Total Pageviews

Sunday, August 22, 2021

ಈ ಬಾರಿ ಮತದಾರ ನಿಜಕ್ಕೂ ಗೊಂಧಲಕ್ಕೆ ಒಳಗಾಗಿ ಬಿಟ್ಟಿದ್ದಾನೆ.ಯಾಕೆ ಗೊತ್ತಾ..?

ಚುನಾವಣೆ ಬಂತೆಂದರೆ ಸಾಕು ಪೂರ್ತಿ ನಗರದ ತುಂಬೆಲ್ಲ ಅದೇನೋ ಸಂಚಲನವೊಂದು ಶುರುವಾಗಿಬಿಡತ್ತೆ , ಅದರಲ್ಲೂ ಈ ಪಟ್ಟಣದ ವಾರ್ಡುಗಳ ಚುನಾವಣೆ ಬಂತೆಂದರೇ ಸಾಕು ಈ ಸಂಚಲನ ತುಸು ಜೋರಾಗಿಯೇ ಇರತ್ತೆ. ನಮ್ಮ ಪಾರ್ಟಿ ನಿಮ್ಮ ಪಾರ್ಟಿ , ಪಕ್ಷೇತರ ಈ ಅಭ್ಯರ್ಥಿ ಆ ಅಭ್ಯರ್ಥಿ ಹೀಗೆ ಗಲ್ಲಿಯ ಪ್ರತಿ ತಿರುವಿನ ವ್ಯಕ್ತಿಯು ಕೂಡ ವಿಮರ್ಶಕನಾಗಿ ಬಿಡುತ್ತಾನೆ. ಟಿಕೆಟುಗಳನ್ನ ಕೊಡುವ ಮತ್ತು ಕೊಡಿಸುವ ಭರಾಟೆ ಜೋರಾಗಿಯೇ ನಡೆಯುತ್ತೆ , ಟಿಕೆಟ್ ಸಿಕ್ಕ ಅಭ್ಯರ್ಥಿಯಂತೂ ಅದ್ಯಾವ ಪರಿ ಹುಮ್ಮಸ್ಸಿನಲ್ಲಿರುತ್ತಾನೆಂದರೆ ಆತ ಗೆದ್ದು ಬಂದ ಒಂದೆರಡು ವರ್ಷಗಳಲ್ಲಿಯೇ ತನ್ನ ವಾರ್ಡಿನ ಎಲ್ಲ ಸಮಸ್ಯೆಗಳನ್ನ ಬಗೆಹರಿಸಿಬಿಡುತ್ತೇನೆ ಎನ್ನುವಷ್ಟು. ನಿಜವಾಗಿಯೂ ಎಷ್ಟೋ ಅಭ್ಯರ್ಥಿಗಳಿಗೆ ತನ್ನ ವಾರ್ಡಿನ ಸಮಸ್ಯೆಗಳು ಏನು ಎಂಬುದೇ ಅರಿವಿರುವದಿಲ್ಲ. 

ಈ ಬಾರಿ ಮತದಾರ ನಿಜಕ್ಕೂ ಗೊಂಧಲಕ್ಕೆ ಒಳಗಾಗಿ ಬಿಟ್ಟಿದ್ದಾನೆ.ಯಾಕೆ ಗೊತ್ತಾ..? ವಿಧಾನಸಭೆ ಚುನಾವಣೆಯ ಸಮಯದಲ್ಲಿ ಮತ ಕೇಳಿಕೊಂಡು ಮನೆಬಾಗಿಲಿಗೆ ಬರುವ ಅಭ್ಯರ್ಥಿ ನಿಮ್ಮೆಲ್ಲ ಸಮಸ್ಯೆಗಳನ್ನ ನಿವಾರಿಸುತ್ತೇನೆ ಎಂದವನು , ಲೋಕಸಭೆ ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಬರುವ ಅಭ್ಯರ್ಥಿ , ಹಾಗೆ ಪಂಚಾಯತ ಚುನಾವಣೆ ಸಮಯದಲ್ಲಿ ಮತ್ತೆ ಮನೆ ಬಾಗಿಲಿಗೆ ಓಟು ಕೇಳಿಕೊಂಡು ಬರುವ ಅಭ್ಯರ್ಥಿಗಳು ಹಲವಾರು ತರದ ಆಶ್ವಾಸನೆಯನ್ನು ಕೊಟ್ಟು ಓಟು ಪಡೆದುಕೊಂಡು ಹೋದವರು ಮತ್ತೆ ಇತ್ತ ತಿರುಗಿಯೂ ನೋಡುವದಿಲ್ಲ ಇನ್ನು ನಮ್ಮ ನಮ್ಮ ಸಮಸ್ಯೆಗಳು ನಮ್ಮ ಮನೆಯಂಗಳದಲ್ಲಿ ಹಾಗೆ ಉಳಿದು ಬಿಡುತ್ತವೆ. ಮತದಾರ ನಂಬುವದಾದರು ಯಾರನ್ನ..? ಇಂದಿನ ಹೆಚ್ಚಿನ ಸಂಖ್ಯೆಯ ತರುಣರಿಗೆ ಮೂಲ ಸಮಸ್ಯೆಗಳ ಅರಿವೇ ಆಗುವದಿಲ್ಲ ಯಾಕೆ ಅಂತೀರಾ.? ಅವರು ಯಾವತ್ತಿಗೂ ಕೂಡ ರೇಷನ್ ಅಂಗಡಿಯಲ್ಲಿ ತಿಂಗಳಿಗೊಮ್ಮೆ ಸಾಲುಗಟ್ಟಿ ನಿಂತವರಲ್ಲ , ಸರಕಾರಿ ಕಛೇರಿಗಳಲ್ಲಿ ಯಾವದೋ ಒಂದು ಮನೆಯ ಕೆಲಸವನ್ನಿಟ್ಟುಕೊಂಡು ಓಡಾಡಿದವರಲ್ಲ , ತಾರುಣ್ಯ (ಆರೋಗ್ಯ) ಘಟ್ಟಿಯಾಗಿರುವದರಿಂದ ಆಸ್ಪತ್ರೆ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಹೋಗಿ ಬಂದವರಲ್ಲ , ಅಂದಾಗ ನಿಜವಾದ ಸಮಸ್ಯೆಯ ಅರಿವಾಗೋದಾದ್ರು ಹೇಗೆ..? ಇವೆಲ್ಲ ಕೆಲಸಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಮನೆಯಲ್ಲಿನ ಹಿರಿಯರೇ ಅಲ್ಲವೇ ಮಾಡುವದು. 

