Total Pageviews

Monday, December 14, 2020

ಮತ್ತೆ ಸಿಗೋಣ ಅಂತ ಹೇಳಿ ಹೊರಟವರು ಮೊನ್ನೆ ಮತ್ತೆ ಸಿಕ್ಕಿದ್ದರು..!


ಶಾಲೆ ,ಕಾಲೇಜು ಮುಂದೆ ಡಿಗ್ರಿಯನ್ನ ಪಡೆದು ಹೊರಡುವ ಕೊನೇಯ ದಿನ ಬಹುತೇಕರು ನಾವೆಲ್ಲ ಹೀಗೆ ಹೇಳಿ ಹೊರಟಿರ್ತೀವಿ,ಮತ್ತೆ ಸಿಗೋಣ ಸಿಗ್ತಾ ಇರೋಣ , ನಿಜಕ್ಕೂ ನಮ್ಮ ಬದುಕಿನಲ್ಲಿ ಇದು ಸಾಧ್ಯವಾಗತ್ತ..? ಖಂಡಿತವಾಗ್ಲೂ ಎಲ್ಲರ ಬದುಕಿನಲ್ಲಿ ಅಗಲಿಕ್ಕಿಲ್ಲ ,SSLC ಯ ನಂತರ ಮುಂದೇನು..? ಎಂಬ ಅಲೋಚನೆಯಲ್ಲೇ ಓಡಲು ಶುರುವಾದ ನಮ್ಮ ಬದುಕು ಮುಂದೆ ಪಿಯುಸಿ ಡಿಗ್ರಿ ಮುಗಿದು ಆಚೆ ಬೀಳುವ ಮೊದಲೇ ಒಂದರ ಹಿಂದೊಂದರಂತೆ ಜವಾಬ್ದಾರಿಯ ನೊಗ ಹೆಗಲ ಮೇಲೆ ಬಿದ್ದಿರುತ್ತೆ ,ಇವುಗಳೆಲ್ಲ ಮಧ್ಯೆ ಮಿತ್ರರ ನೆನಪಾಗೋದು ಬಿಡಿ ಜೊತೆಗಿದ್ದ ಮಿತ್ರರೇ ದೂರವಾಗಿರುತ್ತಾರೆ. ಅವಾಗ ಅವಾಗ ಯಾರೋ ಹಳೆಯ ಮಿತ್ರನೊಬ್ಬ ಸಿಕ್ಕಾಗ ,ಶಾಲೆ ಕಾಲೇಜಿನ ದಿನಗಳಲ್ಲಿ ನಮ್ಮ ಆತ್ಮೀಯ ಮಿತ್ರರ ಬಗ್ಗೆ ಕೇಳ್ತಾ ಇರ್ತೀವಿ, ಈಗ ಅವನೆಲ್ಲಿ ಇದ್ದಾನೆ ..? ಎನ್ ಮಾಡ್ತಾ ಇದ್ದಾನೆ ..? ಅವಳು ಹೇಗಿದ್ದಾಳೆ ಎಲ್ಲಿದ್ದಾಳೆ..? ಹಾಗೆ ಮಾತು ಒಂದಿಷ್ಟು ಜೊತೆಗೆ ಅಂದಿನ ನೆನಪುಗಳ ಬಗ್ಗೆ ಮೆಲಕು ಹಾಕಿರ್ತೀವಿ, ಅದೊಂದು ಹತ್ತಿಪ್ಪತ್ತು ನಿಮಿಷಗಳ ಕಾಲದ ಮಿತ್ರನೊಡನೆ ಮಾತು ಮುಗಿಸಿ ಹೊರಡುವುದರೊಳಗೆ ಮನಸ್ಸು ನಮಗಿರಿವಿಲ್ಲದೆ ಪುಳಕಿತವಾಗಿ ,ಆ ದಿನವಿಡೀ ಅಥವಾ ಒಂದಿಷ್ಟು ಘಂಟೆಯಗಳ ವರೇಗಾದರು ನೆನಪಿನ ಉಯ್ಯಾಲೆಯಲ್ಲಿ ಹರ್ಷದಿಂದ ತೇಲಾಡಿರುತ್ತೆ,ಮತ್ತೊಮ್ಮೆ ಅವರನ್ನೆಲ್ಲ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಲ್ಲವಾ ಅಂತ ಆ ಕ್ಷಣಕ್ಕೆ ನಮಗನಿಸುರತ್ತೆ. ಖಂಡಿತ ಇದೆಲ್ಲವೂ ನಡಿದಿರುತ್ತೆ ನಾವು ಗಮನಿಸಿರುವುದಿಲ್ಲ ಅಷ್ಟೇ. ಸುಮ್ಮನೆ ಯೋಚಿಸಿ ನೋಡಿ ನಿಮ್ಮ ಕಾಲೇಜು ಮುಗಿದು ಕನಿಷ್ಟ 30 ವರ್ಷವಾಗಿದೆ ನಿಮ್ಮ ಮಿತ್ರರ ಚೆಹರೆಗಳು ದೂರದ ಮಾತು ಅವರ ಹೆಸರುಗಳೇ ನಿಮಗೆ ಮರೆತಿರುತ್ತೆ ,ಅಂತಹ ನಿಮ್ಮೆಲ್ಲ ಗೆಳಯ /ಗೆಳತಿಯರು ಒಟ್ಟಿಗೆ ಒಂದು ಜಾಗದಲ್ಲಿ ಭೇಟಿಯಾದಾಗ ,ನಿಮ್ಮನ್ನ ಹೊಡೆದು ತಿದ್ದಿ ತೀಡಿ ನಿಮಗೆ ಬುದ್ಧಿಯನ್ನ ಹೇಳಿದ ಗುರುಗಳು ಸಹ ಅಲ್ಲಿಗೆ ಬಂದರೆ ಹೇಗಿರುತ್ತೆ ,, ವ್ಹಾ...! ಖಂಡಿತವಾಗ್ಲೂ ನಮ್ಮ ಬದುಕಿನ ಒಂದು ಅದ್ಭುತವಾದ ದಿನವಾಗಿರುತ್ತೆ..ಮೊನ್ನೆ ಡಿಸೆಂಬರ್  13 ಕ್ಕೆ ಇಂತಹದೇ ಒಂದು ದಿನವಿಡೀ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇನೆ,ಅಲ್ಲಿನ ಸಂಭ್ರಮ ಅವರ ನಡುವಿನ ಮಾತುಗಳು ನಿಜಕ್ಕೂ ನನ್ನ ಮಿತ್ರರನ್ನೆಲ್ಲ ನೆನಪು ಮಾಡಿಸಿದ್ದು ಸುಳ್ಳಲ್ಲ.

