Total Pageviews
Sunday, August 22, 2021
ಈ ಬಾರಿ ಮತದಾರ ನಿಜಕ್ಕೂ ಗೊಂಧಲಕ್ಕೆ ಒಳಗಾಗಿ ಬಿಟ್ಟಿದ್ದಾನೆ.ಯಾಕೆ ಗೊತ್ತಾ..?
Saturday, July 17, 2021
ಶಿವರಾಮ್ ಹೆಬ್ಬಾರ್ ಅವರೇ ಮುಂದಿನ ಬಾರಿಗೆ ಮತ ಕೇಳಲು ಬರುವ ಮುನ್ನ ಈ ಪತ್ರವನ್ನೊಮ್ಮೆ ಪೂರ್ತಿಯಾಗಿ ಓದಿಬಿಡಿ..!
2018 ರ ವಿಧಾನಸಭಾ ಚುನಾವಣೆಯಲ್ಲಿ 66290 ಮತಗಳನ್ನು ಪಡೆದು, ಕೇವಲ ಸಾವಿರದ ನಾಲ್ಕನೂರು ಚಿಲ್ಲರೆ ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆದ್ದು ತಮ್ಮ ಕುರ್ಚಿಯನ್ನ ಭದ್ರವಾಗಿಸಿಕೊಂಡಿದ್ದೀರಿ.ಭಿನ್ನಮತದ ಮಹಾಸ್ಫೋಟವೋ ಅಥವಾ ಇನ್ನೊಂದು ಕಾರಣವೋ ತಮ್ಮನ್ನ ಸಾಕಿ ಬೆಳೆಸಿದ ಪಕ್ಷವನ್ನ ತ್ಯಜಿಸಿ,ಗೆದ್ದು ಬಂದ ಕುರ್ಚಿಗೆ ರಾಜಿನಾಮೆಯನ್ನ ನೀಡಿ, ತಮ್ಮ ರಾಜಕೀಯದ ಜೀವನವನ್ನ ದಾವೆಗೆ ಹಚ್ಚಿ 2019ರ ಉಪಚುನಾವಣೆಗೆ ತಯಾರಾದ್ರಿ ,ನಿಮ್ಮ ಕ್ಷೇತ್ರದ ಜನ ನಿಮ್ಮ ಕೈ ಬಿಡಲಿಲ್ಲ 80442 ಮತಗಳನ್ನು ಪಡೆಯುವ ಮೂಲಕ ಭರ್ಜರಿ 31 ಸಾವಿರದ ಚಿಲ್ಲರೆ ಅಂತರದಿಂದ ಜಯಭೇರಿಯನ್ನ ಬಾರಿಸಿದ್ರಿ. ಅಲ್ಲಿಂದ ಮುಂದಕ್ಕೆ ತಾವು ಮುಟ್ಟಿದ್ದೆಲ್ಲ ಚಿನ್ನವೇ ಎಂಬುವಂತೆ ಪಟ್ಟಣ ಪಂಚಾಯತ್ ನಿಂದ ಹಿಡಿದು ಗ್ರಾಮ ಪಂಚಾಯತ್ ವರೆಗೂ ತಮ್ಮ ನೇತೃತ್ವದಲ್ಲಿ ಗೆಲುವಿನ ನಾಗಾಲೋಟವನ್ನೇ ನಡೆಸುತ್ತಾ ಸಾಗಿದ್ದೀರಿ.ಇಷ್ಟೆಲ್ಲ ನೀಡಿದ ನಿಮ್ಮ ಕ್ಷೇತ್ರದ ಮತದಾರನಿಗೆ ತಾವು ಏನನ್ನು ಮಾಡಿದ್ದೀರಿ ಎಂಬುದನ್ನು ಎಂದಿಗಾದರು ತಮ್ಮನ್ನು ತಾವು ಪರಾಮರ್ಶಿಸಿಕೊಂಡಿದ್ದಿರ..? ತಮಗೆ ಎಲ್ಲವನ್ನು ಕೊಟ್ಟ ಮತದಾರನ ಗೋಳನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೀರಾ..? ನಿಜಕ್ಕೂ ನಿಮ್ಮ ಕ್ಷೇತ್ರದ ಮತದಾರ ಸಂತುಷ್ಟನಾಗಿದ್ದಾನ..?
ಈ ಸುಣ್ಣ ಮತ್ತು ಬೆಣ್ಣೆಯ ಆಟವನ್ನ ಮುಂಡಗೋಡಿನ ಮತದಾರ ದೇಶಪಾಂಡೆಯವರ ಕಾಲದಿಂದಲೂ ನೋಡುತ್ತಾ ನೋಡುತ್ತಾ ರೋಸಿ ಹೋಗಿದ್ದಾನೆ ,ಅಭಿವೃದ್ಧಿಯಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಮುಂಡಗೋಡ ಕುಂಟು ಕುದುರೆಯ ಹಾಗೆ ಕುಂಟುತ್ತಲೇ ಸಾಗಿದೆ. ನಮ್ಮ ದುರಾದೃಷ್ಟಕ್ಕೆ ದೂರದ್ರಷ್ಟಿಯುಳ್ಳ ನಾಯಕ ,ಮುಂಡಗೋಡವನ್ನ ಎಲ್ಲಾ ರೀತಿಯಿಂದಲೂ ಸಕ್ಷಮಗೊಳಿಸುವಂತೆ ಕನಸು ಕಂಡು ನಿಶ್ಚಿತ ಗುರಿಯೊಂದಿಗೆ ಕೆಲಸ ಮಾಡುವ ನಾಯಕ ನಮಗೆಂದಿಗೂ ದೊರಕಲೆ ಇಲ್ಲ. ದೊಡ್ಡ ದೊಡ್ಡ ಕನಸಗಳು ದೂರದ ಮಾತು ಮೂಲಭೂತ ಸೌಕರ್ಯಗಳೇ ಸರಿಯಾಗಿ ದೊರಕದೆ ಕ್ಷೇತ್ರದ ಮತದಾರ ಇಂದಿಗೂ ಪರದಾಡುತ್ತಿದ್ದಾನೆ.ಇಷ್ಟು ವರ್ಷಗಳಿಂದ ಕನಿಷ್ಠ ವಾರಕ್ಕೆರಡು ಬಾರಿ ನೀವೇ ಸಂಚರಿಸುವ ನಿಮ್ಮದೇ ಕ್ಷೇತ್ರದ ಯಲ್ಲಾಪುರ - ಮುಂಡಗೋಡ ರಸ್ತೆಯ ಅವಸ್ಥೆಯನ್ನ ಕಂಡು ಇದನ್ನ ಸರಿಪಡಿಸಬೇಕೆಂದು ಯಾವತ್ತಿಗೂ ನಿಮಗೆ ಅನಿಸಲೇ ಇಲ್ವಾ..? ಇದೆ ರಸ್ತೆಯ ಕಾರಣಕ್ಕೆ ಪಕ್ಷದ ಯುವ ಕಾರ್ಯಕರ್ತನೊಬ್ಬ ಪ್ರಾಣಬಿಟ್ಟನಲ್ಲ ಆ ರಸ್ತೆ ಈಗಲೂ ಸಹ ಅಷ್ಟೇ ಖರಾಬಾಗಿದೆ ,ಮುಂಡಗೋಡವನ್ನ ಸಂಪರ್ಕಿಸುವ ಯಾವ ರಸ್ತೆ ಸುಸಜ್ಜಿತವಾಗಿ ,ಸಂಚರಿಸಲು ಯೋಗ್ಯವಾಗಿದೆ ಹೇಳಿ..? ರಸ್ತೆಯ ಕಥೆ ಹೀಗಾದರೆ ಬೀದಿ ದೀಪಗಳನ್ನ ಸರಿಪಡಿಸಬೇಕೆಂದು ಪತ್ರಿಕೆಗಳು ಸುದ್ದಿ ಮಾಡಬೇಕು ,ಜನರು ಬಾಯಿ ಬಾಯಿ ಬಡೆದುಕೊಂಡರು ಯಾರೊಬ್ಬನು ಸಹ ಕ್ಯಾರೆ ಎನ್ನಲಿಲ್ಲ .ಇನ್ನೂ 24×7 ನೀರಿನ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂಡಗೋಡಿನ ಯಾವುದೇ ಸರಕಾರಿ ಕಚೇರಿಯಲ್ಲಿ ಅದ್ಯಾವುದೇ ಕೆಲಸಕ್ಕೆ ಅದ್ಯಾರೆ ಹೋದರು ಸಹ ಮರಳಿ ಬರುವಾಗ ಹಿಡಿ ಶಾಪ ಹಾಕುತ್ತಲೇ ಮರಳಿ ಬರುತ್ತಾನೆಂದರೆ ಅದ್ಯಾವ ಪರಿಯ ವಾತಾವರಣ ಅಲ್ಲಿ ಸ್ರಷ್ಟಿಯಾಗಿರಬೇಕು ನೀವೇ ಸ್ವಲ್ಪ ಯೋಚಿಸಿ ನೋಡಿ.ಇನ್ನು ಮುಂಡಗೋಡಿನ ಬಸ್ ಸ್ಟಾಂಡ್ ನಿರ್ಮಾಣದಲ್ಲಿ ನಿಮ್ಮ ಪಾತ್ರ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿದ್ದೇ ಇದೆ ಬಿಡಿ.ಇವೆಲ್ಲ ಅಗತ್ಯ ಹಾಗೂ ಮೂಲಭೂತ ಸೌಕರ್ಯಗಳೇ ,ಮಾಡಲು ಕಷ್ಟ ಸಾಧ್ಯ ಎನ್ನುವಂತಹದ್ದು ಯಾವುದು ಇಲ್ಲ .ನಿಮ್ಮ ಟೇಬಲ್ ಮೇಲಿನ ಬಿಸಿ ಬಿಸಿ ಕಾಫಿ ಕಪ್ಪು ತಣ್ಣಗಾಗುವುದರ ವೇಳೆಗೆ ತಾವಿದನ್ನ ಸರಿ ಪಡಿಸಿಬಿಡಬಹುದು.ಇವಿಷ್ಟೇ ಕೆಲಸಗಳನ್ನು ಮಾಡಿದ್ರು ಸಾಕು ಮುಂಡಗೋಡಿಗರ ಪಾಲಿಗೆ ತಾವು ಅಸಲಿ ಹೀರೊ ಆಗಿಬಿಡ್ತೀರಿ ಮಾನ್ಯ ಹೆಬ್ಬಾರ್ ಅವರೇ ಒಮ್ಮೆ ಯೋಚಿಸಿ ನೋಡಿ ಈ ದಿಕ್ಕಿನತ್ತ.