ಈಗ ಮತ್ತೆ ಪಟ್ಟಣ ಪಂಚಾಯತ್ ನ ಚುನಾವಣೆಗಳು ನಮ್ಮ ಎದುರಿಗೆ ಬಂದು ನಿಂತಿವೆ , ಮನೆಯ ಅಂಗಳದಲ್ಲಿ ಮತ್ತೆ ಅಭ್ಯರ್ಥಿಗಳ ಓಡಾಟ ಶುರುವಾಗಿದೆ ನಿಮ್ಮ ಮತಗಳನ್ನು ಕೇಳಿಕೊಂಡು . ಈ ಬಾರಿ ಸುಮ್ಮನೆ ಕೂರಬೇಡಿ ನಿಮ್ಮ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಮನೆಬಾಗಿಲಿಗೆ ಬರುವ ಆ ಅಭ್ಯರ್ಥಿಯ ಮುಂದೆ ಹಿಡಿಯರಿ ಇವಗಳನ್ನು ಮಾಡುವದಾದರೆ ಮತ ನೀಡುತ್ತೆಂದು ಹೇಳಿ ಕಳಿಸಿ. ಈಗಂತೂ ಸೋಶಿಯಲ್ ಮಿಡಿಯಾದಲ್ಲಿ ಬಹುತೇಕ ಎಲ್ಲ ಅಭ್ಯರ್ಥಿಗಳು ತಮ್ಮ ತಮ್ಮ ಖಾತೆಗಳನ್ನ ಹೊಂದಿದ್ದಾರೆ , ಹೇಳಿದ ಕೆಲಸ ನಡೆಯಲಿಲ್ಲವೆಂದರೆ ನೀವು ಆತನನ್ನು ಹುಡುಕಿಕೊಂಡು ಹೋಗುವ ಕಷ್ಟವೇ ಬೇಡ ಕೂತ ಜಾಗದಲ್ಲಿಂದಲೇ ನೀವು ತೆಗೆದ ಒಂದು ಫೋಟೋ ಜೊತೆಗೆ ಸಾರ್ವಜನಿಕವಾಗಿಯೇ ನೀವು ಸವಾಲು ಮಾಡಬಹುದು. ಆದರೆ ಇದೆಲ್ಲ ಮಾಡುವ ಮೊದಲು ಎರಡು ಬಹುಮುಖ್ಯ ಕೆಲಸಗಳನ್ನು ನೀವು ತಪ್ಪದೆ ಮಾಡಿರಲೇಬೇಕು ಮೊದಲನೆಯದು ನಿಮ್ಮ ಸಮಸ್ಯೆಗಳ ಪಟ್ಟಿಯನ್ನ ಆತನ ಎದುರಿಗೆ ಒಪ್ಪಿಸಿರಬೇಕು , ಯಾವುದೇ ಆಮಿಷಗಳಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಗೆ ನೀವು ನಿಮ್ಮ ಮತವನ್ನು ನೀಡಿರಬೇಕು. ಅಸಲಿಗೆ ನನ್ನ ಪ್ರಶ್ನೆ ಶುರುವಾಗುವದೇ ಇಲ್ಲಿಂದ ಈ ಮೊದಲಿನ ಚುನಾವಣೆಗಳಲ್ಲಿ ನಾನು ರಸ್ತೆ ಮಾಡುತ್ತೇನೆ , ಚರಂಡಿ ಕಟ್ಟಿಸುತ್ತೇನೆ , ವಿದ್ಯುತ್ ಹಾಕಿಸುತ್ತೇನೆ ಎಂದೆಲ್ಲ ಮತ ಕೇಳಿಕೊಳ್ಳುತ್ತಿದ್ದುರು .ಈಗ ಮುಂಡಗೋಡಿನ ಬಹುತೇಕ ರಸ್ತೆಗಳು ಕಾಂಕ್ರೀಟಿನ ರಸ್ತೆಗಳಾಗಿವೆ , ಚರಂಡಿಗಳು ನಿರ್ಮಿತವಾಗಿವೆ , ವಿದ್ಯುತ್ ಇಲ್ಲದ ಮನೆಯನ್ನ ಹುಡುಕಬೇಕಷ್ಟೆ , ಇದಾಗಲೇ ನೀರಿನ ಸಂಪರ್ಕದ ಪೈಪುಗಳನ್ನ ಅಳವಡಿಸಲಾಗುತ್ತದೆ, ಹಾಗಾದ್ರೆ ಈ ಬಾರಿ ಚುನಾಯಿತ ಅಭ್ಯರ್ಥಿ ಮಾಡುವ ಕೆಲಸವಾದ್ರೂ ಎನೂ ಎಂಬುದು ನಿಜಕ್ಕೂ ಕೂತೂಹಲವಾಗಿದೆ.ಅಥವಾ ಇನ್ಯಾವ ಕೆಲಸಗಳನ್ನ ಅವರು ಮಾಡಬಹುದು ಎಂಬುದು ದಯಮಾಡಿ ಕಮೆಂಟುಗಳಲಿ ತಿಳಿಸಿ. 
ಒಂದಿಷ್ಟು ನನ್ನ ಅನಿಸಿಕೆಯ ಪ್ರಕಾರ ಈ ಚಾಲೆಂಜ್ ಗಳನ್ನ ಕೈಗೆತ್ತಿಗೊಳ್ಳಬಹುದು ಇನ್ನೂ ಎಷ್ಟು ವರ್ಷ ಅಂತ ರಸ್ತೆ , ನೀರು ,ಅವು ಇವು ಅಂತ ರಾಜಕೀಯ ಮಾಡ್ತೀರಿ ಆಚೆ ಬನ್ನಿ ಇಲ್ಲಿಂದ ಒಂದಿಷ್ಟು ಮುಂದಕ್ಕೆ ಹೋಗೋಣ 
● ಬಯಲು ಶೌಚ ಮುಕ್ತ ಮುಂಡಗೋಡ 
● ಡಿಜಿಟಲ್ ಮುಂಡಗೋಡ ಮಾಡುವತ್ತ ಕೆಲಸ ಮಾಡುವದು 
● ಹೊಗೆ ಮುಕ್ತ ಮುಂಡಗೋಡ . ಅಂದರೆ ಪ್ರತಿ ಮನೆಯಲ್ಲೂ LPG ಗ್ಯಾಸ್ ನ ಬಳಕೆಯಾಗುವದು 
● ನಿರೋಗಿ ಮುಂಡಗೋಡ - ಸ್ವಚ್ಛತೆಯ ಕಡೆ ಗಮನ ಹರಿಸುತ್ತ ಆರೋಗ್ಯದ ಅಭಿವೃದ್ಧಿಯ ಏನೇನೋ ಕಾರ್ಯಯೋಜನೆಗಳು ಆಗಬೇಕು ಎಂಬುದನ್ನ ಆಲೋಚಿಸುವದು 
● ಶಿಕ್ಷಣದ ಅಭಿವೃದ್ಧಿಯ ಗಮನ ಹರಿಸುವದು 
ಈ ಮೇಲೆ ಹೇಳಿದಂತ ಯಾವ ಕೆಲಸಗಳು ಸಹ ಅಂತಹ ಕಷ್ಟಕರವಾದದಲ್ಲ ಒಂದಿಷ್ಟು ಪ್ರಯತ್ನ ಪಟ್ಟರೆ ಎಲ್ಲವನ್ನು ಸಹ 100% ನಷ್ಟು ಮಾಡಿ ಮುಗಿಸಬಹುದು. ಈ ಬಾರಿ ನಿಮ್ಮ ಮತ ನೀಡುವಾಗ ಇವೆಲ್ಲ ಅಂಶಗಳು ಸಹ ಗಮನದಲ್ಲಿರಲಿ. 
(2018-Aug-22)

ಪವನ್ H 
ಮುಂಡಗೋಡ

Saturday, July 17, 2021

ಶಿವರಾಮ್ ಹೆಬ್ಬಾರ್ ಅವರೇ ಮುಂದಿನ ಬಾರಿಗೆ ಮತ ಕೇಳಲು ಬರುವ ಮುನ್ನ ಈ ಪತ್ರವನ್ನೊಮ್ಮೆ ಪೂರ್ತಿಯಾಗಿ ಓದಿಬಿಡಿ..!


2018 ರ ವಿಧಾನಸಭಾ ಚುನಾವಣೆಯಲ್ಲಿ 66290 ಮತಗಳನ್ನು ಪಡೆದು, ಕೇವಲ ಸಾವಿರದ ನಾಲ್ಕನೂರು ಚಿಲ್ಲರೆ ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆದ್ದು ತಮ್ಮ ಕುರ್ಚಿಯನ್ನ ಭದ್ರವಾಗಿಸಿಕೊಂಡಿದ್ದೀರಿ.ಭಿನ್ನಮತದ ಮಹಾಸ್ಫೋಟವೋ ಅಥವಾ ಇನ್ನೊಂದು ಕಾರಣವೋ ತಮ್ಮನ್ನ ಸಾಕಿ ಬೆಳೆಸಿದ ಪಕ್ಷವನ್ನ ತ್ಯಜಿಸಿ,ಗೆದ್ದು ಬಂದ ಕುರ್ಚಿಗೆ ರಾಜಿನಾಮೆಯನ್ನ ನೀಡಿ, ತಮ್ಮ ರಾಜಕೀಯದ ಜೀವನವನ್ನ ದಾವೆಗೆ ಹಚ್ಚಿ 2019ರ ಉಪಚುನಾವಣೆಗೆ ತಯಾರಾದ್ರಿ ,ನಿಮ್ಮ ಕ್ಷೇತ್ರದ ಜನ ನಿಮ್ಮ ಕೈ ಬಿಡಲಿಲ್ಲ 80442 ಮತಗಳನ್ನು ಪಡೆಯುವ ಮೂಲಕ ಭರ್ಜರಿ 31 ಸಾವಿರದ ಚಿಲ್ಲರೆ ಅಂತರದಿಂದ ಜಯಭೇರಿಯನ್ನ ಬಾರಿಸಿದ್ರಿ. ಅಲ್ಲಿಂದ ಮುಂದಕ್ಕೆ ತಾವು ಮುಟ್ಟಿದ್ದೆಲ್ಲ ಚಿನ್ನವೇ ಎಂಬುವಂತೆ ಪಟ್ಟಣ ಪಂಚಾಯತ್ ನಿಂದ ಹಿಡಿದು ಗ್ರಾಮ ಪಂಚಾಯತ್ ವರೆಗೂ ತಮ್ಮ ನೇತೃತ್ವದಲ್ಲಿ ಗೆಲುವಿನ ನಾಗಾಲೋಟವನ್ನೇ ನಡೆಸುತ್ತಾ ಸಾಗಿದ್ದೀರಿ.ಇಷ್ಟೆಲ್ಲ ನೀಡಿದ ನಿಮ್ಮ ಕ್ಷೇತ್ರದ ಮತದಾರನಿಗೆ ತಾವು ಏನನ್ನು ಮಾಡಿದ್ದೀರಿ ಎಂಬುದನ್ನು  ಎಂದಿಗಾದರು ತಮ್ಮನ್ನು ತಾವು ಪರಾಮರ್ಶಿಸಿಕೊಂಡಿದ್ದಿರ..? ತಮಗೆ ಎಲ್ಲವನ್ನು ಕೊಟ್ಟ ಮತದಾರನ ಗೋಳನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೀರಾ..? ನಿಜಕ್ಕೂ ನಿಮ್ಮ ಕ್ಷೇತ್ರದ ಮತದಾರ ಸಂತುಷ್ಟನಾಗಿದ್ದಾನ..?