ಅದು 1988-91 ರಲ್ಲಿ SSLC ಹಾಗೂ ಮುಂದೆ ಡಿಗ್ರಿಯವರೆಗೂ ಜೊತೆಗೆ ಕಲಿತ ಸ್ನೇಹಿತರ ಬಳಗದ ಸ್ನೇಹ ಮಿಲನ ಕಾರ್ಯಕ್ರಮ , ನಾ ಕಲೆತ ಶಾಲೆಯಲ್ಲೇ ನಾ ಹುಟ್ಟುವ ಮೊದಲೇ😜 ಆ ಶಾಲೆಯಲ್ಲಿ ಕಲಿತ ನನ್ನ ಸೀನಿಯರ್ಸಗಳು ,ಸುಮಾರು 30 ವರ್ಷಗಳ ಬಳಿಕ ಮತ್ತೆ ಭೇಟಿಯಾಗಲು ಒಂದಿಷ್ಟು ಜನ ಮಿತ್ರರು ಒಟ್ಟಾಗಿ ತಯಾರಿಯನ್ನ ನಡೆಸಿದ್ದರು, ಇರುವ ಎಲ್ಲ ಮಿತ್ರರನ್ನ ಹುಡುಕಬೇಕು, ಅವರಿವರನ್ನ ಕೇಳಬೇಕು ,ಅವರ ವಿಳಾಸ ,ನಂಬರ್ ಎಲ್ಲವನ್ನು ಕಲೆಹಾಕಬೇಕು ,ಕಲಿಸಿದ ಶಿಕ್ಷಕರನ್ನ ಹುಡುಕಬೇಕು ಕಾರ್ಯಕ್ರಮಕ್ಕೆ ಬರುವಂತೆ ಮನವೊಲಿಸಬೇಕು ,ಅವರು ಬರುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನ ಮಾಡಬೇಕು ,ಇತ್ತ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆ ,ಊಟ ತಿಂಡಿಯ ವ್ಯವಸ್ಥೆಯನ್ನ ಮಾಡಬೇಕು  ಅಬ್ಬಾ..! ಒಂದು ಕಾರ್ಯಕ್ರಮದ ಹಿಂದೆ ಅದೆಷ್ಟು ತಯಾರಿಯನ್ನ ಮಾಡಬೇಕೋ ..ಬೇರೆ ಯಾವದೇ ಕಾರ್ಯಕ್ರಮ ಆಗಿದ್ದರೆ ಸಾಕಪ್ಪಾ ಸಾಕು ಅನಿಸಿಬಿಡಬಹುದು ,ಆದರೆ ತನ್ನ ಮಿತ್ರರು ಸಿಗುತ್ತಾರೆ ವಿದ್ಯೆ ಕಲಿಸಿದ ಗುರುಗಳು ಬರುತ್ತಾರೆ ಎಂದಾಗ ಮನದಲ್ಲಿ ಮೂಡುವ ಹರ್ಷವಿದೆಯಲ್ಲ ಅದು ಇವೆಲ್ಲದರ ಆಯಾಸವನ್ನ ಹಗುರಗೊಳಿಸಿ ಬಿಡುತ್ತೆ.ತನ್ನ ಹಳೆಯ ಮಿತ್ರರನ್ನೆಲ್ಲ ಭೇಟಿಯಾಗುವ ಆತುರ ಅಂದು ಯಾರು ಬರುತ್ತಾರೆ ಯಾರಿಲ್ಲ ,ಬಂದವರನ್ನ ಇವರೇ ಎಂದು ಗುರುತು ಹಿಡಿಯುವುದದಾರು ಹೇಗೆ ..? ಇವೆಲ್ಲ ಕೂತೂಹಲದ ಜೊತೆಗೆ  ಮೆಲ್ಲಗೆ ಅಂದು ಬೆಳಗ್ಗೆ ಒಬ್ಬಬ್ಬರೇ ಕಾರ್ಯಕ್ರಮದ ಹಾಲಿನತ್ತ ಬರುತ್ತಿದ್ದರೆ ,ಕಾರ್ಯಕ್ರಮದ ಜವಾಬ್ದಾರಿ ಹೊತ್ತವರು ಮಾತ್ರ ಕೊಂಚ ಒತ್ತಡದಲ್ಲೆ ಪೂರ್ವಸಿದ್ಧತೆಯ ತಯಾರಿಗೆ ಅತ್ತಿಂದಿತ್ತ ಓಡಾಡುತ್ತಲೇ ಇದ್ದರು. ಮುಂಡಗೋಡಿನಲ್ಲೇ ಇದ್ದವರು ತಮ್ಮ ತಮ್ಮ ಗೆಳೆಯರ ಜೊತೆ ಗುಂಪುಗೂಡಿ ಇದ್ದರೆ ,ಪರ ಊರುಗಳಿಂದ ಬಂದವರು ಮನಸ್ಸಿನಾಳದಲ್ಲಿ ಚಿಕ್ಕದೊಂದು ಅಳುಕಿಟ್ಟುಕೊಂಡೆ ಬರುತ್ತಿದ್ದರು ,ಬಹಳ ವರ್ಷಗಳ ನಂತರ ಸಿಕ್ಕ ತನ್ನ ಮಿತ್ರರನ್ನ ಬಾಚಿ ತಬ್ಬಿಕೊಂಡು ಮಾತನಾಡಿಸುವುದನ್ನು ನೋಡುವದೇ ಒಂತರ ಮಜವಾಗಿತ್ತು ,ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿರುವಾಗ ತುಂಬಾ ಬದಲಾಗಿ ಬಿಟ್ಟಿದ್ದಿಯ ,ನನ್ನ ಗುರುತು ಹಿಡಿಯಲಿಲ್ಲವ ,ಇವರ್ಯಾರು ಅಂತ ಗೊತ್ತಾಗಿಲ್ಲ ಎಂಬ ಮಾತುಗಳು ಸಹಜವಾಗಿಯೇ ಅಲ್ಲಲ್ಲಿ ಕೇಳಲು ಸಿಗುತ್ತಿತ್ತು.ಸಾಮಾನ್ಯದಂತೆಯೇ ಶುರುವಾದ ಉದ್ಘಾಟನ ಹಾಗೂ ಇನ್ನಿತರ ಕಾರ್ಯಕ್ರಮಗಳ ನಂತರ ನಡೆದ ಸ್ವ-ಪರಿಚಯ ಕಾರ್ಯಕ್ರಮದಿಂದ ಎಲ್ಲರ ಮೊಗದಲ್ಲಿ ನಗು ಅರಳಲಾರಂಭಿಸಿತು ,ಅಲ್ಲಿಂದ ಶುರುವಾದ ಪರಸ್ಪರರ ಮಾತುಗಳು ಅಲ್ಲಿಂದ ಹೊರಡುವವರೆಗೂ ನಿಲ್ಲಲೇ ಇಲ್ಲ ,ಅದ್ಯಾವ ಪರಿ ಮಾತುಗಳು ಆಮೇಲೆ ಶುರುವಾದವೆಂದರೆ ಕಾರ್ಯಕ್ರಮದ ನೀರೂಪಕಿ ಬಂದು ಯಾರು ಮಾತಡಬ್ಯಾಡ್ರಿ ಸ್ವಲ್ಪ ಸುಮ್ಮನ ಕೂತ್ಕೋರಿ - silence please ಅಂದಾಗ ,ನಾನಂತೂ ಗಕ್ಕನೆ ನಕ್ಕುಬಿಟ್ಟೆ , ಅಲ್ಲೇ ಇದ್ದ ಗುರುಗಳ ಹತ್ತಿರ ಮೈಕು ಕೊಟ್ಟು - ಇದೇನು ಕ್ಲಾಸ್ ರೂಮಾ ಅಥವಾ ಸಂತೆ ಮಾರ್ಕೆಟ್ಟಾ ಅಂತ ಅವರೆಲ್ಲರನ್ನ ಒಮ್ಮೆ ಬೈಸಿಬಿಡಬೇಕು ಅಂತ ಆ ಕ್ಷಣಕ್ಕೆ ಅನ್ನಿಸಿದ್ದಂತೂ ಸುಳ್ಳಲ್ಲ.  ಬೆಳಗಿನ ಉದ್ಘಾಟನಾ ಕಾರ್ಯಕ್ರಮದ ನಂತರ ಮಧ್ಯ ಇದ್ದ ಚಿಕ್ಕ ಬಿಡುವಿನಲ್ಲಿ  ಒಂದಿಷ್ಟು ಜನ ಗುಂಪು ಗುಂಪಾಗಿ ಹಳೆಯ ಮಿತ್ರರ ಜೊತೆ ಮಾತು ಕಥೆಯಲ್ಲಿ ತೊಡಗಿದ್ರೆ ಇತ್ತ ಹೊರಗಡೆ ಬಂದವರೆಲ್ಲ ಮಿತ್ರರ ಜೊತೆಗೂಡಿ ಚಿನ್ನಿ ದಾಂಡು ,ಬುಗುರಿ ,ಗೋಲಿ ಆಟಗಳನ್ನ ಹೆಣ್ಣು ಮಕ್ಕಳು ಕುಂಟಪ್ಪಿಲ್ಲೇ ಆಟ ಆಡುತ್ತಿರುವುದನ್ನ ನೋಡಿದರೆ ಆ ಕಾರ್ಯಕ್ರಮದ ಸಭಾಂಗಣ ಥೇಟ್ ಶಾಲೆಯಂಗಳದಂತೆ ಕಾಣುತಿತ್ತು , ಅಷ್ಟರಲ್ಲೇ ದೂರದ ಪ್ರಯಾಣದಿಂದ ಶಿಕ್ಷಕರು ಒಬ್ಬೊಬ್ಬರೇ ಬರಲಾರಂಭಿಸದರು ,ತಮಗೆ ವಿದ್ಯೆ ಕಲಿಸಿದ ಗುರುಗಳು ಬರುತ್ತಿದ್ದಂತೆ ಎಲ್ಲರೂ ಒಡಿ ಹೋಗಿ ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತ ಮಾತಾನಾಡಿಸುತ್ತಿದ್ದರು.