ಒಂದು ಪ್ರದೇಶವನ್ನ ಬೆಳೆಸಬೇಕು ಸುಧಾರಿಸಬೇಕು ಅಂತಾದರೆ ಎಲ್ಲಕ್ಕಿಂತ ಮೂಲ ಅಗತ್ಯದಲ್ಲಿ ಅಲ್ಲಿಯ ಜನರಿಗೆ ನೀಡಬೇಕಿರುವುದು ಶಿಕ್ಷಣವನ್ನ ,ಜನ ಶಿಕ್ಷಿತರಾದರೆ ಮಿಕ್ಕೆಲ್ಲ ಕೆಲಸಗಳು ಸ್ವಯಂ ಚಾಲಿತವಾಗಿ ತನ್ನಷ್ಟಕ್ಕೆ ತಾನೇ ನಡೆಯುತ್ತ ಹೊರಟು ಬಿಡುತ್ತವೆ ,ಸಂಘದಲ್ಲಿ ಶಿಕ್ಷಣ ಪಡೆದು ಬೆಳೆದು ಬಂದ ತಮಗೆ ಈ ವಿಷಯ ತುಂಬಾ ಚೆನ್ನಾಗಿ ತಿಳಿದಿದೆ ಅಂತ ಅನ್ಕೊಂತಿನಿ.ಎಲ್ಲಕ್ಕಿಂತ ಮೊದಲು ಶಿಕ್ಷಣವಾದರೆ ಕ್ರಮವಾಗಿ ಆರೋಗ್ಯ ,ಕ್ರೀಡೆ ,ಧಾರ್ಮಿಕ ಮತ್ತು ಕಲೆ ಅಥವಾ ಸಾಂಸ್ಕ್ರತಿಕ ಇವುಗಳೆಲ್ಲವು ವ್ಯವಸ್ಥಿತವಾಗಿ ನಡೆಯುವಾಗ ಮಾತ್ರ ಒಂದು ಪ್ರದೇಶ ವ್ಯವಸ್ಥಿತವಾಗಿ ಬೆಳೆದು ನಿಂತು ತನ್ನ ಛಾಪನ್ನು ಮೂಡಿಸಲು ಸಾಧ್ಯ.
ಶಿಕ್ಷಣದಲ್ಲಿ ವಿಚಾರ ಮಾಡಿದಾಗ ಮುಂಡಗೋಡ ಬಹು ಹಿಂದಕ್ಕೆ ನಿಂತು ಬಿಟ್ಟಿದ್ದೆ ,ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣವನ್ನ ಅರ್ಧಕ್ಕೆ ಮೊಟಕುಗಳಿಸಿದರೆ ಇನ್ನುಳಿದವರಿಗೆ ಬೇರೆ ಆಯ್ಕೆಗಳೇ ಇಲ್ಲ ,ಪಟ್ಟಣದಲ್ಲಿ ಇರುವ ಸರ್ಕಾರಿ ಕಾಲೇಜಿನಲ್ಲಿ ,ಹೈಸ್ಕೂಲು ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನ ಲೆಕ್ಕ ಹಾಕಿದರೆ ವರ್ಷಕ್ಕೆ ಸುಮಾರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಾ ಇದ್ದಾರೆ ನಾವು ಕಲೆಯುತ್ತಿರುವಾಗಲೆ ಒಂದು ಡೆಸ್ಕ್ ಗೆ ಮೂರು ಜನ ಕೂತು ಕಲೆತಿದ್ದಿವೆ ಇನ್ನೂ ಈಗಿರುವ ಪರಿಸ್ಥಿತಿಯನ್ನ ನೀವೇ ಅವಲೋಕಿಸಬೇಕು.ಮುಂಡಗೋಡಿನಲ್ಲಿ ಐಟಿಐ ಮತ್ತು ಡಿಪ್ಲೊಮಾ ಕಾಲೇಜುಗಳು ಇರುವುದೇನೋ ನಿಜ ಆದರೆ ಅಲ್ಲಿ ಸಕಲ ವ್ಯವಸ್ಥೆಯು ಸರಿಯಾಗಿದೆಯ..? ಅಲ್ಲಿಂದ ಕಲೆತು ಆಚೆ ಬಂದ ವಿದ್ಯಾರ್ಥಿಗಳು ಈಗಿನ ಕಾಲಮಾನಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಬಹುದ ಖಂಡಿತವಾಗ್ಲೂ ಇಲ್ಲ.ಕೇವಲ ಕಾಲೇಜನ್ನು ಕಟ್ಟಿ ಉದ್ಘಾಟನೆ ಮಾಡಿದ್ರೆ ಕೆಲಸ ಮುಗಿಯಲಿಲ್ಲ ಚಾಲೆಂಜ್ ಆಗಿ ಸ್ವೀಕರಿಸಿ ಅಲ್ಲಿ ಬೇಕಾಗಿರುವ ಸಕಲ ಸಲಕರಣೆಗಳನ್ನು ಒದಗಿಸಿ ಉತ್ತಮ ಮೇಲ್ದರ್ಜೆಗೆ ಮಾರ್ಪಡಿಸಿ ಕಾಲೇಜುಗಳನ್ನ ಕರ್ನಾಟಕದಲ್ಲೇ ನಂಬರ್ ಒನ್ ಮಾಡಿ ಇಲ್ಲಿಂದ ಕಲೆತು ಹೋದಂತಹ ವಿದ್ಯಾರ್ಥಿಗಳು ಸದ್ದು ಮಾಡಲು ಶುರುಮಾಡಿ ನಿಮ್ಮ ಒಂದಿಷ್ಟು ಪ್ರಯತ್ನದಿಂದ ಒಂದೆರಡು ಒಳ್ಳೆಯ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ಗೆ ಅಂತ ಬರಲು ಶುರುಮಾಡಿ ಉದ್ಯೋಗಗಳು ಸ್ರಷ್ಟಿಯಾದರೆ ಅಲ್ಲಿಗೆ ಅದು ಸಾರ್ಥಕವಾಗತ್ತೆ.