ಈ ಸುಣ್ಣ ಮತ್ತು ಬೆಣ್ಣೆಯ ಆಟವನ್ನ ಮುಂಡಗೋಡಿನ ಮತದಾರ ದೇಶಪಾಂಡೆಯವರ ಕಾಲದಿಂದಲೂ ನೋಡುತ್ತಾ ನೋಡುತ್ತಾ ರೋಸಿ ಹೋಗಿದ್ದಾನೆ ,ಅಭಿವೃದ್ಧಿಯಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಮುಂಡಗೋಡ ಕುಂಟು ಕುದುರೆಯ ಹಾಗೆ ಕುಂಟುತ್ತಲೇ ಸಾಗಿದೆ. ನಮ್ಮ ದುರಾದೃಷ್ಟಕ್ಕೆ ದೂರದ್ರಷ್ಟಿಯುಳ್ಳ ನಾಯಕ  ,ಮುಂಡಗೋಡವನ್ನ ಎಲ್ಲಾ ರೀತಿಯಿಂದಲೂ ಸಕ್ಷಮಗೊಳಿಸುವಂತೆ ಕನಸು ಕಂಡು ನಿಶ್ಚಿತ ಗುರಿಯೊಂದಿಗೆ ಕೆಲಸ ಮಾಡುವ ನಾಯಕ ನಮಗೆಂದಿಗೂ ದೊರಕಲೆ ಇಲ್ಲ. ದೊಡ್ಡ ದೊಡ್ಡ ಕನಸಗಳು ದೂರದ ಮಾತು ಮೂಲಭೂತ ಸೌಕರ್ಯಗಳೇ ಸರಿಯಾಗಿ ದೊರಕದೆ ಕ್ಷೇತ್ರದ ಮತದಾರ ಇಂದಿಗೂ ಪರದಾಡುತ್ತಿದ್ದಾನೆ.ಇಷ್ಟು ವರ್ಷಗಳಿಂದ ಕನಿಷ್ಠ ವಾರಕ್ಕೆರಡು ಬಾರಿ ನೀವೇ ಸಂಚರಿಸುವ ನಿಮ್ಮದೇ ಕ್ಷೇತ್ರದ ಯಲ್ಲಾಪುರ - ಮುಂಡಗೋಡ ರಸ್ತೆಯ ಅವಸ್ಥೆಯನ್ನ ಕಂಡು ಇದನ್ನ ಸರಿಪಡಿಸಬೇಕೆಂದು ಯಾವತ್ತಿಗೂ ನಿಮಗೆ ಅನಿಸಲೇ ಇಲ್ವಾ..? ಇದೆ ರಸ್ತೆಯ ಕಾರಣಕ್ಕೆ ಪಕ್ಷದ ಯುವ ಕಾರ್ಯಕರ್ತನೊಬ್ಬ ಪ್ರಾಣಬಿಟ್ಟನಲ್ಲ ಆ ರಸ್ತೆ ಈಗಲೂ ಸಹ ಅಷ್ಟೇ ಖರಾಬಾಗಿದೆ ,ಮುಂಡಗೋಡವನ್ನ ಸಂಪರ್ಕಿಸುವ ಯಾವ ರಸ್ತೆ ಸುಸಜ್ಜಿತವಾಗಿ ,ಸಂಚರಿಸಲು ಯೋಗ್ಯವಾಗಿದೆ ಹೇಳಿ..? ರಸ್ತೆಯ ಕಥೆ ಹೀಗಾದರೆ ಬೀದಿ ದೀಪಗಳನ್ನ ಸರಿಪಡಿಸಬೇಕೆಂದು ಪತ್ರಿಕೆಗಳು ಸುದ್ದಿ ಮಾಡಬೇಕು ,ಜನರು ಬಾಯಿ ಬಾಯಿ ಬಡೆದುಕೊಂಡರು ಯಾರೊಬ್ಬನು ಸಹ ಕ್ಯಾರೆ ಎನ್ನಲಿಲ್ಲ .ಇನ್ನೂ 24×7 ನೀರಿನ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂಡಗೋಡಿನ ಯಾವುದೇ ಸರಕಾರಿ ಕಚೇರಿಯಲ್ಲಿ ಅದ್ಯಾವುದೇ ಕೆಲಸಕ್ಕೆ ಅದ್ಯಾರೆ  ಹೋದರು ಸಹ ಮರಳಿ ಬರುವಾಗ ಹಿಡಿ ಶಾಪ ಹಾಕುತ್ತಲೇ ಮರಳಿ ಬರುತ್ತಾನೆಂದರೆ ಅದ್ಯಾವ ಪರಿಯ ವಾತಾವರಣ ಅಲ್ಲಿ ಸ್ರಷ್ಟಿಯಾಗಿರಬೇಕು ನೀವೇ ಸ್ವಲ್ಪ ಯೋಚಿಸಿ ನೋಡಿ.ಇನ್ನು ಮುಂಡಗೋಡಿನ ಬಸ್ ಸ್ಟಾಂಡ್ ನಿರ್ಮಾಣದಲ್ಲಿ ನಿಮ್ಮ ಪಾತ್ರ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿದ್ದೇ ಇದೆ ಬಿಡಿ.ಇವೆಲ್ಲ ಅಗತ್ಯ ಹಾಗೂ ಮೂಲಭೂತ ಸೌಕರ್ಯಗಳೇ ,ಮಾಡಲು ಕಷ್ಟ ಸಾಧ್ಯ ಎನ್ನುವಂತಹದ್ದು ಯಾವುದು ಇಲ್ಲ .ನಿಮ್ಮ ಟೇಬಲ್ ಮೇಲಿನ ಬಿಸಿ ಬಿಸಿ ಕಾಫಿ ಕಪ್ಪು ತಣ್ಣಗಾಗುವುದರ ವೇಳೆಗೆ ತಾವಿದನ್ನ ಸರಿ ಪಡಿಸಿಬಿಡಬಹುದು.ಇವಿಷ್ಟೇ ಕೆಲಸಗಳನ್ನು ಮಾಡಿದ್ರು ಸಾಕು ಮುಂಡಗೋಡಿಗರ ಪಾಲಿಗೆ ತಾವು ಅಸಲಿ ಹೀರೊ ಆಗಿಬಿಡ್ತೀರಿ ಮಾನ್ಯ ಹೆಬ್ಬಾರ್ ಅವರೇ ಒಮ್ಮೆ ಯೋಚಿಸಿ ನೋಡಿ ಈ ದಿಕ್ಕಿನತ್ತ.

ಒಂದು ಪ್ರದೇಶವನ್ನ ಬೆಳೆಸಬೇಕು ಸುಧಾರಿಸಬೇಕು ಅಂತಾದರೆ ಎಲ್ಲಕ್ಕಿಂತ ಮೂಲ ಅಗತ್ಯದಲ್ಲಿ ಅಲ್ಲಿಯ ಜನರಿಗೆ ನೀಡಬೇಕಿರುವುದು ಶಿಕ್ಷಣವನ್ನ ,ಜನ ಶಿಕ್ಷಿತರಾದರೆ ಮಿಕ್ಕೆಲ್ಲ ಕೆಲಸಗಳು ಸ್ವಯಂ ಚಾಲಿತವಾಗಿ ತನ್ನಷ್ಟಕ್ಕೆ ತಾನೇ ನಡೆಯುತ್ತ ಹೊರಟು ಬಿಡುತ್ತವೆ ,ಸಂಘದಲ್ಲಿ ಶಿಕ್ಷಣ ಪಡೆದು ಬೆಳೆದು ಬಂದ ತಮಗೆ ಈ ವಿಷಯ ತುಂಬಾ ಚೆನ್ನಾಗಿ ತಿಳಿದಿದೆ ಅಂತ ಅನ್ಕೊಂತಿನಿ.ಎಲ್ಲಕ್ಕಿಂತ ಮೊದಲು ಶಿಕ್ಷಣವಾದರೆ ಕ್ರಮವಾಗಿ ಆರೋಗ್ಯ ,ಕ್ರೀಡೆ ,ಧಾರ್ಮಿಕ ಮತ್ತು ಕಲೆ ಅಥವಾ ಸಾಂಸ್ಕ್ರತಿಕ  ಇವುಗಳೆಲ್ಲವು ವ್ಯವಸ್ಥಿತವಾಗಿ ನಡೆಯುವಾಗ ಮಾತ್ರ ಒಂದು ಪ್ರದೇಶ ವ್ಯವಸ್ಥಿತವಾಗಿ ಬೆಳೆದು ನಿಂತು ತನ್ನ ಛಾಪನ್ನು ಮೂಡಿಸಲು ಸಾಧ್ಯ.

ಶಿಕ್ಷಣದಲ್ಲಿ ವಿಚಾರ ಮಾಡಿದಾಗ ಮುಂಡಗೋಡ ಬಹು ಹಿಂದಕ್ಕೆ ನಿಂತು ಬಿಟ್ಟಿದ್ದೆ ,ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣವನ್ನ ಅರ್ಧಕ್ಕೆ ಮೊಟಕುಗಳಿಸಿದರೆ ಇನ್ನುಳಿದವರಿಗೆ ಬೇರೆ ಆಯ್ಕೆಗಳೇ ಇಲ್ಲ ,ಪಟ್ಟಣದಲ್ಲಿ ಇರುವ ಸರ್ಕಾರಿ ಕಾಲೇಜಿನಲ್ಲಿ ,ಹೈಸ್ಕೂಲು ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನ ಲೆಕ್ಕ ಹಾಕಿದರೆ ವರ್ಷಕ್ಕೆ ಸುಮಾರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಾ ಇದ್ದಾರೆ ನಾವು ಕಲೆಯುತ್ತಿರುವಾಗಲೆ ಒಂದು ಡೆಸ್ಕ್ ಗೆ ಮೂರು ಜನ ಕೂತು ಕಲೆತಿದ್ದಿವೆ ಇನ್ನೂ ಈಗಿರುವ ಪರಿಸ್ಥಿತಿಯನ್ನ ನೀವೇ ಅವಲೋಕಿಸಬೇಕು.ಮುಂಡಗೋಡಿನಲ್ಲಿ ಐಟಿಐ ಮತ್ತು ಡಿಪ್ಲೊಮಾ ಕಾಲೇಜುಗಳು ಇರುವುದೇನೋ ನಿಜ ಆದರೆ ಅಲ್ಲಿ ಸಕಲ ವ್ಯವಸ್ಥೆಯು ಸರಿಯಾಗಿದೆಯ..? ಅಲ್ಲಿಂದ ಕಲೆತು ಆಚೆ ಬಂದ ವಿದ್ಯಾರ್ಥಿಗಳು ಈಗಿನ ಕಾಲಮಾನಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಬಹುದ ಖಂಡಿತವಾಗ್ಲೂ ಇಲ್ಲ.ಕೇವಲ ಕಾಲೇಜನ್ನು ಕಟ್ಟಿ ಉದ್ಘಾಟನೆ ಮಾಡಿದ್ರೆ ಕೆಲಸ ಮುಗಿಯಲಿಲ್ಲ ಚಾಲೆಂಜ್ ಆಗಿ ಸ್ವೀಕರಿಸಿ ಅಲ್ಲಿ ಬೇಕಾಗಿರುವ ಸಕಲ ಸಲಕರಣೆಗಳನ್ನು ಒದಗಿಸಿ ಉತ್ತಮ ಮೇಲ್ದರ್ಜೆಗೆ ಮಾರ್ಪಡಿಸಿ  ಕಾಲೇಜುಗಳನ್ನ ಕರ್ನಾಟಕದಲ್ಲೇ ನಂಬರ್ ಒನ್ ಮಾಡಿ ಇಲ್ಲಿಂದ ಕಲೆತು ಹೋದಂತಹ ವಿದ್ಯಾರ್ಥಿಗಳು ಸದ್ದು ಮಾಡಲು ಶುರುಮಾಡಿ ನಿಮ್ಮ ಒಂದಿಷ್ಟು ಪ್ರಯತ್ನದಿಂದ ಒಂದೆರಡು ಒಳ್ಳೆಯ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ಗೆ ಅಂತ ಬರಲು ಶುರುಮಾಡಿ ಉದ್ಯೋಗಗಳು ಸ್ರಷ್ಟಿಯಾದರೆ ಅಲ್ಲಿಗೆ ಅದು ಸಾರ್ಥಕವಾಗತ್ತೆ.