ಗುರುವಂದನಾ ಕಾರ್ಯಕ್ರಮ
ಬಹುತೇಕ ಬಾರಿ ಹೀಗಾಗಿರತ್ತೆ ನಮಗೆ ಪಾಠ ಹೇಳುತ್ತಿದ್ದ ಶಿಕ್ಷಕರು ಅಕಸ್ಮಾತ್ ಎದುರಿಗೆ ಬರುವಾಗ ಮನಸ್ಸು ಕಳ್ಳತನಕ್ಕೆ ಬಿದ್ದು ಅಲ್ಲಿಂದ ಬೇರೆ ದಾರಿ ಹಿಡಿದು ಓಡಿಸಿಬಿಟ್ಟಿರುತ್ತೆ ,ಅನೇಕ ಬಾರಿ ಸ್ವತಃ ನಾನೇ ಈ ತರಹ ನೋಡಿದರು ನೋಡದಂತೆ ನಡೆದುಬಿಟ್ಟಿದ್ದೇನೆ ,ಹಾಗೆ ಮುಖ ತಿರುವಿ ಬಂದಮೇಲೆ ಯೋಚಿಸಿದ್ದೇನೇ ನಾನ್ಯಾಕೆ ಹೀಗೆ  ಬಂದೇನಂತ.ಅಸಲಿಗೆ ವಿಷಯವೇನೆಂದರೆ  ಮಾತನಾಡಿದರೆ  ಏನಂತ ಮಾತನಾಡೋದು..? ಅವರಿಗೆ ನಾನು ನೆನಪಿರಬಹುದ..? ಕೇಳಿದರೆ ನನ್ನ ಬಗ್ಗೆ ಏನಂತ ಹೇಳೋದು .? ಹೀಗೆ ರಸ್ತೆಯಲ್ಲಿ ಮಾತನಾಡೋದು ಸರಿನ ..ಈ ತರಹದ ಅನೇಕ ಪ್ರಶ್ನೆಗಳ ಕಾರಣ ಮಾತನಾಡಿಸಲು ಹಿಂದೇಟು ಹಾಕಿರುತ್ತೇವೆ..ಆದರೆ ಇಲ್ಲಿ ಹಾಗಾಗಲಿಲ್ಲ ವಾತಾವರಣ ಪೂರಕವಾಗಿತ್ತು ,ಮಿತ್ರರನ್ನ ಗುರುಗಳನ್ನ ಮಾತನಾಡಿಸಲೆಂದೇ ಎಲ್ಲರೂ ಸಹ ಬಂದದ್ದು . ಹೈಸ್ಕೂಲ್ ನಿಂದ ಕಾಲೇಜಿನ ತನಕದ ಎಲ್ಲ  ಶಿಕ್ಷಕರು ಸಹ ಬಂದಿದ್ದರು.ಪ್ರತಿಯೊಬ್ಬರು ಸಹ ಅತ್ಯಂತ ಪ್ರೀತಿಯಿಂದ ತಮ್ಮ ಗುರುಗಳನ್ನ ಮಾತನಾಡಿಸುತ್ತ ನಮಸ್ಕರಿಸುತ್ತ ,ಅವರಿಗೆ ಗುರುತು ಸಿಗದಿದ್ದರೂ ಸಹ ತಾವೇ ತಮ್ಮ ಪರಿಚಯವನ್ನು ಹೇಳಿಕೊಳ್ಳುತ್ತಿರುವುದನ್ನು ನೋಡಿದಾಗ ನನಗನಿಸಿದ್ದು ನೆನಪಿನ ಉಯ್ಯಾಲೆ ಅತಿ ಸುಂದರವಾಗಿ ತೂಗುತ್ತಿದೆಯಂತ .ಭಾರತೀಯ ಪರಂಪರೆಯಲ್ಲಿ ಗುರುವಿಗೆ ಕೊಟ್ಟ ಸ್ಥಾನವೇ ಅಂತದ್ದು, ಕೇವಲ ವಿದ್ಯೆಯನ್ನ ಮಾತ್ರವಲ್ಲದೆ ,ವ್ಯಕ್ತಿತ್ವವನ್ನ ಘಟ್ಟಿಗೊಳಿಸುತ್ತ ,ಬದುಕಿನ ಮೌಲ್ಯಗಳನ್ನ ತಿಳಿಸಿ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಮಾಡುತ್ತ ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ಬೆಳೆಯುವಂತೆ ಪ್ರೇರೇಪಿಸುತ್ತಿದ್ದರು ,ಅಲ್ಲಿ ಕೇವಲ ಶಿಕ್ಷಕನಾಗದೆ ಗುರು-ಶಿಷ್ಯರಾಗುತ್ತಿದ್ದರು. ಸರ್ ಅಂತ ಹೇಳುತ್ತಾ , ಯಾವಾಗ ಪರಕೀಯರ ಶಿಕ್ಷಣ ಪದ್ಧತಿಯನ್ನ ಅಳವಡಿಸುವತ್ತ ಸಾಗಿತೋ ಅಂದಿನಿಂದಲೇ ಶಿಕ್ಷಕ ಕೇವಲ ಶಿಕ್ಷಕನಾಗಿ ಬದಲಾಗುತ್ತಾ, ಗುರು ಶಿಷ್ಯರ ನಡುವಿನ ಆ ಭಾಂಧ್ಯವ್ಯದ ಅಂತರ ಬೆಳೆಯುತ್ತ ಸಾಗಿತ ಎಂದೆನಿಸುತ್ತದೆ,ಆದರೆ ಇಲ್ಲಿ ಗುರು ಶಿಷ್ಯರ ಬಾಂಧವ್ಯವಿತ್ತು ,ಆ ಗುರು ಶಿಷ್ಯರ ನಡುವಿನ ನಂಟೆ ಇಂದಿನ ಈ ಕಾರ್ಯಕ್ರಮಕ್ಕೆ ಕಾರಣವಾಗಿದ್ದು . ಮೂವತ್ತು ವರ್ಷಗಳ ನಂತರ ತನಗೆ ವಿದ್ಯೆಯನ್ನು ಕೊಟ್ಟ ಎಲ್ಲ ಗುರುಗಳನ್ನ ಒಂದು ವೇದಿಕೆಯಲ್ಲಿ ಕೂಡಿಸಿ ನಮಗೆ ವಿದ್ಯೆಯನ್ನ ನೀಡಿ ,ನಮ್ಮ ವ್ಯಕ್ತಿತ್ವವನ್ನ ತಿದ್ದಿ ತೀಡಿ ,ಸಮಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗುವತ್ತ ಮಾರ್ಗದರ್ಶನ ನೀಡಿರುವುದಕ್ಕೆ ಗುರುಗಳೇ ತಮಗೊಂದು ಧನ್ಯವಾದ ಅಂತ ಹೇಳುವ ಭಾಗ್ಯ ಬಹುಶ ಎಲ್ಲ ಶಿಷ್ಯಂದರ ನಸೀಬಿನಲ್ಲಿ ಬರೆದಿರುವುದಿಲ್ಲ. ತಮ್ಮ ಮುಂದೆ ಇಷ್ಟಿದ್ದ ಮಕ್ಕಳು ಇಂದು ಎದೆಯೆತ್ತರಕ್ಕೆ ಬೆಳೆದು ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ಬದುಕುರುತ್ತಿರುವುದನ್ನ ನೋಡಿದಾಗ ತನ್ನ  ಮಕ್ಕಳನ್ನೇ ನೋಡಿದಷ್ಟು ಸಂತೋಷ ಗುರುಗಳಿಗೆ ಆಗಿರಬಹುದು.ಅಲ್ಲಿಂದ ಮುಂದೆ ತಮ್ಮ ನಡುವಿನ ಸಾಧಕರಿಗೆ ಸನ್ಮಾನಿಸಿ ಅವರನ್ನ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.