ನೀವು ಕೆಲಸ ಮಾಡುತ್ತಿಲ್ಲ ಅಂತ ಹೇಳ್ತಿಲ್ಲ ಆದ್ರೆ ಮಾಡುವ ಕೆಲಸ ಇನ್ನೂ ಸಾಕಷ್ಟಿದೆ ಅಂತ. ಸ್ವಾತಂತ್ರ್ಯದ ನಂತರ ಇಷ್ಟೊಂದು ವರ್ಷಗಳು ಕಳೆದರೂ ಸಹ ನಾವಿನ್ನೂ ಮೂಲಭೂತ ಸೌಕರ್ಯಗಳಿಗೆ ಹೋರಾಡುವ ಪರಿಸ್ಥಿತಿ ಇದೆಯಲ್ಲ ಇದಕ್ಕಿಂತ ಖೇದಕರ ಸಂಗತಿ ಮತ್ತೊಂದಿಲ್ಲ.ನಾವು ಇಲ್ಲಿಂದ ಮುಂದಕ್ಕೆ ಹೋಗೋದು ಯಾವಾಗ..? ಕಳೆದೆರಡು ವರ್ಷಗಳಿಂದ ಕೋರೊನಾ ತಂದೊಡ್ಡಿದ ಸವಾಲು ಬಹು ಕಷ್ಟಕರವಾಗಿತ್ತು ,ಇಂತಹ ಕಠಿಣ ಸಮಯದಲ್ಲೂ ತಾವು ಆ ಸವಾಲುಗಳನ್ನೆಲ್ಲ ಎದುರಿಸಿ ನಿಂತು ತಮ್ಮ ಕ್ಷೇತ್ರದ ಜನತೆಗೆ ಜೊತೆಯಾಗಿ ನಿಂತಿದ್ದೀರಿ.ಕಷ್ಟ ಅಂತ ಬಂದವರ ಕೈ ಯಾವತ್ತಿಗೂ ಬಿಟ್ಟಿಲ್ಲ , ನಿಮ್ಮ ಗಮನಕ್ಕೆ ಬಂದ ಸಮಸ್ಯೆಗಳಿಗೆ ನೀವು ತತ್ ಕ್ಷಣ ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೀರಿ,ಇತ್ತೀಚಿಗೆ ಆಧಾರ್ ಕಾರ್ಡ್ ಸಮಸ್ಯೆಗೆ ತುರ್ತಾಗಿ ತಾವು ತೆಗೆದುಕೊಂಡ ಕ್ರಮವೇ ಸಾಕ್ಷಿ.ಒಂದು ಕ್ಷೇತ್ರದ ನಾಯಕನಲ್ಲಿರುವ ಅವಶ್ಯ ಗುಣಗಳು ನಿಮ್ಮಲ್ಲಿವೆ.ಆದರೆ ಒಂದಿಷ್ಟು ದೂರದ್ರಷ್ಟಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಅದಕ್ಕಾಗಿ ಕೆಲಸ ಮಾಡಿ.ನಾವು ಹೆಚ್ಚೇನೂ ಕೇಳುತ್ತಿಲ್ಲ ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಸಕಲ ಸೌಕರ್ಯಗಳನ್ನು ಮಾಡಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚುಸಿ ,ಯಾವುದಾದ್ರು ದೊಡ್ಡಮಟ್ಟದ ಇನ್ಸ್ಟಿಟ್ಯೂಟ್ ಗಳು ತರುವುದಕ್ಕೆ ಅಗತ್ತ ಒಮ್ಮೆ ಪ್ರಯತ್ನ ಮಾಡಿ.ಯಾವುದೇ ಒಬ್ಬ ವಿದ್ಯಾರ್ಥಿಗಳು ಅರ್ಧಕ್ಕೆ ಶಾಲೆ ಬಿಡಲಾರದಂತೆ ಒಂದು ವ್ಯವಸ್ಥೆ ರೂಪಿಸಿ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಿ.ಇನ್ನು ರಸ್ತೆ ,ಚರಂಡಿ ,ವಿದ್ಯುತ್ ಇವುಗಳಲ್ಲಿ ಯಾವುದೇ ರಾಜಿ ಬೇಡ ,ಓಮ್ಮೆ ಇವುಗಳ ಸಮಸ್ಯೆ ಸರಿಯಾಗಿ ಬಿಡಲಿ,ಯಾವುದೇ ಸರ್ಕಾರಿ ಅಥವಾ ಇಲಾಖೆಗಳಲ್ಲಿ ಜನರ ಕೆಲಸಗಳನ್ನು ಸಲೀಸಾಗಿ ಆಗುವಂತೆ ನೋಡಿಕೊಳ್ಳಿ ಇದರಿಂದ ಜನ ಹಗಲು ರಾತ್ರಿ ಸರ್ಕಾರಿ ಕಛೇರಿಗಳಿಗೆ ಅಲೆಯುವುದು ತಪ್ಪಿ ಜನ ನಿಶ್ಚಿಂತೆಯಿಂದ ಇರುವಂತಾಗಲಿ.ಪಟ್ಟಣದ ಅಮ್ಮಾಜಿ ಕೆರೆ ಅದು ಮುಂಡಗೋಡಿನ ಪ್ರಾಕೃತಿಕ ಸೌಂದರ್ಯವನ್ನು ಹೆಚ್ಚಿಸುತ್ತೆ ಅದರ ಸುಧಾರಣೆಗಾಗಿ ಕೆಲಸಗಳಾಗಲಿ.ದೊಡ್ಡ ದೊಡ್ಡ ಕೈಗಾರಿಕೆಗಳು ಬೇಕು ಅಂತ ಕೇಳುತ್ತಿಲ್ಲ ,ಚಿಕ್ಕ ಪುಟ್ಟ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ಅವರ ಪ್ರಾಡಕ್ಟ್ ಗಳಿಗೆ ನೀವೇ ಬ್ರಾಂಡ್ ಅಂಬಾಸಿಡರ್ ಆಗಿ. ಇನ್ನು ಬಸ್ ಸ್ಟಾಂಡ್ ವಿಚಾರದಲ್ಲಂತೂ ಜನ ರೋಸಿ ಹೋಗಿದ್ದಾರೆ ,ತಾಳ್ಮೆಯ ಕಟ್ಟೆ ಒಡೆದು ಹೋಗಿದೆ ಈ ವಿಚಾರದಲ್ಲಿ ಆದಷ್ಟು ಬೇಗ ಇದನ್ನೊಂದು ಮಾಡಿ ಮುಗಿಸಿಬಿಡಿ.ಆಶ್ರಯ ಯೋಜನೆಯಲ್ಲಿ ಮನೆಗಳನ್ನ ಅರ್ಧ ಕಟ್ಟಿಕೊಂಡು ,ದುಡ್ಡು ಬರುತ್ತದೆ ಅಂತ ಸಾಲ ಮಾಡಿ ಜನ ಪರಿತಪಿಸುತ್ತಿದ್ದಾರೆ ಇದಕ್ಕೊಂದು ನಿಶ್ಚಿತ ಪರಿಹಾರ ಆಗಲೇಬೇಕು.ಸ್ವಲ್ಪ ಸಹಾಯ ಹಾಗೂ ಸರಿಯಾದ ಮಾರ್ಗದರ್ಶನ ಸಿಕ್ಕರೆ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಹ ಕ್ರೀಡಾಳುಗಳು ನಮ್ಮಲ್ಲಿ ಇದಾರೆ ಯಾವುದಾದ್ರು ಒಂದು ನಿಧಿಯಿಂದ ಅವರಿಗೆ ಬೇಕಾದ ಸೌಲಭ್ಯಗಳು ದೊರೆಯುವಂತಾಗಲಿ.