ನೀವು ಕೆಲಸ ಮಾಡುತ್ತಿಲ್ಲ ಅಂತ ಹೇಳ್ತಿಲ್ಲ ಆದ್ರೆ ಮಾಡುವ ಕೆಲಸ ಇನ್ನೂ ಸಾಕಷ್ಟಿದೆ ಅಂತ. ಸ್ವಾತಂತ್ರ್ಯದ ನಂತರ ಇಷ್ಟೊಂದು ವರ್ಷಗಳು ಕಳೆದರೂ ಸಹ ನಾವಿನ್ನೂ ಮೂಲಭೂತ ಸೌಕರ್ಯಗಳಿಗೆ ಹೋರಾಡುವ ಪರಿಸ್ಥಿತಿ ಇದೆಯಲ್ಲ ಇದಕ್ಕಿಂತ ಖೇದಕರ ಸಂಗತಿ ಮತ್ತೊಂದಿಲ್ಲ.ನಾವು ಇಲ್ಲಿಂದ ಮುಂದಕ್ಕೆ ಹೋಗೋದು ಯಾವಾಗ..? ಕಳೆದೆರಡು ವರ್ಷಗಳಿಂದ ಕೋರೊನಾ ತಂದೊಡ್ಡಿದ ಸವಾಲು ಬಹು ಕಷ್ಟಕರವಾಗಿತ್ತು ,ಇಂತಹ ಕಠಿಣ ಸಮಯದಲ್ಲೂ ತಾವು ಆ ಸವಾಲುಗಳನ್ನೆಲ್ಲ ಎದುರಿಸಿ ನಿಂತು ತಮ್ಮ ಕ್ಷೇತ್ರದ ಜನತೆಗೆ ಜೊತೆಯಾಗಿ ನಿಂತಿದ್ದೀರಿ.ಕಷ್ಟ ಅಂತ ಬಂದವರ ಕೈ ಯಾವತ್ತಿಗೂ ಬಿಟ್ಟಿಲ್ಲ , ನಿಮ್ಮ ಗಮನಕ್ಕೆ ಬಂದ ಸಮಸ್ಯೆಗಳಿಗೆ ನೀವು ತತ್ ಕ್ಷಣ ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೀರಿ,ಇತ್ತೀಚಿಗೆ ಆಧಾರ್ ಕಾರ್ಡ್ ಸಮಸ್ಯೆಗೆ ತುರ್ತಾಗಿ ತಾವು ತೆಗೆದುಕೊಂಡ ಕ್ರಮವೇ ಸಾಕ್ಷಿ.ಒಂದು ಕ್ಷೇತ್ರದ ನಾಯಕನಲ್ಲಿರುವ ಅವಶ್ಯ ಗುಣಗಳು ನಿಮ್ಮಲ್ಲಿವೆ.ಆದರೆ ಒಂದಿಷ್ಟು ದೂರದ್ರಷ್ಟಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಅದಕ್ಕಾಗಿ ಕೆಲಸ ಮಾಡಿ.ನಾವು ಹೆಚ್ಚೇನೂ ಕೇಳುತ್ತಿಲ್ಲ ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಸಕಲ ಸೌಕರ್ಯಗಳನ್ನು ಮಾಡಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚುಸಿ ,ಯಾವುದಾದ್ರು ದೊಡ್ಡಮಟ್ಟದ ಇನ್ಸ್ಟಿಟ್ಯೂಟ್ ಗಳು ತರುವುದಕ್ಕೆ ಅಗತ್ತ ಒಮ್ಮೆ ಪ್ರಯತ್ನ ಮಾಡಿ.ಯಾವುದೇ ಒಬ್ಬ ವಿದ್ಯಾರ್ಥಿಗಳು ಅರ್ಧಕ್ಕೆ ಶಾಲೆ ಬಿಡಲಾರದಂತೆ ಒಂದು ವ್ಯವಸ್ಥೆ ರೂಪಿಸಿ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಿ.ಇನ್ನು ರಸ್ತೆ ,ಚರಂಡಿ ,ವಿದ್ಯುತ್ ಇವುಗಳಲ್ಲಿ ಯಾವುದೇ ರಾಜಿ ಬೇಡ ,ಓಮ್ಮೆ ಇವುಗಳ ಸಮಸ್ಯೆ ಸರಿಯಾಗಿ ಬಿಡಲಿ,ಯಾವುದೇ ಸರ್ಕಾರಿ ಅಥವಾ ಇಲಾಖೆಗಳಲ್ಲಿ ಜನರ ಕೆಲಸಗಳನ್ನು ಸಲೀಸಾಗಿ ಆಗುವಂತೆ ನೋಡಿಕೊಳ್ಳಿ ಇದರಿಂದ ಜನ ಹಗಲು ರಾತ್ರಿ ಸರ್ಕಾರಿ ಕಛೇರಿಗಳಿಗೆ ಅಲೆಯುವುದು ತಪ್ಪಿ ಜನ ನಿಶ್ಚಿಂತೆಯಿಂದ ಇರುವಂತಾಗಲಿ.ಪಟ್ಟಣದ ಅಮ್ಮಾಜಿ ಕೆರೆ ಅದು ಮುಂಡಗೋಡಿನ ಪ್ರಾಕೃತಿಕ ಸೌಂದರ್ಯವನ್ನು ಹೆಚ್ಚಿಸುತ್ತೆ ಅದರ ಸುಧಾರಣೆಗಾಗಿ ಕೆಲಸಗಳಾಗಲಿ.ದೊಡ್ಡ ದೊಡ್ಡ ಕೈಗಾರಿಕೆಗಳು ಬೇಕು ಅಂತ ಕೇಳುತ್ತಿಲ್ಲ ,ಚಿಕ್ಕ ಪುಟ್ಟ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ಅವರ ಪ್ರಾಡಕ್ಟ್ ಗಳಿಗೆ ನೀವೇ ಬ್ರಾಂಡ್ ಅಂಬಾಸಿಡರ್ ಆಗಿ. ಇನ್ನು ಬಸ್ ಸ್ಟಾಂಡ್ ವಿಚಾರದಲ್ಲಂತೂ ಜನ ರೋಸಿ ಹೋಗಿದ್ದಾರೆ ,ತಾಳ್ಮೆಯ ಕಟ್ಟೆ ಒಡೆದು ಹೋಗಿದೆ ಈ ವಿಚಾರದಲ್ಲಿ ಆದಷ್ಟು ಬೇಗ ಇದನ್ನೊಂದು ಮಾಡಿ ಮುಗಿಸಿಬಿಡಿ.ಆಶ್ರಯ ಯೋಜನೆಯಲ್ಲಿ ಮನೆಗಳನ್ನ ಅರ್ಧ ಕಟ್ಟಿಕೊಂಡು ,ದುಡ್ಡು ಬರುತ್ತದೆ ಅಂತ ಸಾಲ ಮಾಡಿ ಜನ ಪರಿತಪಿಸುತ್ತಿದ್ದಾರೆ ಇದಕ್ಕೊಂದು ನಿಶ್ಚಿತ ಪರಿಹಾರ ಆಗಲೇಬೇಕು.ಸ್ವಲ್ಪ ಸಹಾಯ ಹಾಗೂ ಸರಿಯಾದ ಮಾರ್ಗದರ್ಶನ ಸಿಕ್ಕರೆ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಹ ಕ್ರೀಡಾಳುಗಳು ನಮ್ಮಲ್ಲಿ ಇದಾರೆ ಯಾವುದಾದ್ರು ಒಂದು ನಿಧಿಯಿಂದ ಅವರಿಗೆ ಬೇಕಾದ ಸೌಲಭ್ಯಗಳು ದೊರೆಯುವಂತಾಗಲಿ.

ಅಬ್ಬಾ ಹೇಳಿದ್ದೆಲ್ಲ ತುಸು ಜಾಸ್ತಿ ಆಯಿತ ಅಂತ..! ಪರವಾಗಿಲ್ಲ ಆಗದಿರುವ ಕೆಲಸಗಳನ್ನ ನಾನೇನು ಹೇಳಿಲ್ಲ,ಜನರಗಿರುವ ಸಮಸ್ಯೆಗಳನ್ನ ತಮ್ಮ ಮುಂದೆ ಬಿಚ್ಚಿ ಇಡ್ತಾ ಇದ್ದೇನೆ ಅಷ್ಟೆ ,ಇಂತವೆಲ್ಲ ಕೆಲಸ ಮಾಡಲು ಸಮಯ ತುಸು ಹೆಚ್ಚೇ ಬೇಕು ನಿಜ ,ನೀವೊಬ್ಬ ಪ್ರಭಾವಿ ರಾಜಕಾರಣಿ ಅನ್ನುವದರಲ್ಲಿ ಎರಡು ಮಾತಿಲ್ಲ , ನಿಮ್ಮ ನಂತರವು ಸಹ ನಿಮ್ಮ ಕೆಲಸಗಳು ಮಾತನಾಡುವಂತಿರಬೇಕು. ನಾನೇನು ವಿರೋಧ ಪಕ್ಷದವನಲ್ಲ ,ಸ್ವಪಕ್ಷ ದವನೂ ಅಲ್ಲ ,ಅಪ್ಪಟ ಮುಂಡಗೋಡಿಗ ನನ್ನೂರಿನ ಬಗ್ಗೆ ನನಗೆ ಅಪಾರವಾದ ಪ್ರೀತಿ ಇದೆ ,ಹಂಗೆ ಸಾಕಷ್ಟು ಕನಸುಗಳು ಸಹ ಇವೆ ಅವುಗಳಲ್ಲಿ ಒಂದಿಷ್ಟು ನಿಮ್ಮ ಗಮನಕ್ಕೆ ತಂದಿದ್ದೇನೆ ನೀವು ನಮ್ಮ ಕ್ಷೇತ್ರದ ನಾಯಕರು ಎಂಬ ಕಾರಣಕ್ಕೆ. ನಿಮ್ಮ ಗಮನಕ್ಕೆ ಬಂದ ಸಮಸ್ಯೆಗಳಿಗಾಗಿ ಕೆಲಸಗಳನ್ನು ನೀವು ನಿರ್ವಹಿಸುತ್ತೀರಿ ಎಂಬ ನಂಬಿಕೆಯ ಕಾರಣಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಕ್ಷೇತ್ರದ ಜನ ನಿಮ್ಮಿಂದ ಇಟ್ಟುಕೊಂಡ ನೀರೀಕ್ಷೆಗಳು ಏನೂ ಎಂಬುದು ನಿಮ್ಮ ಗಮನಕ್ಕೆ ಬರಲಿ ಎಂಬ ಕಾರಣಕ್ಕೆ..ಈ ಎಲ್ಲ ಕೆಲಸಗಳನ್ನು ನೀವು ಮಾಡಿ ಮಾಡದೆ ಇರಿ ಜನ ನಿಮ್ಮ ಕೈಯಂತೂ ಬಿಡುವದಿಲ್ಲ.ಅದಲ್ಲದೆ ಬೇರೆ ಆಯ್ಕೆಯೂ ಸಹ ಜನರ ಹತ್ತಿರವಿಲ್ಲವಲ್ಲ.