ಪರಸ್ಪರ ಮಾತು ,ಹಾಸ್ಯ ,ನಗು ,ಆಟ ಒಂದಿಷ್ಟು ಹಾಡು ,ಗುರುಗಳ ಜೊತೆ ಮಾತು ಮತ್ತು ಸಾಕಷ್ಟು ಕ್ಲಿಕ್ಕಿಸಿಕೊಂಡ ಫೋಟೋಗಳು , ನಡುವೆ ಆ ಒಂದಿಡಿ ದಿನ ಕಳೆದದ್ದು ಗೊತ್ತೇ ಆಗಲಿಲ್ಲ .ಬಾಲ್ಯದ ದಿನಗಳು,ಶಾಲಾ ಕಾಲೇಜಿನ ದಿನಗಳು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ,ಆ ದಿನಗಳೇ ಒಂತರ ಮಜವಾಗಿದ್ದವು ಈಗ ಆ ದಿನಗಳಿಗಂತು ಮರಳಲು ಸಾಧ್ಯವಿಲ್ಲ ಆದರೆ ಈ ಚೆಂದದ ದಿನಗಳ ನೆನಪುಗಳನ್ನ ಮೆಲಕು ಹಾಕಬಹುದಷ್ಟೇ , ಹೊಟ್ಟೆ ತುಂಬ ಹಸಿವು ಸಿಕ್ಕಿದ್ದನ್ನ ತಿಂದು ಚಿಂತೆಯಿಲ್ಲದೆ ಕಣ್ತುಂಬ ನಿದ್ದೆ ಮಾಡುತ್ತಿದ್ದೆವು ,ಬೆಳಗ್ಗೆ ಜಗಳವಾಡಿದ ಮಿತ್ರ ಮಧ್ಯಾಹ್ನದ ಹೊತ್ತಿಗೆ ಮತ್ತೆ ಜತೆಯಾಗುತ್ತಿದ್ದ ,ಗಾಯಗಳು ದೇಹದ ಮೇಲಾಗುತ್ತಿದ್ದವು ಮನಸ್ಸಿನ ಮೇಲಲ್ಲ ,ಹೇಳುತ್ತಾ ಹೊರಟರೆ ಮುಗಿಯದ ಕಥೆಯದು.ಈಗೀಗ ನಮ್ಮೆಲ್ಲರ ಬದುಕಂತು ಓಟಕ್ಕೆ ನಿಂತಂತೆ ಓಡುತ್ತಿದೆ ಯಾರಿಗೂ ಸಹ ಸಮಯವಿಲ್ಲ ,ನಾವು ಬೆಳೆಯುತ್ತ ಬೆಳೆಯುತ್ತ ನಮ್ಮ ಬದುಕು ಬದಲಾಗಿದೆ ಜೊತೆಗೆ ನಮ್ಮೂರು ಕೂಡ, ಹಾಗೆಯೇ ನಮ್ಮ ಹೆಗಲ ಮೇಲಿನ ಜವಾಬ್ದಾರಿಗಳು ತುಸು ಭಾರ ಎನಿಸುವಂತೆಯೇ ಆಗಿವೇ, ಈ ಓಟದ ಮಧ್ಯೆಯೇ ಒಂದು ವಿರಾಮ ಕೊಟ್ಟು ತುಸು ಮಟ್ಟಿಗೆ ಹೆಗಲ ಮೇಲಿನ ಭಾರವನ್ನೆಲ್ಲ ಕಳಿಚಿಟ್ಟು,  ಹಳೆಯದನ್ನೆಲ್ಲ ಒಮ್ಮೆ ನೆನಪು ಹಾಕಿದ ಒಂದಿಡೀ ದಿನವನ್ನ ಹಾಡುತ್ತ ಕುಣಿಯುತ್ತ ಕಳೆದು,ಇಲ್ಲಿಂದ ಹೊರಡುವಾಗ ಒಮ್ಮೆ ಮನಸ್ಸು ಭಾರವಾದಂತೆ ಅನಿಸಿತೋ ಅಲ್ಲಿಗೆ ಈ ಕಾರ್ಯಕ್ರಮದ ಆಶಯ ಪೂರ್ಣಗೊಂಡಂತೆ. ಹೇಗೆ ನಮಗೆ ನಮ್ಮ ಬಾಲ್ಯದ ದಿನಕ್ಕೆ ಮರಳು ಸಾಧ್ಯವಿಲ್ಲವೋ ಹಾಗೆ  ಈ ಸ್ನೇಹಮಿಲನ ಕಾರ್ಯಕ್ರಮವು ಸಹ ಇಂದಿನ ಈ ದಿನ ಕಳೆದರೆ ಮತ್ತೆಂದು ಮರಳದು.ನಮ್ಮ ನೆನಪುಗಳ ಪುಟಗಳಲ್ಲಿ ಒಂದು ಹೊಸ ಪುಟ ಸೇರಿಕೊಂಡಿತು.ಕೊನೆಯದಾಗಿ ಹೇಳುವುದು ಏನಿದೆ
ಮತ್ತೆ ಸಿಗೋಣ ಅಷ್ಟೇ...!