ಅಬ್ಬಾ ಹೇಳಿದ್ದೆಲ್ಲ ತುಸು ಜಾಸ್ತಿ ಆಯಿತ ಅಂತ..! ಪರವಾಗಿಲ್ಲ ಆಗದಿರುವ ಕೆಲಸಗಳನ್ನ ನಾನೇನು ಹೇಳಿಲ್ಲ,ಜನರಗಿರುವ ಸಮಸ್ಯೆಗಳನ್ನ ತಮ್ಮ ಮುಂದೆ ಬಿಚ್ಚಿ ಇಡ್ತಾ ಇದ್ದೇನೆ ಅಷ್ಟೆ ,ಇಂತವೆಲ್ಲ ಕೆಲಸ ಮಾಡಲು ಸಮಯ ತುಸು ಹೆಚ್ಚೇ ಬೇಕು ನಿಜ ,ನೀವೊಬ್ಬ ಪ್ರಭಾವಿ ರಾಜಕಾರಣಿ ಅನ್ನುವದರಲ್ಲಿ ಎರಡು ಮಾತಿಲ್ಲ , ನಿಮ್ಮ ನಂತರವು ಸಹ ನಿಮ್ಮ ಕೆಲಸಗಳು ಮಾತನಾಡುವಂತಿರಬೇಕು. ನಾನೇನು ವಿರೋಧ ಪಕ್ಷದವನಲ್ಲ ,ಸ್ವಪಕ್ಷ ದವನೂ ಅಲ್ಲ ,ಅಪ್ಪಟ ಮುಂಡಗೋಡಿಗ ನನ್ನೂರಿನ ಬಗ್ಗೆ ನನಗೆ ಅಪಾರವಾದ ಪ್ರೀತಿ ಇದೆ ,ಹಂಗೆ ಸಾಕಷ್ಟು ಕನಸುಗಳು ಸಹ ಇವೆ ಅವುಗಳಲ್ಲಿ ಒಂದಿಷ್ಟು ನಿಮ್ಮ ಗಮನಕ್ಕೆ ತಂದಿದ್ದೇನೆ ನೀವು ನಮ್ಮ ಕ್ಷೇತ್ರದ ನಾಯಕರು ಎಂಬ ಕಾರಣಕ್ಕೆ. ನಿಮ್ಮ ಗಮನಕ್ಕೆ ಬಂದ ಸಮಸ್ಯೆಗಳಿಗಾಗಿ ಕೆಲಸಗಳನ್ನು ನೀವು ನಿರ್ವಹಿಸುತ್ತೀರಿ ಎಂಬ ನಂಬಿಕೆಯ ಕಾರಣಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಕ್ಷೇತ್ರದ ಜನ ನಿಮ್ಮಿಂದ ಇಟ್ಟುಕೊಂಡ ನೀರೀಕ್ಷೆಗಳು ಏನೂ ಎಂಬುದು ನಿಮ್ಮ ಗಮನಕ್ಕೆ ಬರಲಿ ಎಂಬ ಕಾರಣಕ್ಕೆ..ಈ ಎಲ್ಲ ಕೆಲಸಗಳನ್ನು ನೀವು ಮಾಡಿ ಮಾಡದೆ ಇರಿ ಜನ ನಿಮ್ಮ ಕೈಯಂತೂ ಬಿಡುವದಿಲ್ಲ.ಅದಲ್ಲದೆ ಬೇರೆ ಆಯ್ಕೆಯೂ ಸಹ ಜನರ ಹತ್ತಿರವಿಲ್ಲವಲ್ಲ.
ಪವನ್ ಹೆಬ್ಬಾರೆ
ಮುಂಡಗೋಡ.
Wednesday, May 5, 2021
ಕೋರೊನಾ ಸೋಂಕು ಮುಂಡಗೋಡಿಗೆ ತಗುಲಿದ್ದು ಹೇಗೆ..? ಈಗಿನ ಪರಿಸ್ಥಿತಿಗೆ ಯಾರು ಕಾರಣ..?
ಕೋರೊನಾ ಮುಂಡಗೋಡಿನಲ್ಲಿ ತನ್ನ ರಣಕೇಕೆ ಹಾಕೋದಕ್ಕೆ ಈಗ ತಾನೇ ಶುರುಮಾಡಿದೆ ,ಎಷ್ಟು ಭಯಂಕರ ಈ ವೈರಸ್ಸು ಅನಿಸ್ತಾ ಇದೆ ,ದಿನಕ್ಕೊಂದರಂತೆ ಸಾವಿನ ಸುದ್ದಿಗಳು ಬರ್ತಾನೆ ಇವೆ..! ಯಾರು ಇದಕ್ಕೆಲ್ಲ ಕಾರಣ ಮೋದಿ.? ಯಡ್ಯೂರಪ್ಪ..? ಸಚಿವ ಹೆಬ್ಬಾರ್..? ಅಥವಾ ನಮ್ಮ ತಹಶೀಲ್ದಾರ್ ಶ್ರಿಧರ್ ಅವರ ಅಥವಾ ಸರ್ಕಾರಿ ಆಸ್ಪತ್ರೆಯ. ? ಇರಿ ಇರಿ ಒಂದ್ ನಿಮಿಷ , ನೀವ್ ನಿಮ್ಮ ತಲೆಲಿ ಅವರು ಹಾಗ್ ಮಾಡಿದ ,ತಪ್ಪು ಇವರದ್ದೇ ಅವರದ್ದೇ ಅಂತೆಲ್ಲ ಯೋಚಿಸೋಕೆ ಹೋಗಬೇಡಿ. ತಪ್ಪು ಅವರಾರದ್ದು ಅಲ್ಲ. ನನ್ನ ಪ್ರಕಾರ ಮೊದಲ ತಪ್ಪು ನಮ್ಮದೆ.
ಕಳೆದ ವರ್ಷ ಇದೆ ಸಮಯಕ್ಕೆ ಮೊದಲ ಹಂತದ ಲಾಕ್ಡೌನ್ ಮುಗಿಸಿ ,ಕೋರೊನಾ ಅಂದ್ರೆ ಹಂಗಂತೆ ,ಹಿಂಗಂತೆ ಎಂದು ಅಂತೆ ಕಂತೆಗಳ ಕಥೆ ಹೊಡೆಯುತ್ತ ಮನೇಲಿ ಕೂತಿದ್ವಿ .ಕೋರೊನಾ ಅಂದ್ರೆ ಎನೂ .? ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತೆ..? ಕೋರೊನಾ ಬಂದ್ರೆ ಚಿಕೆತ್ಸೆ ಏನೂ ಮಾಡಬೇಕು..? ಅದ್ಯಾವುದರ ಸ್ಪಷ್ಟವಾದ ಮಾಹಿತಿಯೇ ಇರಲಿಲ್ಲ . ಆದರೂ ಸಹ ಇಲ್ಲಿನ ಆಡಳಿತ ಮಂಡಳಿ ಸರ್ಕಾರ ಹಾಕಿದ ಎಲ್ಲ ಕೋವಿಡ್ ನಿಯಮಾವಳಿಗಳನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತ ನಡೆದಿತ್ತು ,ಅದ್ಯಾವ ಪರಿ ಶ್ರಿಧರ್ ಮುಂದಲಮನಿಯವರು ಮತ್ತು ಅವರ ತಂಡ ಕಾರ್ಯಪ್ರವತ್ತವಾಗಿತ್ತು ಎಂದರೆ ಕೊಪ್ಪ ಗ್ರಾಮದಲ್ಲಿ ಅಂತಿಮ ಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಕೊಂಡೊಯ್ದಿದ್ದ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತಂದಿಟ್ಟಿದ್ದರು, ವ್ಯಕ್ತಿಗೆ ಸಾಯುವ ಮುನ್ನ ಜ್ವರ ಇತ್ತು ಎನ್ನುವ ಕಾರಣಕ್ಕೆ .ಆತನ ಕೋರೊನಾ ವರದಿ ಬಂದಮೇಲೆಯೇ ,ಶವವನ್ನ ಬಿಟ್ಟುಕೊಟ್ಟಿದ್ದರು (ವರದಿ ನೆಗೆಟಿವ್ ಎಂದು ಬಂದಿತ್ತು) ಅನ್ಯ ರಾಜ್ಯಗಳಿಂದ ಬಂದವರನ್ನೆಲ್ಲ ಕೈಗೆ ಸೀಲ್ ಹಾಕಿ 14 ದಿನ ಕ್ವಾರೆಂಟನ್ ನಲ್ಲಿ ಇಡಲಾಗುತ್ತಿತ್ತು.ಹಾಗೆ ಬಂದವರೆನ್ನೆಲ್ಲ ಜನ ಇವನಿಗೆ ಕೋರೊನಾ ಮೆಟ್ಟಿಕೊಂಡಿದೆ ಎಂಬಂತೆಯೇ ನೋಡುತ್ತಿದ್ದರು.ಹಾಂ ಅಂದಂತೆ ಜನರ ಮನಸ್ಸಿನಿಂದ ಕೋರೊನಾ ಭಯವಿನ್ನು ದೂರವಾಗಿರಲಿಲ್ಲ.
ಬದಲಿಗೆ ದಿನೇ ದಿನೇ ಹೆಚ್ಚುತ್ತಲೇ ಇತ್ತು.ಪ್ರತಿ ದಿನ ಬರುವ ವಿಡಿಯೋಗಳು ಘಟನೆಗಳು ಜನರ ಮನಸ್ಸಿಗೆ ನಾಟುತ್ತಲೇ ಸಾಗಿದ್ದವು ,ಮೇ ತಿಂಗಳ ಕೊನೆಯಲ್ಲಿ ಇಂದಿರಾನಗರದಲ್ಲಿ ತೀರಿಕೊಂಡ ತಾಯಿಯ ಅಂತಿಮ ದರ್ಶನಕ್ಕೆ ಮಕ್ಕಳಿಬ್ಬರು ಅನುಭವಿಸಿದ ಕಷ್ಟವಂತು ಮುಂಡಗೋಡಿಗರ ಮನ ಕಲಕಿತ್ತು.