ಪವನ್ ಹೆಬ್ಬಾರೆ
ಮುಂಡಗೋಡ.

Wednesday, May 5, 2021

ಕೋರೊನಾ ಸೋಂಕು ಮುಂಡಗೋಡಿಗೆ ತಗುಲಿದ್ದು ಹೇಗೆ..? ಈಗಿನ ಪರಿಸ್ಥಿತಿಗೆ ಯಾರು ಕಾರಣ..?

ಕೋರೊನಾ ಮುಂಡಗೋಡಿನಲ್ಲಿ ತನ್ನ ರಣಕೇಕೆ ಹಾಕೋದಕ್ಕೆ ಈಗ ತಾನೇ ಶುರುಮಾಡಿದೆ ,ಎಷ್ಟು ಭಯಂಕರ ಈ ವೈರಸ್ಸು ಅನಿಸ್ತಾ ಇದೆ ,ದಿನಕ್ಕೊಂದರಂತೆ ಸಾವಿನ ಸುದ್ದಿಗಳು ಬರ್ತಾನೆ ಇವೆ..! ಯಾರು ಇದಕ್ಕೆಲ್ಲ ಕಾರಣ ಮೋದಿ.? ಯಡ್ಯೂರಪ್ಪ..? ಸಚಿವ ಹೆಬ್ಬಾರ್..? ಅಥವಾ ನಮ್ಮ ತಹಶೀಲ್ದಾರ್ ಶ್ರಿಧರ್ ಅವರ ಅಥವಾ ಸರ್ಕಾರಿ ಆಸ್ಪತ್ರೆಯ. ? ಇರಿ ಇರಿ ಒಂದ್ ನಿಮಿಷ , ನೀವ್ ನಿಮ್ಮ ತಲೆಲಿ ಅವರು ಹಾಗ್ ಮಾಡಿದ ,ತಪ್ಪು ಇವರದ್ದೇ ಅವರದ್ದೇ ಅಂತೆಲ್ಲ ಯೋಚಿಸೋಕೆ ಹೋಗಬೇಡಿ. ತಪ್ಪು ಅವರಾರದ್ದು ಅಲ್ಲ. ನನ್ನ ಪ್ರಕಾರ ಮೊದಲ ತಪ್ಪು ನಮ್ಮದೆ.


ಕಳೆದ ವರ್ಷ ಇದೆ ಸಮಯಕ್ಕೆ ಮೊದಲ ಹಂತದ ಲಾಕ್ಡೌನ್ ಮುಗಿಸಿ ,ಕೋರೊನಾ ಅಂದ್ರೆ ಹಂಗಂತೆ ,ಹಿಂಗಂತೆ ಎಂದು ಅಂತೆ ಕಂತೆಗಳ ಕಥೆ ಹೊಡೆಯುತ್ತ ಮನೇಲಿ ಕೂತಿದ್ವಿ .ಕೋರೊನಾ ಅಂದ್ರೆ ಎನೂ .? ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತೆ..? ಕೋರೊನಾ ಬಂದ್ರೆ ಚಿಕೆತ್ಸೆ ಏನೂ ಮಾಡಬೇಕು..? ಅದ್ಯಾವುದರ ಸ್ಪಷ್ಟವಾದ ಮಾಹಿತಿಯೇ ಇರಲಿಲ್ಲ . ಆದರೂ ಸಹ ಇಲ್ಲಿನ ಆಡಳಿತ ಮಂಡಳಿ ಸರ್ಕಾರ ಹಾಕಿದ ಎಲ್ಲ ಕೋವಿಡ್ ನಿಯಮಾವಳಿಗಳನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತ  ನಡೆದಿತ್ತು ,ಅದ್ಯಾವ ಪರಿ ಶ್ರಿಧರ್ ಮುಂದಲಮನಿಯವರು ಮತ್ತು ಅವರ ತಂಡ ಕಾರ್ಯಪ್ರವತ್ತವಾಗಿತ್ತು ಎಂದರೆ ಕೊಪ್ಪ ಗ್ರಾಮದಲ್ಲಿ ಅಂತಿಮ ಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಕೊಂಡೊಯ್ದಿದ್ದ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತಂದಿಟ್ಟಿದ್ದರು, ವ್ಯಕ್ತಿಗೆ ಸಾಯುವ ಮುನ್ನ ಜ್ವರ ಇತ್ತು ಎನ್ನುವ ಕಾರಣಕ್ಕೆ .ಆತನ ಕೋರೊನಾ ವರದಿ ಬಂದಮೇಲೆಯೇ ,ಶವವನ್ನ ಬಿಟ್ಟುಕೊಟ್ಟಿದ್ದರು (ವರದಿ ನೆಗೆಟಿವ್ ಎಂದು ಬಂದಿತ್ತು) ಅನ್ಯ ರಾಜ್ಯಗಳಿಂದ ಬಂದವರನ್ನೆಲ್ಲ ಕೈಗೆ ಸೀಲ್ ಹಾಕಿ 14 ದಿನ ಕ್ವಾರೆಂಟನ್ ನಲ್ಲಿ ಇಡಲಾಗುತ್ತಿತ್ತು.ಹಾಗೆ ಬಂದವರೆನ್ನೆಲ್ಲ ಜನ ಇವನಿಗೆ ಕೋರೊನಾ ಮೆಟ್ಟಿಕೊಂಡಿದೆ ಎಂಬಂತೆಯೇ  ನೋಡುತ್ತಿದ್ದರು.ಹಾಂ ಅಂದಂತೆ ಜನರ ಮನಸ್ಸಿನಿಂದ ಕೋರೊನಾ ಭಯವಿನ್ನು ದೂರವಾಗಿರಲಿಲ್ಲ.
ಬದಲಿಗೆ ದಿನೇ ದಿನೇ ಹೆಚ್ಚುತ್ತಲೇ ಇತ್ತು.ಪ್ರತಿ ದಿನ ಬರುವ ವಿಡಿಯೋಗಳು ಘಟನೆಗಳು ಜನರ ಮನಸ್ಸಿಗೆ ನಾಟುತ್ತಲೇ ಸಾಗಿದ್ದವು ,ಮೇ ತಿಂಗಳ ಕೊನೆಯಲ್ಲಿ ಇಂದಿರಾನಗರದಲ್ಲಿ  ತೀರಿಕೊಂಡ ತಾಯಿಯ ಅಂತಿಮ ದರ್ಶನಕ್ಕೆ ಮಕ್ಕಳಿಬ್ಬರು ಅನುಭವಿಸಿದ ಕಷ್ಟವಂತು ಮುಂಡಗೋಡಿಗರ ಮನ ಕಲಕಿತ್ತು.

ಹೀಗೆ ಕಟ್ಟುನಿಟ್ಟಿನ ಕ್ರಮಗಳನ್ನೆಲ್ಲ ಅನುಸರಿಸುತ್ತ ಸಾಗಿದ ಸಮಯದಲ್ಲಿ  ಅನ್ಯ ರಾಜ್ಯದಿಂದ ಬಂದ ಇಬ್ಬರಲ್ಲಿ ಮೇ 17 ರಂದು ಮೊದಲ ಕೋರೊನಾ ಕೇಸು ಮುಂಡಗೋಡಿನಲ್ಲಿ ಖಚಿತಪಟ್ಟಿತ್ತು .ನೆನಪಿದೆಯಾ ಅಂದು ಸಂಜೆ ಪೂರ್ತಿ ಮುಂಡಗೋಡ ಒಂತರ ಗರ ಬಡಿದವರಂತೆ ನಿಂತು ಬಿಟ್ಟಿತ್ತು.ಆ ಮೊದಲ ಕೋರೊನಾ ಪ್ರಕರಣದಿಂದ ಸುಧಾರಿಸಿಕೊಳ್ಳಲು ಒಂದೆರಡು ದಿನಗಳೇ ಬೇಕಾದವು. ಅವರನ್ನ ನೇರವಾಗಿ ಕ್ವಾರೆಂಟೆನ್ ಸೆಂಟರ್ನಿಂದ್ ಕೋವಿಡ್ ಕೇರ್ ಗೆ ಸಾಗಿಸಲಾಗಿತ್ತು ಮತ್ತೆಲ್ಲೂ ಕೂಡ ಅವರಿಂದ ಸೋಂಕು ಹರಡಲಿಲ್ಲವಲ್ಲ ಎಂದು ಜನರು ನಿಟ್ಟುಸಿರು ಬಿಟ್ಟಿದ್ದರು .ಆದರೆ ಕೋರೊನಾ ಭಯ ಮಾತ್ರ ಹಾಗೆ ಇತ್ತು ,ಹೀಗೆ ಖಚಿತಗೊಂಡ ಸೋಂಕಿತರಲ್ಲಿ 8 ವರ್ಷದ ಬಾಲಕನ ವ್ಯಥೆಗೆ ಮುಂಡಗೋಡ ಮರ ಮರ ಮರುಗಿತ್ತು.