ಪವನ್ ಹೆಬ್ಬಾರೆ 


Friday, September 4, 2020

ನೆಮ್ಮದಿಯ ನಿಟ್ಟುಸಿರು

ದೂರ ಇರಬೇಕೆನ್ನುವಷ್ಟು ಬಂದು ಸುತ್ತಿಕೊಳ್ಳುತ್ತೇ ಈ ರಾಜಕೀಯದ ಬಳ್ಳಿ. ಅದೇಕೋ ಏನೂ ಈ ರಾಜಕೀಯ , ರಾಜಕೀಯ ಪಕ್ಷ ಮತ್ತು ಅಲ್ಲಾಗುವ ಡೊಂಬರಾಟಗಳು ಇವ್ಯಾವವು ಕೂಡ ಮೊದಲಿನೊಂದಲು ಅದೇನೋ ಒಂದು ನಕಾರಾತ್ಮಕ ಭಾವವನ್ನು ನನ್ನಲ್ಲಿ ಸ್ರಷ್ಟಿಸಿ ಬಿಟ್ಟಿವೇ. ಇಂತದೆ ಇನ್ನೂ ಅನೇಕ ಕಾರಣಗಳಿಂದ ಇವೆಲ್ಲ ರಾಜಕೀಯದ ಆಟಗಳಿಂದ ದೊರವೇ ಉಳಿದು ಬಿಟ್ಟಿದ್ದೇನೆ.  ಆದರೆ ಎಲ್ಲ ಪಕ್ಷಗಳಲ್ಲಿಯೂ ನನ್ನ ಆತ್ಮೀಯರು ಇದ್ದೆ ಇದಾರೆ ಎಲ್ಲರೊಂದಿಗೂ ಒಳ್ಳೆಯ ಬಾಂದ್ಯವ್ಯವಿದೆ. ಅದೆಷ್ಟೇ ವೀರೋಧಗಳು ಇದ್ದರು ಅದು ಅವರ ರಾಜಕೀಯ ನಿಲುವುಗಳಲ್ಲಿಯೇ ಹೊರತು ಯಾವದೇ ವ್ಯಕ್ತಿಯ ಜೊತೆಗಿಲ್ಲ. ಆದರೆ ಈಗ ವಿಷಯ ಅದಲ್ಲ. ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಬೆರೆಯುತ್ತಿದ್ದಾನೆ , ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ ಎಂದರೆ , ಆತ ರಾಜಕೀಯಕ್ಕಾಗಿ ಮಾಡುತ್ತಿದ್ದಾನೋ ಏನೋ..? ಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನ..? ಇವನು ಯಾವ ಪಕ್ಷದವನು ಎಂತೆಲ್ಲ, ಆ ವ್ಯಕ್ತಿಯ ಸುತ್ತ ಕಥೆಗಳು ಶುರುವಾಗತ್ತೆ, ಸಾಮಾಜಿಕ ಕಾರ್ಯವೆಂದರೆ ಬರಿ ರಾಜಕೀಯ ಧುರೀಣರು ಎನಿಸಿಕೊಂಡವರು ಹಾಗೂ ರಾಜಕೀಯ ವ್ಯಕ್ತಿಗಳೇ ಮಾಡುವದು ಎಂಬಂತಹ ಅಲಿಖಿತ ಚೌಕಟ್ಟೊಂದು ಸಮಾಜದಲ್ಲಿ ಬೆಳೆದು ನಿಂತಿದೆ. ಖಂಡಿತವಾಗಿಯೂ ಇದು ತಪ್ಪು ಕಲ್ಪನೆಯೇ ಸರಿ. 
ಈಗ ನನ್ನ ವಿಚಾರದಲ್ಲೂ ಸಹ ಆಗಿರುವಂತದ್ದು ಇದೆ., ಪ್ರತಿ ಬಾರಿ ಯಾವದಾದರು ಚುನಾವಣೆ ಬಂತೆಂದರೆ ಯಾಕಾರು ಬರುತ್ತಪ್ಪ ಎನ್ನಿಸುವಷ್ಟು ಹಿಂಸೆಯನಿಸಿ ಬಿಡುತ್ತೆ. ನೀನು ಈ ಪಕ್ಷವ ಆ ಪಕ್ಷವ ಎನ್ನುವದರಿಂದ ಹಿಡಿದು ಸಂಬಂಧವೇ ಇಲ್ಲದ ಕಡೆಯಲ್ಲಿ ಎಲ್ಲ ನನ್ನ ಹೆಸರು ತಳಕು ಹಾಕಿಕೊಂಡು ಬಿಡುತ್ತೆ. ಸತ್ಯವಾಗಿಯೂ ಹೇಳುತ್ತೇನೆ ಈ ರಾಜಕೀಯ ನನ್ನ ಉದ್ದೇಶವೇ ಅಲ್ಲ , ಅಕಸ್ಮಾತ್ ರಾಜಕೀಯವೇ ನನ್ನ ಉದ್ದೇಶವಾಗಿದ್ದರೆ ಇಷ್ಟೊತ್ತಿಗೆ ಯಾವದೇ ಪಕ್ಷದಲ್ಲಿಯೋ  ಅಥವಾ ಕಳೆದ ಚುನಾವಣೆಯಲ್ಲಿ ನೇರವಾಗಿಯೇ ಕಣದಲ್ಲಿ ಭಾಗವಹಿಸುರಿತ್ತಿದ್ದೆ. ಚಕ್ರವರ್ತಿ ಅಣ್ಣನ ಮೂಲಕ ಸೈನಿಕರು ಹಾಗೂ ಸ್ವಾತಂತ್ರ್ಯದ ಕಲಿಗಳ ವೀರಗಾಥೆಯನ್ನ ಕೇಳುತ್ತ ವಿವೇಕಾನಂದರ ಮಾರ್ಗದರ್ಶನದಲ್ಲಿ ಸಾಮಾಜಿಕವಾಗಿ ಬೆರೆತು ರಾಷ್ಟ್ರಿಯತೆಗಾಗಿ ಬದುಕು ಸವಿಸಬೇಕು ಎಂಬ ಆಲೋಚನೆಯನ್ನ ಇಟ್ಟುಕೊಂಡವನು ಅಷ್ಟೇ. ಇನ್ನು ನಮ್ಮನ್ನು ತೀರ ಹತ್ತಿರದಿಂದ ಬಲ್ಲವರಿಗೆ ಗೊತ್ತು ನಾವಿಟ್ಟುಕೊಂಡ ಗುರಿ ಏನೂ ಎಂಬಂತಹದು. ಜಗತ್ತಿನ ಯಾವ ಆಗೂ ಹೋಗುಗಳ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ ದೂರಉಳಿದ ಅಪರೂಪಕ್ಕೊಮ್ಮೆ ಸಿಗುವ ಮಿತ್ರರು ಏನಪ್ಪಾ ನಿನ್ ಬಿಡು ಈಗ ಫುಲ್ ರಾಜಕೀಯ (politicion) ಆಗಿ ಬಿಟ್ಟಿದ್ದಿಯ ಎಂದು ಹೇಳಿದಾಗ ಅವರಿಗೆ ಹೇಗೆ ಮನವರಿಕೆ ಮಾಡುವದು ಎಂದು ಅರಿವಾಗದೆ ನಕ್ಕು ಸುಮ್ಮನಾಗಿಬಿಡುತ್ತೇನೆ. ನನಗೂ ಸಹ ಎಲ್ಲರಂತೆ ಮನೆಯ ಜವಾಬ್ದಾರಿ ಇದೆ,ವಯಕ್ತಿಕ ತಾಕಲಾಟಗಳಿವೆ ,  ವೃತ್ತಿ ಜೀವನದ ಜವಾಬ್ದಾರಿ ಇದೆ , ನನ್ನೂರಿನಿಂದ ದೂರ ಉಳಿದು ಹತ್ತು ವರ್ಷಗಳಿಂದ ಅದೀಕವೇ ಆಯಿತು ಆದರೆ ಎಂದಿಗೂ ಸಹ ನನ್ನೂರಿನ ಈ ಆತ್ಮೀಯತೆ , ಭಾಂದ್ಯವ್ಯ ಅಥವಾ ದೂರಲ್ಲಿದ್ದಿನೇ ಎಂಬಂತಹ ಭಾವ ಎಂದಿಗೂ ಕಾಡಲೇ ಇಲ್ಲ. ಇದಕ್ಕೆಲ್ಲ ಕಾರಣವಾಗಿದ್ದು ನನ್ನ ಯುವಾ ಬ್ರಿಗೇಡ್. ವಿವೇಕಾನಂದರನ್ನ ನನ್ನೊಳಗೆ ಇಂಜೆಕ್ಟ್ ಮಾಡಿದ ಪರಿಣಾಮವೋ ಅಥವಾ ಚಕ್ರವರ್ತಿ ಅಣ್ಣನ ಮೂಲಕ ಒಳಗೆ ಇಳಿದ ರಾಷ್ಟ್ರೀಯತೆಯ ಭಾವವೋ..! ನನ್ನೂರಿನ ಕುರಿತಂತೆ ಅನೇಕ ಕನಸುಗಳನ್ನ ಕಟ್ಟಿಕೊಳ್ಳುವಂತೆ ಮಾಡಿಬಿಟ್ಟಿದೆ. ದೂರದ ಊರಿನಲ್ಲೇನೋ ಒಂದು ಒಳ್ಳೆಯ  ಉದ್ಯಾನವನ, ಬಸ್ ಸ್ಟಾಂಡ್ , ಒಂದೊಳ್ಳೆ ಕಾಲೇಜು, ಒಳ್ಳೆಯ ವ್ಯವಸ್ಥೆಯುಳ್ಳ ಆಸ್ಪತ್ರೆ ,ತರುಣರಿಗೆ ಒಂದಿಷ್ಟು ಕೆಲಸ,  ಕೊನೆಗೆ ಒಳ್ಳೆಯದೊಂದು ರಸ್ತೆ ಕಂಡಾಗಲು ಸಹ ಇದೂ ನಮ್ಮೂರಲ್ಲಿ ಇದ್ದರೆ ಎಷ್ಟು ಚೆಂದವಲ್ಲವ ಎಂದೆನಿಸುತ್ತದೆ. ಮಾತ್ ಆಡಿದರೆ ಸಾಕು ಅದು ಹಾಗೆ ಇದು ಹೀಗೆ ಅಂತ ಹತ್ತು ಹಲವು ಸಮಸ್ಯೆಗಳನ್ನೇ ಹೇಳುತ್ತಾರೆಯೇ ಹೊರತು ಅದಕ್ಕೆ ಪರಿಹಾರ ಏನೂ ..? ಏನೂ ಮಾಡಬಹುದು ಎಂಬ ಪ್ರಶೇ ಬಂದಾಗ ನಿಜಕ್ಕೂ ಅವರ ಹತ್ರ ಉತ್ತರವೇ ಇರಲ್ಲ. ಇನ್ನು ಇವಗಳನ್ನೆಲ್ಲ ಸರಿ ಮಾಡುವ ಒಟ್ಟು ಅವಕಾಶ ಕೈಯಲ್ಲಿ ಇದ್ದಾಗ ಒಂದಿಷ್ಟು ನೋಟುಗಳಿಗೆ ಬಲಿಯಾಗಿ ಮತಗಳನ್ನು ಮಾರಿಕೊಂಡು ಮತ್ತೈದು ವರ್ಷ ಸಮಸ್ಯೆಗಳ ಸರಮಾಲೆಯಲ್ಲಿ ಇನ್ನೊಂದಿಷ್ಟು ಸಮಸ್ಯೆಗಳನ್ನ ಪೋಣಿಸುತ್ತ ಕೂತು ಬಿಡುತ್ತಾರೆ. ಮೊನ್ನೆ ನಡೆದ ಪಟ್ಟಣ ಚುನಾವಣೆಯಂತೂ ನಿಜಕ್ಕೂ ತುಂಬಾ ಬೇಸರ ತಂದು ಬಿಟ್ಟಿದೆ. ಯಾವ ಚುನಾವಣಾ ಅಭ್ಯರ್ಥಿಯು ಅಥವಾ ನಾಯಕನು ಬ್ರಷ್ಟನಾಗಿರುವದಿಲ್ಲ ಅಥವಾ ಕೆಟ್ಟವನಾಗಿರುವದಿಲ್ಲ  , ಆತ ಹೇಗೆ ಇದ್ದರೂ ಸಹ ಅದು ಮತದಾರರ ಸ್ರಷ್ಟಿ ಅಷ್ಟೇ. ಒಂದಂತೂ ಸತ್ಯ ಅರಿವಿಗೆ ಬಂದಾಗಿದೆ ಎಲ್ಲಿಯವರೆಗೆ ನೋಟಿನ ಮೇಲೆ ಓಟಿನ ಆಟ ನಡೆಯತ್ತೋ ಅಲ್ಲಿಯ ವರೆಗೆ ಮುಂಡಗೋಡ ಸುಧಾರಿಸುವದಿಲ್ಲ ಬರೆದಿಟ್ಟುಕೊಂಡು ಬಿಡಿ ಇದನ್ನ. ಅದು ಆದರೂ ಸಹ ಅಮೆ ಗತಿಯದ್ದೇ . ಉದಾಹರಣೆಗೆ ಈ ವರ್ಷ ಏನಾದ್ರೂ ಮುಂಡಗೋಡಿಗೆ ಬಸ್ ಸ್ಟಾಂಡ್ ನಿರ್ಮಾಣವಾದರೆ ಅದಕ್ಕೆ ಏನೇನ್ನುವಿರಿ..? 
ನನ್ನವರಿಗೆ ಅದ್ಯಾಕೆ ಇವೆಲ್ಲ ಬೇಕು ಅಂತ ಅನಿಸುವದಿಲ್ಲವೋ , ಅರ್ಥವಾಗುವದಿಲ್ಲವೋ  ಭಗವಂತನೇ ಬಲ್ಲ. ಅಥವಾ ಈ ಊರೇ ಇಷ್ಟು ಎಂದು ನಿರ್ಧರಿಸಿ ಬಿಟ್ಟಂತೆ ಇದೆ. ಹೇಳುತ್ತಾ ಹೋದರೆ ಇದು ಮುಗಿಯದೆ ಹೊದಿತು ಸಾಕು. ಇನ್ನೇನು ಲೋಕಸಭೆ ಚುನಾವಣೆ ಮತ್ತೆ ಬರುತ್ತಿದೆ ರಾಜಕೀಯ ಹೌದೋ ಅಲ್ಲವೋ ಆದರೆ ಈ ಬಾರಿ ಮತ್ತೆ ಮೋದಿಯನ್ನ ಬಲಿಷ್ಠಪಡಿಸಬೇಕಿದೆ , ದೇಶಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ಸೇವಕನಿಗೆ ಮತ್ತೊಮ್ಮೆ ಅವಕಾಶ ನೀಡಬೇಕಿದೆ. ಮೋದಿಯ ಕುರಿತು ಮಾತನಾಡುತ್ತೇನೆಂದೆರೆ ನಾನು ಭಾಜಪಾ ಆಗಿಬಿಟ್ನ..? 😉😛😆(2018 ರಲ್ಲಿ ಬರೆದದ್ದು)

Monday, April 6, 2020

ಶಕ್ತಿಮಾನ್ ಗೆ ಶಕ್ತಿಗಳು ದೊರೆತಿದ್ದು ಎಲ್ಲಿಂದ..?

  ಭಾರತದಲ್ಲಿ ಶಕ್ತಿಮಾನ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.? 90ರ ದಶಕದ ಕೊನೆಯಲ್ಲಿ ಶುರುವಾದ ಈ ಧಾರಾವಾಹಿಯ ಸರಣಿಯು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಅಚ್ಚುಮೆಚ್ಚಿನದಾಗಿತ್ತು.ಶಕ್ತಿಮಾನ್ ಭಾರತದ ಮೊದಲ ಸೂಪರ್ ಹೀರೊ. ಈಗ ಕರೋನ ಕಾರಣದಿಂದ ಪೂರ್ತಿ ದೇಶವೇ ಲಾಕ್ ಡನ್ ಆದ ಹಿನ್ನೆಲೆಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಖ್ಯಾತ tv ಸರಣಿಗಳಾದ "ರಾಮಾಯಣ" "ಮಹಾಭಾರತದ" ಜೊತೆ ಸುಮಾರು 21ವರ್ಷಗಳ ಬಳಿಕ ಶಕ್ತಿಮಾನ್ ಕೂಡ ಪ್ರಸಾರವಾಗುತ್ತಿದೆ. ಶಕ್ತಿಮಾನ್ ನಂತರ ನಾವು ಸಾಕಷ್ಟು ಸೂಪರ್ ಹೀರೋಗಳನ್ನ ನೋಡಿದಿವಿ  ಐರನ್ ಮ್ಯಾನ್ ,ಸ್ಪೈಡರ್ ಮ್ಯಾನ್ , ಹಲ್ಕ್ , ಕ್ರಿಶ್ ,ರಾ-ವನ್ ಇತ್ತೀಚಿಗೆ ತೆರೆಕಂಡ ರಜನಿಕಾಂತನ ಚಿಟ್ಟಿ ಜೊತೆಗೆ ಅನೇಕ ಸೂಪರ್ ಹೀರೋಗಳು ಆಗಿಹೋದರು ಆದರೆ ಇವರೆಲ್ಲ ಸೂಪರ್ ಹೀರೋಗಳಾದ ಹಿನ್ನೆಲೆಯಲ್ಲಿ ಒಂದು ಕಥೆ ಇದೆ ಅಥವಾ ಇನ್ಯಾವದೋ ಒಂದು ಕಡೆಯಿಂದ ಇವರಿಗೆ  ಶಕ್ತಿ ಲಭಿಸಿರುತ್ತದೆ ಆದರೆ ಇವಗಳೆಲ್ಲ ಕೇವಲ ಕಪೋಕಲ್ಪಿತ ಕಥೆಗಳು ನಿಜ ಜೀವನದಲ್ಲಿ ಸಾಧ್ಯವಿಲ್ಲ ಎಂಬುದು ಸಿನೆಮಾ/ಪಾತ್ರದಿಂದ ಆಚೆ ಬರುತ್ತಲೇ ಅರಿವಾಗುತ್ತೆ.ಈಗ ವಿಷಯಕ್ಕೆ ಬರೋಣ ಶಕ್ತಿಮಾನ್ ಗೆ ಶಕ್ತಿಗಳು ಬಂದಿದ್ದು ಎಲ್ಲಿಂದ..? ಆತ ಹೇಗೆ ಗಳಿಸಿಕೊಂಡ ಈ ಶಕ್ತಿಗಳನ್ನ.? ಮತ್ತೆ ಮರುಪ್ರಸಾರವಾಗುತ್ತಲೇ  ಇಂತಹ ಪ್ರಶ್ನೆ ಮನಸಲ್ಲಿ ಮೂಡತೊಡಗಿದವು.ಇವುಗಳ ಉತ್ತರಕ್ಕೆ ಈ ಪುಟ್ಟ ಪರಿಶ್ರಮ.ಶಕ್ತಿಮಾನ್ ನ ಮೊದಲನೇ ಸಂಚಿಕೆ ನೋಡಿದವರಿಗೆ ಗೊತ್ತಿರುತ್ತೆ ಆದರೆ ಹೆಚ್ಚಿನವರು ಅದನ್ನ ನೋಡಿಯೇ ಇಲ್ಲ ಅಕಸ್ಮಾತ್ ನೋಡಿದ್ರು ಕೂಡ ನನ್ನಂಥವರಿಗೆ ಅರ್ಥವಾಗಿರಲಿಕ್ಕಿಲ್ಲ ಯಾಕಂದ್ರೆ ನನಗಾಗ ಎಂಟೋ ಓಬತ್ತೋ ವರ್ಷ😉 ,ಯಾಕೋ ಇಂದು ಈ ವಿಷಯದಲ್ಲಿ ತುಂಬಾ ಅಸಕ್ತನಾಗಿ ಉತ್ತರಗಳನ್ನ ಹುಡುಕಾಡುತ್ತ ಕೂತೆ.