ಹೀಗೆ ಕಟ್ಟುನಿಟ್ಟಿನ ಕ್ರಮಗಳನ್ನೆಲ್ಲ ಅನುಸರಿಸುತ್ತ ಸಾಗಿದ ಸಮಯದಲ್ಲಿ ಅನ್ಯ ರಾಜ್ಯದಿಂದ ಬಂದ ಇಬ್ಬರಲ್ಲಿ ಮೇ 17 ರಂದು ಮೊದಲ ಕೋರೊನಾ ಕೇಸು ಮುಂಡಗೋಡಿನಲ್ಲಿ ಖಚಿತಪಟ್ಟಿತ್ತು .ನೆನಪಿದೆಯಾ ಅಂದು ಸಂಜೆ ಪೂರ್ತಿ ಮುಂಡಗೋಡ ಒಂತರ ಗರ ಬಡಿದವರಂತೆ ನಿಂತು ಬಿಟ್ಟಿತ್ತು.ಆ ಮೊದಲ ಕೋರೊನಾ ಪ್ರಕರಣದಿಂದ ಸುಧಾರಿಸಿಕೊಳ್ಳಲು ಒಂದೆರಡು ದಿನಗಳೇ ಬೇಕಾದವು. ಅವರನ್ನ ನೇರವಾಗಿ ಕ್ವಾರೆಂಟೆನ್ ಸೆಂಟರ್ನಿಂದ್ ಕೋವಿಡ್ ಕೇರ್ ಗೆ ಸಾಗಿಸಲಾಗಿತ್ತು ಮತ್ತೆಲ್ಲೂ ಕೂಡ ಅವರಿಂದ ಸೋಂಕು ಹರಡಲಿಲ್ಲವಲ್ಲ ಎಂದು ಜನರು ನಿಟ್ಟುಸಿರು ಬಿಟ್ಟಿದ್ದರು .ಆದರೆ ಕೋರೊನಾ ಭಯ ಮಾತ್ರ ಹಾಗೆ ಇತ್ತು ,ಹೀಗೆ ಖಚಿತಗೊಂಡ ಸೋಂಕಿತರಲ್ಲಿ 8 ವರ್ಷದ ಬಾಲಕನ ವ್ಯಥೆಗೆ ಮುಂಡಗೋಡ ಮರ ಮರ ಮರುಗಿತ್ತು.
ಮೇ ತಿಂಗಳ 18 ರಿಂದ 31 ನೆ ತಾರಿಕಿನ ವರೆಗೆ ಭಾರತ ತನ್ನ ನಾಲ್ಕನೆ ಹಂತದ ಲಾಕ್ ಡೌನ್ ಮುಗಿಸಿ,ಜೂನ್ ತಿಂಗಳ ಮೊದಲವಾರದಿಂದ ಸಡಿಲಿಕೆಯನ್ನ ನೀಡಿತ್ತು.ಕೋರೊನಾ ಸಂಪೂರ್ಣ ಹತೋಟಿಗೆ ಬಂದಿರಲಿಲ್ಲ ,ಹೊಸ ಪ್ರಕರಣಗಳು ದಾಖಲಾಗುತ್ತಲೇ ಇದ್ದವು. ದೇವಸ್ಥಾನಗಳು ಬಾಗಿಲು ತೆರೆದುಕೊಂಡವು ,ಸಣ್ಣ ಪುಟ್ಟ ಸಂತೆಗಳು ಶುರುವಾದವು , ಜನರು ಒಂದಿಷ್ಟು ನಿಯಮಗಳನ್ನ ಪಾಲಿಸಿ ಓಡಾಡಲು ಶುರುಮಾಡಿದರು.ಹೀಗೆ ಪ್ರಯಾಣ ಮಾಡಿ ಬಂದ ಟಿಬೆಟಿಯನ್ ಒಬ್ಬನಿಗೆ ಜೂನ್ 16 ನೇ ತಾರೀಖಿಗೆ ಕೋರೊನಾ ಸೋಂಕು ಧ್ರಡಪಟ್ಟು ತಾಲೂಕಿನ 3ನೇ ಕೋರೊನಾ ಪ್ರಕರಣ ಇದಾಯಿತು.ಅವಾಗಲಂತು ಮುಂಡಗೋಡಿನ ಜನ ಟಿಬೆಟಿಯನ್ನರು ಎಂದರೆ ಭಯ ಬೀಳತೊಡಗಿದರು ,ಅವರಮೇಲೆ ಗೋಣಗಿಕೊಂಡರು ಅಷ್ಟೇ ..! ಅದು ಮುಂಡಗೋಡಿಗರ ಮೇಲೆ ಹೆಚ್ಚೇನು ಪರಿಣಾಮ ಬಿರಲಿಲ್ಲ. ಜನ ಓಡಾಡಿಕೊಂಡಿದ್ದರು,ಕೋರೊನಾ ಭಯ ಇದ್ದೆ ಇತ್ತು ,ಅನ್ಯ ರಾಜ್ಯಗಳಿಂದ ,ಬೆಂಗಳೂರಿನಿಂದ ಬಂದವರು ಮಾಹಿತಿ ನೀಡಬೇಕು ಹಾಗೂ ಕಡ್ಡಾಯವಾಗಿ ಟೆಸ್ಟ್ ಮಾಡಿಸಿಕೊಳ್ಳಬೇಕೆಂಬ ನಿಯಮವನ್ನ ಜನರು ಸಾವಕಾಶವಾಗಿ ಗಾಳಿಗೆ ತೂರತೊಡಗಿದರು ,ಇಲ್ಲೇ ನೋಡಿ ಎಲ್ಲವೂ ಯಡವಟ್ಟಾಗಿ ಅದೆಲ್ಲೋ ದೂರದಲ್ಲಿ ಇದ್ದ ಕೋರೊನಾ ಎಂಬ ವೈರಸ್ಸು ನಮ್ಮ ಮನೆಯಂಗಳದಲ್ಲಿ ಬಂದು ನಿಂತು ಬಾ ಮಗನೇ ಬಾ ಎಂದು ಡಾನ್ಸ್ ಮಾಡಲು ಶುರುಮಾಡಿತ್ತು. ಜುಲೈ 5ಕ್ಕೆ ಪಟ್ಟಣದಲ್ಲಿ 3 ಕೋರೊನಾ ಪ್ರಕರಣಗಳು ದೃಢಪಟ್ಟು ಬಸವನ ಬೀದಿ ಸಿಲ್ ಡೌನ್ ಆಯಿತು.ಅಲ್ಲಿಂದ ಮುಂದೆ ತಾಲೂಕಿನಲ್ಲಿ ಪ್ರತಿದಿನ ಹೊಸ ಹೊಸ ಪ್ರಕರಣಗಳು ಪತ್ತೆಯಾಗತೊಡಗಿದವು .ಪ್ರಯಾಣದ ಹಿನ್ನಲೆಯಿಲ್ಲದಿದ್ದರು ಸೋಂಕು ಮೆಟ್ಟಿಕೊಳ್ಳಲು ಶುರುವಾಗಿತ್ತು.