ಮೇ ತಿಂಗಳ 18 ರಿಂದ 31 ನೆ ತಾರಿಕಿನ ವರೆಗೆ ಭಾರತ ತನ್ನ ನಾಲ್ಕನೆ ಹಂತದ ಲಾಕ್ ಡೌನ್ ಮುಗಿಸಿ,ಜೂನ್ ತಿಂಗಳ ಮೊದಲವಾರದಿಂದ ಸಡಿಲಿಕೆಯನ್ನ ನೀಡಿತ್ತು.ಕೋರೊನಾ ಸಂಪೂರ್ಣ ಹತೋಟಿಗೆ ಬಂದಿರಲಿಲ್ಲ ,ಹೊಸ ಪ್ರಕರಣಗಳು ದಾಖಲಾಗುತ್ತಲೇ ಇದ್ದವು.  ದೇವಸ್ಥಾನಗಳು ಬಾಗಿಲು ತೆರೆದುಕೊಂಡವು ,ಸಣ್ಣ ಪುಟ್ಟ ಸಂತೆಗಳು ಶುರುವಾದವು , ಜನರು ಒಂದಿಷ್ಟು ನಿಯಮಗಳನ್ನ ಪಾಲಿಸಿ ಓಡಾಡಲು ಶುರುಮಾಡಿದರು.ಹೀಗೆ ಪ್ರಯಾಣ ಮಾಡಿ ಬಂದ ಟಿಬೆಟಿಯನ್ ಒಬ್ಬನಿಗೆ ಜೂನ್ 16 ನೇ ತಾರೀಖಿಗೆ ಕೋರೊನಾ ಸೋಂಕು ಧ್ರಡಪಟ್ಟು ತಾಲೂಕಿನ 3ನೇ ಕೋರೊನಾ ಪ್ರಕರಣ ಇದಾಯಿತು.ಅವಾಗಲಂತು ಮುಂಡಗೋಡಿನ ಜನ ಟಿಬೆಟಿಯನ್ನರು ಎಂದರೆ ಭಯ ಬೀಳತೊಡಗಿದರು ,ಅವರಮೇಲೆ ಗೋಣಗಿಕೊಂಡರು ಅಷ್ಟೇ ..! ಅದು ಮುಂಡಗೋಡಿಗರ ಮೇಲೆ ಹೆಚ್ಚೇನು ಪರಿಣಾಮ ಬಿರಲಿಲ್ಲ. ಜನ ಓಡಾಡಿಕೊಂಡಿದ್ದರು,ಕೋರೊನಾ ಭಯ ಇದ್ದೆ ಇತ್ತು ,ಅನ್ಯ ರಾಜ್ಯಗಳಿಂದ ,ಬೆಂಗಳೂರಿನಿಂದ ಬಂದವರು ಮಾಹಿತಿ ನೀಡಬೇಕು ಹಾಗೂ ಕಡ್ಡಾಯವಾಗಿ ಟೆಸ್ಟ್ ಮಾಡಿಸಿಕೊಳ್ಳಬೇಕೆಂಬ ನಿಯಮವನ್ನ ಜನರು ಸಾವಕಾಶವಾಗಿ ಗಾಳಿಗೆ ತೂರತೊಡಗಿದರು ,ಇಲ್ಲೇ ನೋಡಿ ಎಲ್ಲವೂ ಯಡವಟ್ಟಾಗಿ ಅದೆಲ್ಲೋ ದೂರದಲ್ಲಿ ಇದ್ದ ಕೋರೊನಾ ಎಂಬ ವೈರಸ್ಸು ನಮ್ಮ ಮನೆಯಂಗಳದಲ್ಲಿ ಬಂದು ನಿಂತು ಬಾ ಮಗನೇ ಬಾ ಎಂದು ಡಾನ್ಸ್ ಮಾಡಲು ಶುರುಮಾಡಿತ್ತು. ಜುಲೈ 5ಕ್ಕೆ ಪಟ್ಟಣದಲ್ಲಿ 3 ಕೋರೊನಾ ಪ್ರಕರಣಗಳು ದೃಢಪಟ್ಟು ಬಸವನ ಬೀದಿ ಸಿಲ್ ಡೌನ್ ಆಯಿತು.ಅಲ್ಲಿಂದ ಮುಂದೆ  ತಾಲೂಕಿನಲ್ಲಿ  ಪ್ರತಿದಿನ ಹೊಸ ಹೊಸ ಪ್ರಕರಣಗಳು ಪತ್ತೆಯಾಗತೊಡಗಿದವು .ಪ್ರಯಾಣದ ಹಿನ್ನಲೆಯಿಲ್ಲದಿದ್ದರು ಸೋಂಕು ಮೆಟ್ಟಿಕೊಳ್ಳಲು ಶುರುವಾಗಿತ್ತು.

ಭಾರತದಲ್ಲಿ ಮೊದಲ ಕೋರೊನಾ ಸೋಂಕು ಖಚಿತಗೊಂಡಿದ್ದು 2020 ರ ಜನವರಿ ತಿಂಗಳ ಕೊನೆಯಲ್ಲಾದರೆ ,ಕರ್ನಾಟಕದಲ್ಲಿ ಮಾರ್ಚ್ ತಿಂಗಳ ಮಧ್ಯಂತರದಲ್ಲಿ.ಜೂನ್ 25 ರವರೆಗೆ ಜಿಲ್ಲೆಯಲ್ಲಿದ್ದದ್ದು 156 ಕೋರೊನಾ ಪ್ರಕರಣಗಳು.ಮುಂಡಗೋಡಿನಲ್ಲಿ ಜುಲೈ ನಾಲ್ಕರವರೆಗೆ ಇದ್ದದ್ದು ಕೇವಲ 3 ಪ್ರಕರಣಗಳು.ನೋಡ ನೋಡುತ್ತಿದ್ದಂತಯೇ ಜುಲೈ ತಿಂಗಳಲ್ಲಿ ಕೇವಲ 25 ದಿನಗಳಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ನೂರರ ಗಡಿಯನ್ನ ದಾಟಿತು. ಅಗಷ್ಟ್ ಒಂದನೇ ತಾರಿಕಿನ ವರೆಗೆ 114 ಕೋರೊನಾ ಪ್ರಕರಣಗಳು ದಾಖಲಾದವು. ಜೊತೆಗೆ ಜುಲೈ 23ಕ್ಕೆ ಕೋರೊನಾ ದಿಂದ ಮುಂಡಗೋಡಿನಲ್ಲಿ ಮೊದಲ ಸಾವು ಸಂಭವಿಸಿತು.ಜುಲೈ ನಲ್ಲಿ ಎರಡು ಘಟನೆಗಳು ನಡೆದವು  ಒಂದು ಕಡೆ ಸೋಂಕಿತರ ಸಂಖ್ಯೆ ಏರುತ್ತಲೇ ಹೋದರೆ ಅದರ ಹಿಂದೆ ಹಿಂದೆಯೇ ಜನ ಗುಣಮುಖರಾಗಿ ಕೋವಿಡ್ ಕೇರ್ ನಿಂದ ಮರಳಿ ಮನೆಗೆ ಬರತೊಡಗಿದರು. ಜುಲೈ 13 ಕ್ಕೆ 21 ವರ್ಷದ ಯುವಕ ಮೊದಲನೇ ಬಾರಿಗೆ ಗುಣಮುಖನಾಗಿ ಮುಂಡಗೋಡ ಕೋವಿಡ್ ಕೇರ್ ನಿಂದ ಮರಳಿದ. ಜುಲೈ 15 ಕ್ಕೆ ಮುಂಡಗೋಡಿನ 73ರ ವರ್ಷದ ವೃದ್ದನೊಬ್ಬ ಗುಣಮುಖನಾಗಿದ್ದನ್ನು ನೋಡಿದ ಮುಂಡಗೋಡಿಗರು ,ಕೋರೊನಾ ಎಂದರೆ ಕೇವಲ ನೆಗಡಿ ,ಕೆಮ್ಮು ,ತಲೆನೋವು ಅಷ್ಟೇ ಯಾವ ಕೋರೊನಾ ನೂ ಇಲ್ಲ ಏನೂ ಇಲ್ಲ ಎಂಬ ಮಟ್ಟಿಗೆ ಬಂದು ನಿಂತರು,ಮಾಸ್ಕ್ ಗಳು ಮೂಲೆ ಸೇರಿದವು .ಸ್ಯಾನಿಟೈಸರ್ ಅಂತೂ ಕೇಳಲೇ ಬೇಡಿ. ಇಲ್ಲಿ ಜನಕ್ಕೆ ಕೋರೊನಾ ಎಂಬ ಭಯ ಮಾಯವಾಗಿತ್ತು. ಕೋರೊನಾ ಮಾತ್ರ ಸದ್ದಿಲ್ಲದೆ ಊರ ತುಂಬೆಲ್ಲ ಹರಡುತ್ತಲೇ ಹೋಯಿತು.ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಅಧಿಕಾರಿ ವರ್ಗದವರಿಗೂ ಸೋಂಕು ಮೆಟ್ಟಿಕೊಂಡಿತ್ತು.
ದೇಶದಲ್ಲಿ ಕೋರೊನಾ ಮಾರಿ ಶುರುವಾದ ಮೇಲು ,ಮುಂಡಗೋಡಿನಲ್ಲಿ ಮೊದಲ ಸೊಂಕು ಸಿಕ್ಕಮೇಲು ಪೂರ್ತಿ ಐದು ತಿಂಗಳು ಮುಂಡಗೋಡ ನಿರಾಳವಾಗಿತ್ತು.ಜುಲೈ ನಿಂದ ಈಚೆಗೆ ಕೋರೊನಾ ನಮ್ಮ ಮನೆಯಲ್ಲಿಯೇ ಕೂತು ನಮ್ಮನ್ನ ಕುಣಿಸಲು ಶುರು ಮಾಡಿತು. ಈಗ ಹೇಳಿ ತಪ್ಪು ಯಾರದ್ದು..?

ಸೆಪ್ಟೆಂಬರ್ ಕೊನೆಯಿಂದ ಕೋರೊನಾ ಸೋಂಕಿತರ ಸಂಖ್ಯೆ ಇಳಿಮುಖ ವಾಗುತ್ತ ಬಂದು ,ನವಂಬರ್ ಮೊದಲನೇ ವಾರದಲ್ಲಿ ಮುಂಡಗೋಡಿನ ಕೋವಿಡ್ ಆರೈಕೆ ಕೇಂದ್ರ ಖಾಲಿಯಾಯಿತು.ಕೋರೊನಾ ಮುಗಿದೆ ಬಿಡ್ತು ,ಇನ್ನೇನು ವ್ಯಾಕ್ಸಿನ್ ಬರತ್ತೆ ,ಕೋರೊನಾ ಅಂದ್ರೆ ಇಷ್ಟೇ  ಎಂಬ ಮನಸ್ಥಿತಿಗೆ ನಾವು ತಲುಪಿಬಿಟ್ಟಿದ್ದೆವು.ಪ್ರತಿಭಟನೆ ,ಹೋರಾಟಗಳು ನಡೆದವು ,ಭರ್ಜರಿ ಟುರ್ನಾಮೆಂಟ್ ಗಳು ನಡೆದವು,ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದು ಹೊದ್ವು.ಆದರೆ ನಾವು ಸುಮ್ಮನಿದ್ದರು ಕೋರೊನಾ ಸುಮ್ಮನಿರಬೇಕಲ್ಲ..? ಎರಡನೇ ಅಲೆ ಬರತ್ತೆ ಇದಕ್ಕಿಂತಲೂ ಭೀಕರವಾಗಿರತ್ತೆ ಅಂತ ವಿಜ್ಞಾನಿಗಳು ಎಚ್ಚರಿಕೆ ಕೊಡುತ್ತಲೇ ಇದ್ದರು.ಆದರೆ ನಾವು ಮಾತ್ರ ಅದರ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳಲಿಲ್ಲ . ನಮ್ಮ ಸರ್ಕಾರಿ ಆಸ್ಪತ್ರೆ ಎನ್ ತಯಾರಿ ಮಾಡ್ತಾ ಇದೆ..? ಆಡಳಿತ ಅಧಿಕಾರಿ ,ಆಡಳಿತ ಪಕ್ಷ ಏನು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ತ ಇದೆ ಎಂದು ಯಾವತ್ತಿಗೂ ನೋಡಲು ಹೋಗಲೇ ಇಲ್ಲ. "ಅಕಸ್ಮಾತ್ ಯಾವುದಾರು ಒಂದು ಸಾಂಕ್ರಾಮಿಕ ರೋಗ ಹರಡಿತು ಎಂದರೆ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ 100 ಕ್ಕಿಂತ ಹೆಚ್ಚಿನ ಬೆಡ್ ಗಳು ಇಲ್ಲ"  ಎಂದು 2017-18 ರಲ್ಲಿ ನಮ್ಮ ಕನಸಿನ ಮುಂಡಗೋಡ ವೇದಿಕೆಯು ಹೇಳಲು  ಪ್ರಯತ್ನಿಸದಾಗ ,ಅಧಿಕಾರಿ ವರ್ಗ ,ಜನಪ್ರತಿನಿಧಿ ದೂರದ ಮಾತು ಸ್ವತಃ ಜನಗಳೇ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ (ಸರ್ಕಾರಿ ಆಸ್ಪತ್ರೆಯ ಜೊತೆಗೆ  ಒಂದಿಷ್ಟು ಅವಶ್ಯ ಸುಧಾರಣೆಯ ಪಟ್ಟಿಯನ್ನ ನಮ್ಮ ಕನಸಿನ ವೇದಿಕೆ ಸಿದ್ಧಪಡಿಸಿತ್ತು) ಇಂದಿನ ಮಟ್ಟಿಗೆ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ತಕ್ಕ ಮಟ್ಟಿಗೆ ಸುಧಾರಿಸಿದೆಯಾದರು ,ಇಲ್ಲಿನ ಮುಖ್ಯ ವೈದ್ಯರು ಸ್ಪಷ್ಟವಾಗಿ ಹೇಳ್ತಾರೆ ಇಲ್ಲಿ ಡಾಕ್ಟರ್ ಗಳ ಸಮಸ್ಯೆ ಇದೆ ಅದಕ್ಕೆ ನಾವು ಹುಬ್ಬಳ್ಳಿ ಅಥವಾ ಕಾರವಾರಕ್ಕೆ ಕಳಿಸ್ತೀವಿ ಅಂತ.ಅದೆಲ್ಲ ಬಿಡಿ ಕನಿಷ್ಟ ಪಕ್ಷ ಸರ್ಕಾರ ಉಚಿತವಾಗಿ ನೀಡುತ್ತಿದ್ದ ಲಸಿಕೆಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದೆ ಅಸಡ್ಡೆ ಮಾಡಿ ,ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವುದಕ್ಕೆ ನಿಂತಂತಾಗಿದೆ ನಮ್ಮ ಪರಿಸ್ಥಿತಿ.


Uffff.... ಈಗಂತೂ ಮುಂಡಗೋಡಿನ ಪರಿಸ್ಥಿತಿ ತುಂಬಾ ಬಿಗಡಾಯಿಸಿಬಿಟ್ಟಿದೆ,ಈ ಬಾರಿ ಕೋರೊನಾ ನಿರ್ಮಿಸಿದ ಎರಡನೇ ಅಲೆ ಹಿಂದೆಂದಿಗಿಂತ ಭಿನ್ನವಾಗಿದೆ.ಅದಾಗಲೇ ಎರಡನೇ ಅಲೆಗೆ 800 ಜನ ಕೋರೊನಾ ಸೋಂಕಿಗೆ ತುತ್ತಾಗಿದ್ದಾರೆ.ಕಳೆದ ಒಂದು ತಿಂಗಳಲ್ಲಿ 9 ಜನ ಸಾವಿಗೀಡಾಗಿದ್ದಾರೆ.ಸೋಂಕಿತರ ಸಂಖ್ಯೆಗಿಂತ,ಸಾವಿನ ಸಂಖ್ಯೆ ಭಯ ಹುಟ್ಟಿಸುವುಂತೆ ಮಾಡಿದೆ.ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ನೇರವಾದ ಕಾರಣವೆಂದರೆ ,ನಮ್ಮ ನಿರ್ಲಕ್ಷ್ಯತನ ..! ತಲೆ ನೋವು ,ಶೀತ ,ಜ್ವರ ಇದು ಸಾಮಾನ್ಯ ಬಿಡು ಅಂತ ನಿರ್ಲಕ್ಷಿಸಿ ಮನೆಯಲ್ಲೇ ಮಾತ್ರೆ ತಗೊಂಡು ಸುಮ್ಮನಾಗಿ ಬಿಡ್ತೀವಿ,ನಿಮ್ಮ ಇಮ್ಯೂನೀಟಿ ಚೆನ್ನಾಗಿದೆಯ ,ನೀವು ಪಾರದ್ರಿ ಇಲ್ಲವೋ ಯಾವೊದೋ ಕಾಯಿಲೆ ಇದ್ದು ಕಫ ಕಟ್ಟತೊಡಗಿದರೆ ಅಲ್ಲಿಗೆ ನಿಮಗೆ ತೀವ್ರ ಉಸಿರಾಟದ ಸಮಸ್ಯೆಯಾಗಬಹುದು, ನೀವು ಆಸ್ಪತ್ರೆಗೆ ಹೋಗ್ತಿರಿ,ಉಸಿರಾಟಕ್ಕೆ ತೊಂದರೆ ಆದಾಗ ನೋಡಿಕೊಳ್ಳಲು  ನಮ್ಮ ಮುಂಡಗೋಡಿನಲ್ಲಿ ಡಾಕ್ಟರ್ ಇಲ್ಲ,ವ್ಯವಸ್ಥೆಯು ಇಲ್ಲ..ನೀವು ಒಂದೋ ಹುಬ್ಬಳ್ಳಿಗೆ ಅಥವಾ ಕಾರವಾರಕ್ಕೆ ಹೋಗಬೇಕು ,ಅಲ್ಲಿ ನಿಮ್ಮಂತ ನೂರಾರು ಜನ ಬಂದಿರ್ತಾರೆ,ಅಲ್ಲಿರುವ ಸಿಬ್ಬಂದಿವರ್ಗ ಮತ್ತು ಡಾಕ್ಟರ್ ಯಾರ್ ಯಾರಿಗೆ ಅಂತ ನೋಡ್ತಾರೆ ,ಯಾರಿಗೆ ಎನ್ ಟ್ರೀಟ್ಮೆಂಟ್ ಅಂತ ಕೊಡ್ತಾರೆ ಹೇಳಿ..? ಬೆಂಗಳೂರಿನಲ್ಲಿ ನಡೆದ ಬೆಡ್ ಮಾಫಿಯಾ ಕಣ್ಣ ಮುಂದೆಯೇ ಇದೆ. ಅದು ಬಿಟ್ಟು ನಿಮ್ಮ ಮನೆಯವರು ನಿಮಗಾಗಿ ಕಾರವಾರಕ್ಕೆ ಅಲೆದಾಡಬೇಕು,ಕಾರವಾರ ಏನೂ ನಮ್ಮ ಊರಿನ ಪಕ್ಕದಲ್ಲಾ ಇದೆ..? ಹಾಗಾಗಿ ನಿರ್ಲಕ್ಷ್ಯ ಮಾಡಲೇ ಬೇಡಿ.ಶೀತ ಕೆಮ್ಮು ಅಂತ ಅನಿಸ್ತಾ ಹೋಗಿ ಒಂದ್ ರಾಪಿಡ್ ಟೆಸ್ಟ್ ಮಾಡಿಸಿಕೊಂಡು ಬಂದು ಬಿಡಿ.ಪಾಸಿಟಿವ್ ಬಂತಾ ನಿಮ್ಮ ಮನೆಯವರಿಂದ ದೂರ ಉಳಿದು ,ಅವರನ್ನು ರಕ್ಷಿಸಬಹುದು ಹಾಗೂ ನಿಮ್ಮನ್ನ ನೀವು ಕೂಡ ರಕ್ಷಿಸಬಹುದು.ನೆಗೆಟಿವ್ ಬಂತಾ ಒಳ್ಳೆದೆ, ನಿಮಗೂ ಮನಸ್ಸಲ್ಲಿ ಭಯ ಇರಲ್ಲ.

ಹೇಗೆ ಕಳೆದ ವರ್ಷ ಜೂನ್ ತಿಂಗಳ ಕೊನೆಯವರೆಗೂ ಎಲ್ಲ ಕೋವಿಡ್ ನಿಯಮಗಳನ್ನ ಪಾಲಿಸುತ್ತಾ ,ಯಾವುದೇ ಕೋರೊನಾ ಪ್ರಕರಣಗಳು ದಾಖಲಾಗದೇ ಇದ್ದವೋ, ಈ ಬಾರಿ ಕೂಡ ಹಾಗೆ ಆಗಬೇಕಿದೆ.ಯಾರೋ ಒಬ್ಬರಿಂದ ಇದು ಆಗಲು ಸಾಧ್ಯವಿಲ್ಲ. ಇನ್ನಿತರ ಕಡೆಯ ಪರಿಸ್ಥಿತಿಯನ್ನ ,ಸನ್ನಿವೇಶಗಳನ್ನ ನೋಡಿದರೆ ಮುಂಡಗೋಡದ ಪರಿಸ್ಥಿತಿ ಕೈ ಮೀರಿ ಹೋಗಿಲ್ಲ. ಕೋರೊನಾದ ಹೋರಾಟದಲ್ಲಿ ನಾವು ನೀವೆಲ್ಲರೂ ಸೈನಿಕರೆ ನಮ್ಮನ್ನ ನಾವು ರಕ್ಷಿಸಿಕೊಳ್ಳಲೇ ಬೇಕು.ಸಾಧ್ಯವಾದಷ್ಟು ಮನೇಲಿ ಉಳಿದುಬಿಡಿ,ಮದುವೆ ,ಜಾತ್ರೆ ಇವರು ನಮ್ಮವರು ತಮ್ಮವರು ಅನ್ನೋದನ್ನ ಮರೆತು ಬಿಡಿ. ಅವರವರ ಮನೇಲಿ ಅವರು ಇರ್ಲಿ.ಅಕಾಸ್ಮಾತ್ ಆಚೆ ಹೋಗಬೇಕಾ ಮಾಸ್ಕ್ ತಪ್ಪದೆ ಬಳಸಿ ,ಸ್ವಚ್ಛವಾಗಿ ಕೈ ತೊಳೆಯಿರಿ.ನಮ್ಮ ನಿರ್ಲಕ್ಷ್ಯತನದಿಂದ , ನಮ್ಮ ಆಪ್ತವಾದವರನ್ನ ನಮ್ಮವರನ್ನ ಕಳೆದುಕೊಂಡೆನಲ್ಲ ಎಂಬ ಕೊರಗು ಮುಂದೆಂದೂ ನಮಗೆ ಕಾಡದೇ ಇರುವ ಹಾಗಾಗಲಿ.

ಒಂದು ನನ್ನದೇ ಸ್ವತಃ ಉದಾಹರಣೆ ಹೇಳ್ತೀನಿ ,ಕಳೆದ ವರ್ಷ ಲಾಕ್ ಡೌನ್ ಆಯಿತಲ್ಲ ,ಒಂದೇ ಒಂದು ದಿನ ನಾನು ಮನೆಯಲ್ಲಿ ಇದ್ದವನಲ್ಲ ಪ್ರತಿ ದಿನ ಕೆಲಸದ ನಿಮಿತ್ತ ನಾನು ಆಚೆ ಹೋಗಲೇಬೇಕಿತ್ತು.ಮಾರ್ಚ್ ನಿಂದ  ಹಿಡಿದು ಆಗಷ್ಟ್ ವರೆಗೆ ಪೂರ್ತಿ ಐದು ತಿಂಗಳು ಸೋಂಕಿನ ಲಕ್ಷಣಗಳು ಸಹ ಹತ್ತಿರಕ್ಕೆ ಸುಳಿದಿರಲಿಲ್ಲ ,ನಾನು ಆ ಸಮಯದಲ್ಲಿ ಮಾಡಿದ್ದಿಷ್ಟೇ ಮನೆಯಿಂದ ಆಚೆ ಹೋಗ್ತಾ ಹಾಕಿದ ಮಾಸ್ಕು ವಾಪಸ್ ಮನೆಗೆ ಬಂದಾಗಲೇ ತೆಗೆಯೋದು ,ಆಗಾಗ ಸ್ಯಾನಿಟೈಸರ್ ತಪ್ಪದೆ ಬಳಿಸ್ತಾ ಇದ್ದೆ.ಸರ್ಕಾರ ನಿಯಮಗಳಲ್ಲಿ ಸಡಿಲಿಕೆ ಮಾಡ್ತಲ್ಲ ಆಗಷ್ಟ್ ನಲ್ಲಿ ಮುಂಡಗೋಡಿಗೆ ಬಂದೆ ,ಬಂದ ಮಾರನೇ ದಿನ ಟೆಸ್ಟ್ ಮಾಡಿಸಿದೆ ನೆಗೆಟಿವ್ ವರದಿ ಇತ್ತು ,ಎಲ್ಲ ಕೆಲಸ ಮುಗಿಸಿ ವಾಪಾಸ್ ಹೋಗುವಾಗ ಮತ್ತೆ ಟೆಸ್ಟ್ ಮಾಡಿಸಿದರೆ ವರದಿ ಪಾಸಿಟಿವಾಗಿತ್ತು..ಮಾಡಿದ ತಪ್ಪು ಒಂದೇ..!  ನಿರ್ಲಕ್ಷ್ಯ ,ಮಾಸ್ಕ್ ಹಾಕೋಕೆ ನಿರ್ಲಕ್ಷ್ಯ,ನಮ್ಮವರು ಬಿಡು ಎಂಬ ನಿರ್ಲಕ್ಷ್ಯ.

ಮುಂದೇನು...?
ಎಲ್ಲಕ್ಕಿಂತ ಮೊದಲು ಮಾಡಬೇಕಾದ ಕೆಲಸ ಮಾಧ್ಯಮದಲ್ಲಿ ಬಿತ್ತರಿಸುವ ಕೋರೊನಾ ಸುದ್ದಿಗಳಿಂದ ದೂರ ಉಳಿದು ಬಿಡಿ.ನಮಗೆ ಕೋರೊನಾ ಕುರಿತಾದ ಏನೇನೂ ಮಾಹಿತಿ ಬೇಕಿತ್ತೋ ಅದು ನಿಮಗೆ ಸಿಕ್ಕಾಗಿದೆ.

ಎಷ್ಟು ಜನ ಸತ್ತರು ಎಷ್ಟು ಕೇಸ್ ಗಳು ಸಿಕ್ಕವು ಎಂಬ ಸಂಖ್ಯೆಗಳನ್ನ ಕೂತು ಲೆಕ್ಕ ಹಾಕುವುದನ್ನ ಬಿಟ್ಟು ಬಿಡಿ.ಇದೇನು ಐಪಿಲ್ಲೊ ,ಕ್ರಿಕೆಟ್ ಮ್ಯಾಚೊ ಅಲ್ಲ.

ಕೋರೊನಾ ಕುರಿತಾದ ಮಾಹಿತಿಗಳನ್ನ ,ಜಾಲತಾಣಗಳಲ್ಲಿ ಹುಡುಕಾಡುವುದನ್ನ ಬಿಟ್ಟು ಬಿಡಿ ,ಅದು ನಿಮ್ಮ ಮಾನಸಿಕ ಪರಿಸ್ಥಿತಿಯನ್ನ ಬಿಗಡಾಯಿಸಬಹುದು.

ಕೋರೂನ ಕುರಿತಾದ ಸುದ್ದಿಗಳನ್ನ ,ಸಿಕ್ಕ ಸಿಕ್ಕವರಿಗೆ ಫಾರ್ವರ್ಡ್ ಮಾಡೋದನ್ನ ನಿಲ್ಲಿಸಿಬಿಡಿ ,ನಿಮ್ಮಷ್ಟು ಮಾನಸಿಕ ಸ್ಥಿರತೆ ಮತ್ತು ಧೈರ್ಯ ಎಲ್ಲರಲ್ಲೂ ಇರಬೇಕಲ್ಲ..?

ಆದಷ್ಟು ಧೈರ್ಯದಿಂದ ಇರಿ ,ಮಾನಸಿಕವಾಗಿ ಸ್ವಸ್ಥವಾಗಿರಿ ,ಅನಗತ್ಯ ಭಯ ಬೇಡ ,ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತೆ ,ಮತ್ತು ನೀವು ನಂಬುವ ಆ ಭಗವಂತನಲ್ಲಿ ನಂಬಿಕೆ ಇಡಿ.

ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ನಿಮ್ಮ ಮನೆಯ ಸುತ್ತ ಮುತ್ತಲಿನ ಜನಕ್ಕೆ ಆದಷ್ಟು ಸಹಾಯ ಮಾಡಿ ,ಅವರಿಗೆ ಆಹಾರದ ಸಮಸ್ಯೆ ಆಗ್ತಾ ಇದೆಯಾ..? ಇದ್ದದ್ದರಲ್ಲೆ ಸ್ವಲ್ಪ ಹಂಚಿಕೊಳ್ಳಿ.ಒಂದಿಷ್ಟು ಸಂಘಟನೆ ,ನಿಮ್ಮ ಸಮಾಜದಿಂದ ಸಹಾಯ ಪಡೆಯಿರಿ ,ಸಹಾಯ ಮಾಡಿ ಹಾಗೆ ಸಹಾಯ ಮಾಡುವಾಗ ಗುಂಪಾಗಿ ಹೋಗಬೇಡಿ ಮತ್ತು ಫೋಟೋ ತೆಗೆದು ಫಾಲ್ತು ಶೋಕಿ ಮಾಡೋಕೆ ಹೋಗಬೇಡಿ, ಇದರಿಂದ ಆಗುವ ಪರಿಣಾಮ ಆ ಮನೆಯವರಿಗೆ ಕಸಿವಿಸಿ ಆಗಬಹುದು ಒಂದು ಅದಕ್ಕೆ ಹೆದರಿ ಬೇರೆಯವರು ನಿಮ್ಮ ಸಹಾಯವನ್ನ ಬೇಡವೆಂದು ತಳ್ಳಿಹಾಕಬಹುದು .ಇನ್ನೊಂದು ಕೋರೊನಾ ಗೆ ನೀವು ಏನು ಮಾಡ್ತಾ ಇದ್ದೀರಿ ಅಂತ ಅರ್ಥ ಆಗಲ್ಲ ನಿಮಗೂ ