತ ಎಲ್ಲವನ್ನು ನಿಮಗೆ ತಿಳಿಸಿಕೊಟ್ಟುಬಿಡುತ್ತಾನೆ.ಯಾವದೇ ಕಾಮಗಾರಿಯಾದರು ಸರಿ ಟೆಂಡರ್ ಪಡೆದವನ ಹಾಗೂ ಕಾಮಗಾರಿಯ ಎಲ್ಲ ವರದಿಗಳನ್ನು ಪಡೆಯುವ ಅಧಿಕಾರ ನಮಗೆಲ್ಲರಿಗೂ ಇದೆ. ಈಗಲಾದರೂ ಎಚ್ಚರವಾಗೋಣ ನಮ್ಮವರಿಂದಲೇ ನಾವು ಲೂಟಿಯಾಗೋದನ್ನ ಮೋಸ ಹೋಗುವದನ್ನ ನಿಲ್ಲಿಸೋಣ.