ಭಾರತದಲ್ಲಿ ಮೊದಲ ಕೋರೊನಾ ಸೋಂಕು ಖಚಿತಗೊಂಡಿದ್ದು 2020 ರ ಜನವರಿ ತಿಂಗಳ ಕೊನೆಯಲ್ಲಾದರೆ ,ಕರ್ನಾಟಕದಲ್ಲಿ ಮಾರ್ಚ್ ತಿಂಗಳ ಮಧ್ಯಂತರದಲ್ಲಿ.ಜೂನ್ 25 ರವರೆಗೆ ಜಿಲ್ಲೆಯಲ್ಲಿದ್ದದ್ದು 156 ಕೋರೊನಾ ಪ್ರಕರಣಗಳು.ಮುಂಡಗೋಡಿನಲ್ಲಿ ಜುಲೈ ನಾಲ್ಕರವರೆಗೆ ಇದ್ದದ್ದು ಕೇವಲ 3 ಪ್ರಕರಣಗಳು.ನೋಡ ನೋಡುತ್ತಿದ್ದಂತಯೇ ಜುಲೈ ತಿಂಗಳಲ್ಲಿ ಕೇವಲ 25 ದಿನಗಳಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ನೂರರ ಗಡಿಯನ್ನ ದಾಟಿತು. ಅಗಷ್ಟ್ ಒಂದನೇ ತಾರಿಕಿನ ವರೆಗೆ 114 ಕೋರೊನಾ ಪ್ರಕರಣಗಳು ದಾಖಲಾದವು. ಜೊತೆಗೆ ಜುಲೈ 23ಕ್ಕೆ ಕೋರೊನಾ ದಿಂದ ಮುಂಡಗೋಡಿನಲ್ಲಿ ಮೊದಲ ಸಾವು ಸಂಭವಿಸಿತು.ಜುಲೈ ನಲ್ಲಿ ಎರಡು ಘಟನೆಗಳು ನಡೆದವು ಒಂದು ಕಡೆ ಸೋಂಕಿತರ ಸಂಖ್ಯೆ ಏರುತ್ತಲೇ ಹೋದರೆ ಅದರ ಹಿಂದೆ ಹಿಂದೆಯೇ ಜನ ಗುಣಮುಖರಾಗಿ ಕೋವಿಡ್ ಕೇರ್ ನಿಂದ ಮರಳಿ ಮನೆಗೆ ಬರತೊಡಗಿದರು. ಜುಲೈ 13 ಕ್ಕೆ 21 ವರ್ಷದ ಯುವಕ ಮೊದಲನೇ ಬಾರಿಗೆ ಗುಣಮುಖನಾಗಿ ಮುಂಡಗೋಡ ಕೋವಿಡ್ ಕೇರ್ ನಿಂದ ಮರಳಿದ. ಜುಲೈ 15 ಕ್ಕೆ ಮುಂಡಗೋಡಿನ 73ರ ವರ್ಷದ ವೃದ್ದನೊಬ್ಬ ಗುಣಮುಖನಾಗಿದ್ದನ್ನು ನೋಡಿದ ಮುಂಡಗೋಡಿಗರು ,ಕೋರೊನಾ ಎಂದರೆ ಕೇವಲ ನೆಗಡಿ ,ಕೆಮ್ಮು ,ತಲೆನೋವು ಅಷ್ಟೇ ಯಾವ ಕೋರೊನಾ ನೂ ಇಲ್ಲ ಏನೂ ಇಲ್ಲ ಎಂಬ ಮಟ್ಟಿಗೆ ಬಂದು ನಿಂತರು,ಮಾಸ್ಕ್ ಗಳು ಮೂಲೆ ಸೇರಿದವು .ಸ್ಯಾನಿಟೈಸರ್ ಅಂತೂ ಕೇಳಲೇ ಬೇಡಿ. ಇಲ್ಲಿ ಜನಕ್ಕೆ ಕೋರೊನಾ ಎಂಬ ಭಯ ಮಾಯವಾಗಿತ್ತು. ಕೋರೊನಾ ಮಾತ್ರ ಸದ್ದಿಲ್ಲದೆ ಊರ ತುಂಬೆಲ್ಲ ಹರಡುತ್ತಲೇ ಹೋಯಿತು.ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಅಧಿಕಾರಿ ವರ್ಗದವರಿಗೂ ಸೋಂಕು ಮೆಟ್ಟಿಕೊಂಡಿತ್ತು.
ದೇಶದಲ್ಲಿ ಕೋರೊನಾ ಮಾರಿ ಶುರುವಾದ ಮೇಲು ,ಮುಂಡಗೋಡಿನಲ್ಲಿ ಮೊದಲ ಸೊಂಕು ಸಿಕ್ಕಮೇಲು ಪೂರ್ತಿ ಐದು ತಿಂಗಳು ಮುಂಡಗೋಡ ನಿರಾಳವಾಗಿತ್ತು.ಜುಲೈ ನಿಂದ ಈಚೆಗೆ ಕೋರೊನಾ ನಮ್ಮ ಮನೆಯಲ್ಲಿಯೇ ಕೂತು ನಮ್ಮನ್ನ ಕುಣಿಸಲು ಶುರು ಮಾಡಿತು. ಈಗ ಹೇಳಿ ತಪ್ಪು ಯಾರದ್ದು..?
ಸೆಪ್ಟೆಂಬರ್ ಕೊನೆಯಿಂದ ಕೋರೊನಾ ಸೋಂಕಿತರ ಸಂಖ್ಯೆ ಇಳಿಮುಖ ವಾಗುತ್ತ ಬಂದು ,ನವಂಬರ್ ಮೊದಲನೇ ವಾರದಲ್ಲಿ ಮುಂಡಗೋಡಿನ ಕೋವಿಡ್ ಆರೈಕೆ ಕೇಂದ್ರ ಖಾಲಿಯಾಯಿತು.ಕೋರೊನಾ ಮುಗಿದೆ ಬಿಡ್ತು ,ಇನ್ನೇನು ವ್ಯಾಕ್ಸಿನ್ ಬರತ್ತೆ ,ಕೋರೊನಾ ಅಂದ್ರೆ ಇಷ್ಟೇ ಎಂಬ ಮನಸ್ಥಿತಿಗೆ ನಾವು ತಲುಪಿಬಿಟ್ಟಿದ್ದೆವು.ಪ್ರತಿಭಟನೆ ,ಹೋರಾಟಗಳು ನಡೆದವು ,ಭರ್ಜರಿ ಟುರ್ನಾಮೆಂಟ್ ಗಳು ನಡೆದವು,ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದು ಹೊದ್ವು.ಆದರೆ ನಾವು ಸುಮ್ಮನಿದ್ದರು ಕೋರೊನಾ ಸುಮ್ಮನಿರಬೇಕಲ್ಲ..? ಎರಡನೇ ಅಲೆ ಬರತ್ತೆ ಇದಕ್ಕಿಂತಲೂ ಭೀಕರವಾಗಿರತ್ತೆ ಅಂತ ವಿಜ್ಞಾನಿಗಳು ಎಚ್ಚರಿಕೆ ಕೊಡುತ್ತಲೇ ಇದ್ದರು.ಆದರೆ ನಾವು ಮಾತ್ರ ಅದರ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳಲಿಲ್ಲ . ನಮ್ಮ ಸರ್ಕಾರಿ ಆಸ್ಪತ್ರೆ ಎನ್ ತಯಾರಿ ಮಾಡ್ತಾ ಇದೆ..? ಆಡಳಿತ ಅಧಿಕಾರಿ ,ಆಡಳಿತ ಪಕ್ಷ ಏನು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ತ ಇದೆ ಎಂದು ಯಾವತ್ತಿಗೂ ನೋಡಲು ಹೋಗಲೇ ಇಲ್ಲ. "ಅಕಸ್ಮಾತ್ ಯಾವುದಾರು ಒಂದು ಸಾಂಕ್ರಾಮಿಕ ರೋಗ ಹರಡಿತು ಎಂದರೆ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ 100 ಕ್ಕಿಂತ ಹೆಚ್ಚಿನ ಬೆಡ್ ಗಳು ಇಲ್ಲ" ಎಂದು 2017-18 ರಲ್ಲಿ ನಮ್ಮ ಕನಸಿನ ಮುಂಡಗೋಡ ವೇದಿಕೆಯು ಹೇಳಲು ಪ್ರಯತ್ನಿಸದಾಗ ,ಅಧಿಕಾರಿ ವರ್ಗ ,ಜನಪ್ರತಿನಿಧಿ ದೂರದ ಮಾತು ಸ್ವತಃ ಜನಗಳೇ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ (ಸರ್ಕಾರಿ ಆಸ್ಪತ್ರೆಯ ಜೊತೆಗೆ ಒಂದಿಷ್ಟು ಅವಶ್ಯ ಸುಧಾರಣೆಯ ಪಟ್ಟಿಯನ್ನ ನಮ್ಮ ಕನಸಿನ ವೇದಿಕೆ ಸಿದ್ಧಪಡಿಸಿತ್ತು) ಇಂದಿನ ಮಟ್ಟಿಗೆ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ತಕ್ಕ ಮಟ್ಟಿಗೆ ಸುಧಾರಿಸಿದೆಯಾದರು ,ಇಲ್ಲಿನ ಮುಖ್ಯ ವೈದ್ಯರು ಸ್ಪಷ್ಟವಾಗಿ ಹೇಳ್ತಾರೆ ಇಲ್ಲಿ ಡಾಕ್ಟರ್ ಗಳ ಸಮಸ್ಯೆ ಇದೆ ಅದಕ್ಕೆ ನಾವು ಹುಬ್ಬಳ್ಳಿ ಅಥವಾ ಕಾರವಾರಕ್ಕೆ ಕಳಿಸ್ತೀವಿ ಅಂತ.ಅದೆಲ್ಲ ಬಿಡಿ ಕನಿಷ್ಟ ಪಕ್ಷ ಸರ್ಕಾರ ಉಚಿತವಾಗಿ ನೀಡುತ್ತಿದ್ದ ಲಸಿಕೆಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದೆ ಅಸಡ್ಡೆ ಮಾಡಿ ,ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವುದಕ್ಕೆ ನಿಂತಂತಾಗಿದೆ ನಮ್ಮ ಪರಿಸ್ಥಿತಿ.