ಶಕ್ತಿಮಾನ್ ಎಂದರೆ ಮೊದಲು ನೆನಪಾಗೋದು ಆತ ಗಿರಿ ಗಿರಿ ತಿರುಗುವದು ಜೊತೆಗೆ ತಲೆಯಲ್ಲಿ ಗುನುಗೂಡುವದೇ  ಅದರ ಶೀರ್ಷಿಕೆಯ ಹಾಡು ಶಕ್ತಿಮಾನ್ ಶಕ್ತಿಮಾನ್ ಶಕ್ತಿಮಾನ್ (ಹಾಡಿನ ದಾಟಿಯಲ್ಲೇ ಒಮ್ಮೆ ಓದಿಬಿಡಿ 😜)
ಈ ಹಾಡಿನ ದಾಟಿಯಿಂದ ಸ್ವಲ್ಪ ಒಳಗೆ ಇಳಿದು ಅದರ  ಸಾಹಿತ್ಯವನ್ನ ನೋಡುತ್ತಾ ಹೋದರೆ ಶಕ್ತಿಮಾನ್ ನ ರೂಪ ಅನಾವರಣ ಗೊಳ್ಳುವದರ ಜೊತೆಗೆ ನಿರ್ದೇಶಕ ಏನೂ ಹೇಳಲು ಹೊರಟಿದ್ದಾನೆ ಅನ್ನೋದು ಅರ್ಥವಾಗುತ್ತ ಹೋಗುತ್ತೆ. ಮೊದಲು ಆತ ಶಕ್ತಿ ಪಡೆದುಕೊಂದದ್ದು ಹೇಗೆ ಅಂತ ನೋಡೋಣ. 
ಅದು ಶಕ್ತಿಮಾನ್ ನ  ಮೊದಲ ಸಂಚಿಕೆ ,ಹಿನ್ನಲೆ ಧ್ವನಿಯಿಂದ ಶುರುವಾಗತ್ತೆ. ಅನಂತ ಬ್ರಹ್ಮಾಂಡ ಅಂತರಿಕ್ಷ ಮತ್ತು ಅದರ ಒಂದು ಸಣ್ಣ ಭಾಗ ಪ್ರಥ್ವಿ - ಹತ್ತು ಸಾವಿರ ವರ್ಷಗಳ ಹಿಂದೆ ನಿರ್ಮಲ ,ಸುಂದರ ಮತ್ತು ಈ ಪವಿತ್ರ ಪ್ರಥ್ವಿಯ ಮೇಲೆ ಸುರ್ಯಾಂಶು ಅಂದರೆ ಸೂರ್ಯ ವಂಶಿಗಳ ರಾಜ್ಯವಿತ್ತು.ಯೋಗಿ ಮತ್ತು ತಪಸ್ವಿಗಳಿಂದ ಈ ಪ್ರಥ್ವಿಯ ಮೇಲೆ ಬೆಳಕು ತೇಜಸ್ವಿಮಯವಾಗಿತ್ತು.ಪೂಜೆ ವೇದ ಮತ್ತು ಮಂತ್ರ ಪಠಣಗಳಿಂದ ಈ ಪ್ರಥ್ವಿಯೂ ಪವಿತ್ರವಾಗಿತ್ತು.ಯೋಗ ಶಕ್ತಿಗಳಿಂದ ಈ ಪ್ರಥ್ವಿಯನ್ನ ಪವಿತ್ರ ಆತ್ಮಗಳು ಸಂಭಾಳಿಸುತ್ತಿದ್ದವು.ಇವತ್ತಿನಿಂದ ಆರುಸಾವಿರ ವರ್ಷಗಳ ಹಿಂದೆ ಕಲಿಯುಗದ ಆರಂಭವಾಯಿತು.ಕಲಿ ಜನಗಳಲ್ಲಿ ಪ್ರವೇಶಮಾಡಿದ ,ವಿಚಾರಗಳು ವಿಕಾರದಲ್ಲಿ ಬದಲಾದವು.ಇಂದು ಎಲ್ಲ ರೀತಿಯ ವಿಕಾರಗಳಿಂದ ಪ್ರಥ್ವಿ ದ್ರಷ್ಟವಾಗುತ್ತಿದೆ.ಅತ್ಯಾಚಾರ ಬೆಳೆದು ನಿಂತಿದೆ ಮಾನವಿಯತೆ ದಿನದಿನವೂ ಸಾಯುತ್ತಿದೆ.ಪ್ರತಿ ದಿನವೂ ಹೆಚ್ಚುತ್ತಿರುವ ಕ್ರೋಧ & ಅತ್ಯಾಚಾರಗಳಿಂದ ಈ ಪ್ರಥ್ವಿಯೂ ನಡುಗುತ್ತಿದೆ ರಕ್ತದ ಆಹಾಕಾರವಾಗುತ್ತಿದೆ. ಎಲ್ಲಕಡೆಯಲ್ಲೂ ಕತ್ತಲು ಪ್ರತಿಕ್ಷಣವೂ ಕೇವಲ ಕತ್ತಲು .ಈ ಅಂಧಕಾರದ ಸಾಮ್ರಾಜ್ಯದಲ್ಲಿ ಮಾನವೀಯತೆಯನ್ನು ಅನ್ಯಾಯದಿಂದ ಅತ್ಯಾಚಾರದಿಂದ ರಕ್ಷಿಸಲು ಜನ್ಮಗೊಂಡ ಒಂದು ಸೂರ್ಯನ ಅಂಶ.ಹಿನ್ನಲೆಯ
 ಧ್ವನಿಯಲ್ಲಿ ಇಷ್ಟು ಧ್ವನಿ ಉರಳುತ್ತಿದ್ದಂತೆ ಮೊದಲು ದ್ರಶ್ಯ ಶುರುವಾಗತ್ತೆ ವ್ಯಕ್ತಿಯೊಬ್ಬ ಯಜ್ಞದ ಮುಂದೆ ಕುಳಿತು ಹವನವನ್ನು ಮಾಡುತ್ತ ಗಾಯತ್ರಿ ಮಂತ್ರವನ್ನ ಹೇಳುತ್ತಿರುತ್ತಾನೆ.ಯಜ್ಞಾಹುತಿ ಮುಗಿಯುತ್ತಿದ್ದಂತೆ ಎದ್ದು ನಿಂತು ಗುರುಗಳಿಗೆ ಪ್ರಣಾಮವನ್ನು ಮಾಡುತ್ತಾನೆ .ಒಂದಿಷ್ಟು ಮಾತುಗಳ ನಂತರ ಗುರು ಹೇಳ್ತಾನೆ ನೀನಿಗ ಪಂಚಮಹಾಭೂತ ಯಾತ್ರೆಯನ್ನ ಕೈಗೊಳ್ಳಬೇಕು.ನಿನ್ನ ಯೋಗದ ಶಕ್ತಿಯ ಮೂಲಕ ಪಂಚಮಹಾಭೂತಗಳಲ್ಲಿ ವಿಭಕ್ತವಾಗಬೇಕು.ನೀನು ಈ ಕಾರ್ಯಕ್ಕೆ ಶಖ್ಯವಾಗಿದಿಯ ನಿನ್ನ ಕುಂಡಲಿನಿ ಪರಿಪೂರ್ಣ ಜಾಗ್ರತವಾಗಿದೆ.ಆತ ಗುರುಗಳ ಅಪ್ಪಣೆಯಂತೆ  ಯಜ್ಞದಲ್ಲಿ  ಕುಳಿತು ತನ್ನನ್ನು ತಾನು ವಿಭಕ್ತಗೊಳಿಸಿ ಗುರುವಿನ ಒಂದೊಂದೇ ಆಜ್ನ್ಯೆಯನ್ನು ಪಾಲಿಸುತ್ತಾ ಪಂಚಮಹಾಭೂತಗಳಿಂದ ತನ್ನ ಶಕ್ತಿಯನ್ನ ಸಂಪಾದಿಸುತ್ತ ಸಾಗುತ್ತಾನೆ. ಮುಂದಿನ ದ್ರಶ್ಯ ಸಾಗುತ್ತೆ.
ಭೂಮಿಯು ಸ್ಥಾಯಿತ್ವ ,ಆಧಾರ ಮತ್ತು ಸ್ನೇಹಶೀಲತೆಯನ್ನು ನೀಡುತ್ತೆ ,ಇದರಂತೆ ನೀನು ಧೀರ ಶೀಲ ಮತ್ತು ಸ್ಥಿರವಾಗು.
ವಾಯುವು -ಪ್ರಾಣಶಕ್ತಿ ,ಸ್ವರ ಮತ್ತು ನಾದವಾಗಿದೆ ಇದರಿಂದ ನೀನು ವಾಯುವಿನ ತರ ತಿವ್ರಗಾಮಿ ಮತ್ತು ನಿನ್ನ ಶ್ರವಣ ಶಕ್ತಿ ಅಭೂತಪೂರ್ಣವಾಗುವುದು.
ಅಗ್ನಿ - ಶಕ್ತಿ ಮತ್ತು ಪ್ರಚಂಡವಾಗಿದೆ ,ಪವಿತ್ರವಾಗಿದೆ ,ಕ್ರೋಧವಾಗಿದೆ ಇದರಿಂದ ಸಂಚರಿಸಿ ಯಾರು ಕೂಡ ಅಪವಿತ್ರವಾಗಿರುವದಿಲ್ಲ.ಇದನ್ನ ಪ್ರತೀಕದ ರೂಪದಲ್ಲಿ ಸ್ವೀಕರಿಸು.
ನೀರು ಜೀವನವಾಗಿದೆ ,ನಿರ್ಮಲವಾಗಿದೆ, ಪ್ರಶಾಂತವಾಗಿದೆ. ನೀರು ಅನಶ್ವರವಾಗಿದೆ ಇದನ್ನು ಪ್ರತೀಕವಾಗಿ ಸ್ವೀಕರಿಸಿ ನೀನು ಜೀವನ ರಕ್ಷಕನಾಗು 
ಆಕಾಶದ- ಆಳವು ಜ್ನ್ಯಾನದ ರೀತಿಯಲ್ಲಿ ಅನಂತವಾಗಿದೆ ,ಬ್ರಹ್ಮನ ತರ ವಿಶಾಲವಾಗಿದೆ ,ಶೂನ್ಯವಾಗಿದ್ದರು ಸಹ ಸಕಲ ಉತ್ಪತ್ತಿಗೆ ಕಾರಣವಾಗಿದೆ.ಈ ಗುಣಗಳನ್ನು ಮಹತ್ವವಾಗಿ ಪರಿಗಣಿಸಿ ಅದರಂತೆ ನೀನು ಬಣ್ಣ ಮತ್ತು ಆಕಾರದ ಬಂಧನಗಳಿಂದ ಮುಕ್ತನಾಗು.
ಹೀಗೆ ತಾನು ತನ್ನ ಯೋಗಶಕ್ತಿಯ ಮೂಲಕ ವಿಭಕ್ತನಾಗಿ ಪಂಚಭೂತಗಳಿಂದ ಒಂದೊಂದು ಶಕ್ತಿಯನ್ನ ಪಡೆದು ಶಕ್ತಿಮಾನವನಾಗಿ ಬಂದು ನಮ್ಮ ಮುಂದೆ ನಿಲ್ಲುತ್ತಾನೆ.





ಇನ್ನೂ ಶಕ್ತಿಮಾನದೂ ಒಂದು ತೂಕವಾದರೆ ಅದರ ಶೀರ್ಷಿಕೆ ಗೀತೆಯ ತೂಕ ಇನ್ನೊಂದ ಕಡೆಗೆ.ನನಗಂತೂ ಶಕ್ತಿಮಾನಗಿಂತ ಈ ಹಾಡೇ ಬಲು ಅಚ್ಚುಮೆಚ್ಚು ಹಾಡಿನ ಒಂದೊಂದು ಸಾಲುಗಳು ಸಹ ಅದ್ಬುತ .ಬನ್ನಿ ಹಾಡಿನ ಅರ್ಥವನ್ನ ನೋಡೋಣ .
ಹಾಡಿನ ಮೊದಲನೇ ಚರಣದಲ್ಲಿ ಹೀಗಿದೆ 
अदभुत अदम्य साहस की परिभाषा है
ये मिटती मानवता की आशा है
ये श्रृष्टि की शक्ति का वरदान है
ये अवतार नहीं है ये इंसान है
ಅರ್ಥ -ಅದ್ಬುತ ಅದಮ್ಯ ಸಾಹಸದ ಮೂರ್ತಿಯಾಗಿದ್ದಾನೆ,ನಶಿಸಿಹೋಗುತ್ತಿರುವ ಮಾನವಿತೆಯ ಆಶಾಕಿರಣವಾಗಿದ್ದಾನೆ,ಇದು ಸ್ರಷ್ಟಿಯ ಶಕ್ತಿಯ ವರದಾನವಾಗಿದೆ ,ಇದು ಯಾವದೇ ಅವತಾರವಲ್ಲ ಸಾಮಾನ್ಯ ಮನುಷ್ಯನಾಗಿದ್ದಾನೆ.

ಎರಡನೇ ಚರಣದಲ್ಲಿ ಹೀಗಿದೆ
ये आत्मशक्ति है
दुनिया बदल सकती है
फूलों में ढल सकती है
शोलों सी जल सकती है
होता है जब आदमी को
अपना ज्ञान.. कहलाया वो शक्तिमान
ಇದು ಆತ್ಮಶಕ್ತಿಯಾಗಿದೆ,ಜಗತ್ತನ್ನು ಬದಲಾಯಿಸಬಹುದು,ಹೂವಿನಲ್ಲಿ ಒಂದಾಗಬಹುದು, ಬೆಂಕಿಯಂತೆ ಧಗ ಧಗಿಸಬಹುದು,ಯಾವಾಗ ಮನುಷ್ಯನಿಗೆ ತನ್ನ ಜ್ನ್ಯಾನದ ಪರಿಚಯವಾಗತ್ತೋ ಆಗ ಆತ ಶಕ್ತಿಮಾನ್ ಎನಿಸಿಕೊಳ್ತಾನೆ.

ಶಕ್ತಿಮಾನ್ ಶಕ್ತಿಗಳನ್ನ ಪಡೆದುಕೊಂಡ ರೀತಿ ,ಶೀರ್ಷಿಕೆಯ ಹಾಡು ಮತ್ತು ಒಂದಿಷ್ಟು ಸರಣಿಗಳನ್ನು ನೋಡಿದಾಗ ಸ್ಪಷ್ಟವಾಗಿ ಅರ್ಥವಾಗತ್ತೆ ನಿರ್ದೇಶಕ ಯಾವುದನ್ನು ಹೇಳಲು ಹೊರಟಿದ್ದಾನೆ ಅಂತ.ಈ ಕಲಿಯುಗದ ಅಂಧಕಾರದಲ್ಲಿ ಬೇಕಾಗಿರುವದು ಸತ್ಯದ ಬೆಳಕು ಅದು ಕೇವಲ ನಮ್ಮಿಂದ ಮತ್ತು ಆಧ್ಯಾತ್ಮದ ಚಿಂತನೆಯಿಂದ ಮಾತ್ರ ಸಾಧ್ಯ.ಶೀರ್ಷಿಕೆಯ ಗೀತೆಯ ಒಟ್ಟು ಸಾರಾಂಶ ಶಕ್ತಿಮಾನ್ ಯಾವದೇ ಅವತಾರ ಪುರಷನಲ್ಲ ಸಾಮಾನ್ಯ ಮನುಷ್ಯ ,ಸಕಲ ಶಕ್ತಿಯು ಕೂಡ ಮನುಷ್ಯನ ಅಂತರಾಳದಲ್ಲಿ ಅಡಗಿ ಕೂತಿದೆ ಅದನ್ನ ಕಂಡುಕೊಳ್ಳುವ ಪ್ರಯತ್ನವನ್ನ ಮಾಡಬೇಕು,ಅದರಲ್ಲಿ ಸಫಲನಾದಾಗ ಮನುಷ್ಯ ಶಕ್ತಿಮಾನವನಾಗುತ್ತಾನೆ. ಹೀಗೆ ಲೋಕ ಕಲ್ಯಾಣಕ್ಕಾಗಿ ಶಕ್ತಿಗಳನ್ನ ಗಳಿಸಿಕೊಂಡ ಯೋಗಿಯೂ ಜಗತ್ತನ್ನೇ ಆಳಬಹುದು. ಒಂದು ಸೂಪರ್ ಹೀರೊನ ಕಥೆಯನ್ನು ಹೆಣೆಯಬೇಕಾದ್ರು  ಸಹ ಇಷ್ಟೊಂದು ಅಚ್ಚುಕಟ್ಟಾಗಿ ,ವಾಸ್ತವಕ್ಕೆ ಹತ್ತಿರವಾಗಿ ತಯಾರಿಸುವುದಕ್ಕೆ ಸಾಧ್ಯವಿರುವದು ಭಾರತಕ್ಕೆ ಮಾತ್ರ.ಭಾರತದ ಶಕ್ತಿಯೇ ಆಧ್ಯಾತ್ಮ .ಇದನ್ನೆಲ್ಲ ನೋಡಿದ ಮೇಲೆ ನನಗೆ ಉತ್ತರವಂತೂ ದೊರೆತಿತ್ತು ಜೊತೆಗೆ ಅರ್ಥವಾಗಿದ್ದು ಎರಡು ವಿಚಾರ ಮೊದಲನೆಯದು ಶಕ್ತಿಮಾನ್ ಕೂಡ ಕೋಮುವಾದಿಯೇ😜.ಎರಡನೆಯದು ಕರೋನ ಎಂಬ ಅಂಧಕಾರದಿಂದ ಈ ದೇಶವನ್ನ ರಕ್ಷಿಸುತ್ತಿರುವ ನಮ್ಮ ಮೋದಿ ಕೂಡ ಶಕ್ತಿಮಾನ್.


Pavan Hebbare 
Mundgod