Uffff.... ಈಗಂತೂ ಮುಂಡಗೋಡಿನ ಪರಿಸ್ಥಿತಿ ತುಂಬಾ ಬಿಗಡಾಯಿಸಿಬಿಟ್ಟಿದೆ,ಈ ಬಾರಿ ಕೋರೊನಾ ನಿರ್ಮಿಸಿದ ಎರಡನೇ ಅಲೆ ಹಿಂದೆಂದಿಗಿಂತ ಭಿನ್ನವಾಗಿದೆ.ಅದಾಗಲೇ ಎರಡನೇ ಅಲೆಗೆ 800 ಜನ ಕೋರೊನಾ ಸೋಂಕಿಗೆ ತುತ್ತಾಗಿದ್ದಾರೆ.ಕಳೆದ ಒಂದು ತಿಂಗಳಲ್ಲಿ 9 ಜನ ಸಾವಿಗೀಡಾಗಿದ್ದಾರೆ.ಸೋಂಕಿತರ ಸಂಖ್ಯೆಗಿಂತ,ಸಾವಿನ ಸಂಖ್ಯೆ ಭಯ ಹುಟ್ಟಿಸುವುಂತೆ ಮಾಡಿದೆ.ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ನೇರವಾದ ಕಾರಣವೆಂದರೆ ,ನಮ್ಮ ನಿರ್ಲಕ್ಷ್ಯತನ ..! ತಲೆ ನೋವು ,ಶೀತ ,ಜ್ವರ ಇದು ಸಾಮಾನ್ಯ ಬಿಡು ಅಂತ ನಿರ್ಲಕ್ಷಿಸಿ ಮನೆಯಲ್ಲೇ ಮಾತ್ರೆ ತಗೊಂಡು ಸುಮ್ಮನಾಗಿ ಬಿಡ್ತೀವಿ,ನಿಮ್ಮ ಇಮ್ಯೂನೀಟಿ ಚೆನ್ನಾಗಿದೆಯ ,ನೀವು ಪಾರದ್ರಿ ಇಲ್ಲವೋ ಯಾವೊದೋ ಕಾಯಿಲೆ ಇದ್ದು ಕಫ ಕಟ್ಟತೊಡಗಿದರೆ ಅಲ್ಲಿಗೆ ನಿಮಗೆ ತೀವ್ರ ಉಸಿರಾಟದ ಸಮಸ್ಯೆಯಾಗಬಹುದು, ನೀವು ಆಸ್ಪತ್ರೆಗೆ ಹೋಗ್ತಿರಿ,ಉಸಿರಾಟಕ್ಕೆ ತೊಂದರೆ ಆದಾಗ ನೋಡಿಕೊಳ್ಳಲು ನಮ್ಮ ಮುಂಡಗೋಡಿನಲ್ಲಿ ಡಾಕ್ಟರ್ ಇಲ್ಲ,ವ್ಯವಸ್ಥೆಯು ಇಲ್ಲ..ನೀವು ಒಂದೋ ಹುಬ್ಬಳ್ಳಿಗೆ ಅಥವಾ ಕಾರವಾರಕ್ಕೆ ಹೋಗಬೇಕು ,ಅಲ್ಲಿ ನಿಮ್ಮಂತ ನೂರಾರು ಜನ ಬಂದಿರ್ತಾರೆ,ಅಲ್ಲಿರುವ ಸಿಬ್ಬಂದಿವರ್ಗ ಮತ್ತು ಡಾಕ್ಟರ್ ಯಾರ್ ಯಾರಿಗೆ ಅಂತ ನೋಡ್ತಾರೆ ,ಯಾರಿಗೆ ಎನ್ ಟ್ರೀಟ್ಮೆಂಟ್ ಅಂತ ಕೊಡ್ತಾರೆ ಹೇಳಿ..? ಬೆಂಗಳೂರಿನಲ್ಲಿ ನಡೆದ ಬೆಡ್ ಮಾಫಿಯಾ ಕಣ್ಣ ಮುಂದೆಯೇ ಇದೆ. ಅದು ಬಿಟ್ಟು ನಿಮ್ಮ ಮನೆಯವರು ನಿಮಗಾಗಿ ಕಾರವಾರಕ್ಕೆ ಅಲೆದಾಡಬೇಕು,ಕಾರವಾರ ಏನೂ ನಮ್ಮ ಊರಿನ ಪಕ್ಕದಲ್ಲಾ ಇದೆ..? ಹಾಗಾಗಿ ನಿರ್ಲಕ್ಷ್ಯ ಮಾಡಲೇ ಬೇಡಿ.ಶೀತ ಕೆಮ್ಮು ಅಂತ ಅನಿಸ್ತಾ ಹೋಗಿ ಒಂದ್ ರಾಪಿಡ್ ಟೆಸ್ಟ್ ಮಾಡಿಸಿಕೊಂಡು ಬಂದು ಬಿಡಿ.ಪಾಸಿಟಿವ್ ಬಂತಾ ನಿಮ್ಮ ಮನೆಯವರಿಂದ ದೂರ ಉಳಿದು ,ಅವರನ್ನು ರಕ್ಷಿಸಬಹುದು ಹಾಗೂ ನಿಮ್ಮನ್ನ ನೀವು ಕೂಡ ರಕ್ಷಿಸಬಹುದು.ನೆಗೆಟಿವ್ ಬಂತಾ ಒಳ್ಳೆದೆ, ನಿಮಗೂ ಮನಸ್ಸಲ್ಲಿ ಭಯ ಇರಲ್ಲ.
ಹೇಗೆ ಕಳೆದ ವರ್ಷ ಜೂನ್ ತಿಂಗಳ ಕೊನೆಯವರೆಗೂ ಎಲ್ಲ ಕೋವಿಡ್ ನಿಯಮಗಳನ್ನ ಪಾಲಿಸುತ್ತಾ ,ಯಾವುದೇ ಕೋರೊನಾ ಪ್ರಕರಣಗಳು ದಾಖಲಾಗದೇ ಇದ್ದವೋ, ಈ ಬಾರಿ ಕೂಡ ಹಾಗೆ ಆಗಬೇಕಿದೆ.ಯಾರೋ ಒಬ್ಬರಿಂದ ಇದು ಆಗಲು ಸಾಧ್ಯವಿಲ್ಲ. ಇನ್ನಿತರ ಕಡೆಯ ಪರಿಸ್ಥಿತಿಯನ್ನ ,ಸನ್ನಿವೇಶಗಳನ್ನ ನೋಡಿದರೆ ಮುಂಡಗೋಡದ ಪರಿಸ್ಥಿತಿ ಕೈ ಮೀರಿ ಹೋಗಿಲ್ಲ. ಕೋರೊನಾದ ಹೋರಾಟದಲ್ಲಿ ನಾವು ನೀವೆಲ್ಲರೂ ಸೈನಿಕರೆ ನಮ್ಮನ್ನ ನಾವು ರಕ್ಷಿಸಿಕೊಳ್ಳಲೇ ಬೇಕು.ಸಾಧ್ಯವಾದಷ್ಟು ಮನೇಲಿ ಉಳಿದುಬಿಡಿ,ಮದುವೆ ,ಜಾತ್ರೆ ಇವರು ನಮ್ಮವರು ತಮ್ಮವರು ಅನ್ನೋದನ್ನ ಮರೆತು ಬಿಡಿ. ಅವರವರ ಮನೇಲಿ ಅವರು ಇರ್ಲಿ.ಅಕಾಸ್ಮಾತ್ ಆಚೆ ಹೋಗಬೇಕಾ ಮಾಸ್ಕ್ ತಪ್ಪದೆ ಬಳಸಿ ,ಸ್ವಚ್ಛವಾಗಿ ಕೈ ತೊಳೆಯಿರಿ.ನಮ್ಮ ನಿರ್ಲಕ್ಷ್ಯತನದಿಂದ , ನಮ್ಮ ಆಪ್ತವಾದವರನ್ನ ನಮ್ಮವರನ್ನ ಕಳೆದುಕೊಂಡೆನಲ್ಲ ಎಂಬ ಕೊರಗು ಮುಂದೆಂದೂ ನಮಗೆ ಕಾಡದೇ ಇರುವ ಹಾಗಾಗಲಿ.
ಒಂದು ನನ್ನದೇ ಸ್ವತಃ ಉದಾಹರಣೆ ಹೇಳ್ತೀನಿ ,ಕಳೆದ ವರ್ಷ ಲಾಕ್ ಡೌನ್ ಆಯಿತಲ್ಲ ,ಒಂದೇ ಒಂದು ದಿನ ನಾನು ಮನೆಯಲ್ಲಿ ಇದ್ದವನಲ್ಲ ಪ್ರತಿ ದಿನ ಕೆಲಸದ ನಿಮಿತ್ತ ನಾನು ಆಚೆ ಹೋಗಲೇಬೇಕಿತ್ತು.ಮಾರ್ಚ್ ನಿಂದ ಹಿಡಿದು ಆಗಷ್ಟ್ ವರೆಗೆ ಪೂರ್ತಿ ಐದು ತಿಂಗಳು ಸೋಂಕಿನ ಲಕ್ಷಣಗಳು ಸಹ ಹತ್ತಿರಕ್ಕೆ ಸುಳಿದಿರಲಿಲ್ಲ ,ನಾನು ಆ ಸಮಯದಲ್ಲಿ ಮಾಡಿದ್ದಿಷ್ಟೇ ಮನೆಯಿಂದ ಆಚೆ ಹೋಗ್ತಾ ಹಾಕಿದ ಮಾಸ್ಕು ವಾಪಸ್ ಮನೆಗೆ ಬಂದಾಗಲೇ ತೆಗೆಯೋದು ,ಆಗಾಗ ಸ್ಯಾನಿಟೈಸರ್ ತಪ್ಪದೆ ಬಳಿಸ್ತಾ ಇದ್ದೆ.ಸರ್ಕಾರ ನಿಯಮಗಳಲ್ಲಿ ಸಡಿಲಿಕೆ ಮಾಡ್ತಲ್ಲ ಆಗಷ್ಟ್ ನಲ್ಲಿ ಮುಂಡಗೋಡಿಗೆ ಬಂದೆ ,ಬಂದ ಮಾರನೇ ದಿನ ಟೆಸ್ಟ್ ಮಾಡಿಸಿದೆ ನೆಗೆಟಿವ್ ವರದಿ ಇತ್ತು ,ಎಲ್ಲ ಕೆಲಸ ಮುಗಿಸಿ ವಾಪಾಸ್ ಹೋಗುವಾಗ ಮತ್ತೆ ಟೆಸ್ಟ್ ಮಾಡಿಸಿದರೆ ವರದಿ ಪಾಸಿಟಿವಾಗಿತ್ತು..ಮಾಡಿದ ತಪ್ಪು ಒಂದೇ..! ನಿರ್ಲಕ್ಷ್ಯ ,ಮಾಸ್ಕ್ ಹಾಕೋಕೆ ನಿರ್ಲಕ್ಷ್ಯ,ನಮ್ಮವರು ಬಿಡು ಎಂಬ ನಿರ್ಲಕ್ಷ್ಯ.
ಮುಂದೇನು...?
ಎಲ್ಲಕ್ಕಿಂತ ಮೊದಲು ಮಾಡಬೇಕಾದ ಕೆಲಸ ಮಾಧ್ಯಮದಲ್ಲಿ ಬಿತ್ತರಿಸುವ ಕೋರೊನಾ ಸುದ್ದಿಗಳಿಂದ ದೂರ ಉಳಿದು ಬಿಡಿ.ನಮಗೆ ಕೋರೊನಾ ಕುರಿತಾದ ಏನೇನೂ ಮಾಹಿತಿ ಬೇಕಿತ್ತೋ ಅದು ನಿಮಗೆ ಸಿಕ್ಕಾಗಿದೆ.
ಎಷ್ಟು ಜನ ಸತ್ತರು ಎಷ್ಟು ಕೇಸ್ ಗಳು ಸಿಕ್ಕವು ಎಂಬ ಸಂಖ್ಯೆಗಳನ್ನ ಕೂತು ಲೆಕ್ಕ ಹಾಕುವುದನ್ನ ಬಿಟ್ಟು ಬಿಡಿ.ಇದೇನು ಐಪಿಲ್ಲೊ ,ಕ್ರಿಕೆಟ್ ಮ್ಯಾಚೊ ಅಲ್ಲ.
ಕೋರೊನಾ ಕುರಿತಾದ ಮಾಹಿತಿಗಳನ್ನ ,ಜಾಲತಾಣಗಳಲ್ಲಿ ಹುಡುಕಾಡುವುದನ್ನ ಬಿಟ್ಟು ಬಿಡಿ ,ಅದು ನಿಮ್ಮ ಮಾನಸಿಕ ಪರಿಸ್ಥಿತಿಯನ್ನ ಬಿಗಡಾಯಿಸಬಹುದು.
ಕೋರೂನ ಕುರಿತಾದ ಸುದ್ದಿಗಳನ್ನ ,ಸಿಕ್ಕ ಸಿಕ್ಕವರಿಗೆ ಫಾರ್ವರ್ಡ್ ಮಾಡೋದನ್ನ ನಿಲ್ಲಿಸಿಬಿಡಿ ,ನಿಮ್ಮಷ್ಟು ಮಾನಸಿಕ ಸ್ಥಿರತೆ ಮತ್ತು ಧೈರ್ಯ ಎಲ್ಲರಲ್ಲೂ ಇರಬೇಕಲ್ಲ..?
ಆದಷ್ಟು ಧೈರ್ಯದಿಂದ ಇರಿ ,ಮಾನಸಿಕವಾಗಿ ಸ್ವಸ್ಥವಾಗಿರಿ ,ಅನಗತ್ಯ ಭಯ ಬೇಡ ,ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತೆ ,ಮತ್ತು ನೀವು ನಂಬುವ ಆ ಭಗವಂತನಲ್ಲಿ ನಂಬಿಕೆ ಇಡಿ.
ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ನಿಮ್ಮ ಮನೆಯ ಸುತ್ತ ಮುತ್ತಲಿನ ಜನಕ್ಕೆ ಆದಷ್ಟು ಸಹಾಯ ಮಾಡಿ ,ಅವರಿಗೆ ಆಹಾರದ ಸಮಸ್ಯೆ ಆಗ್ತಾ ಇದೆಯಾ..? ಇದ್ದದ್ದರಲ್ಲೆ ಸ್ವಲ್ಪ ಹಂಚಿಕೊಳ್ಳಿ.ಒಂದಿಷ್ಟು ಸಂಘಟನೆ ,ನಿಮ್ಮ ಸಮಾಜದಿಂದ ಸಹಾಯ ಪಡೆಯಿರಿ ,ಸಹಾಯ ಮಾಡಿ ಹಾಗೆ ಸಹಾಯ ಮಾಡುವಾಗ ಗುಂಪಾಗಿ ಹೋಗಬೇಡಿ ಮತ್ತು ಫೋಟೋ ತೆಗೆದು ಫಾಲ್ತು ಶೋಕಿ ಮಾಡೋಕೆ ಹೋಗಬೇಡಿ, ಇದರಿಂದ ಆಗುವ ಪರಿಣಾಮ ಆ ಮನೆಯವರಿಗೆ ಕಸಿವಿಸಿ ಆಗಬಹುದು ಒಂದು ಅದಕ್ಕೆ ಹೆದರಿ ಬೇರೆಯವರು ನಿಮ್ಮ ಸಹಾಯವನ್ನ ಬೇಡವೆಂದು ತಳ್ಳಿಹಾಕಬಹುದು .ಇನ್ನೊಂದು ಕೋರೊನಾ ಗೆ ನೀವು ಏನು ಮಾಡ್ತಾ ಇದ್ದೀರಿ ಅಂತ ಅರ್ಥ ಆಗಲ್ಲ ನಿಮಗೂ ಸೋಂಕು ತಗಲುವ ಹಾಗೂ ಸೋಂಕು ಹರಡುವ ಸಾಧ್ಯತೆ ಜಾಸ್ತಿ. ಒಟ್ನಲ್ಲಿ ಎಲ್ಲವೂ ನಮ್ಮ ಕೈಯಲ್ಲೇ ಇದೆ ,ಇನ್ನೊಬ್ಬರನ್ನ ,ಸರ್ಕಾರವನ್ನ ಟೀಕಿಸುವ ಮೊದಲು ನಾವು ಏನ್ ಮಾಡಿದ್ದೇವೆ ,ಎನ್ ಮಾಡ್ತಾ ಇದ್ದೇವೆ ಎಂಬುದನ್ನ ನೋಡಿಕೊಳ್ಳಬೇಕಿದೆ.ಕಳೆದ ಬಾರಿಯಂತೆ ಮುಂಡಗೋಡದ ಗ್ರಾಮದೇವತೆ ಮಾರಿಕಾಂಬೆ ಈ ಮಾರಿಯಿಂದ ನಮ್ಮನ್ನೆಲ್ಲ ಸುರಕ್ಷಿತವಾಗಿಟ್ಟಿರಲಿ ,ಆದಷ್ಟು ಬೇಗ ಈ ಮಹಾಮಾರಿ ತೊಲಗಲಿ ,ಬರುವ ವರ್ಷ ಅಧ್ದೂರಿಯಾಗಿ ಜಾತ್ರೆ ಮಾಡುವಂತಾಗಲಿ.
ಪವನ್ ಹೆಬ್ಬಾರೆ
ಮುಂಡಗೋಡ
05/05/2021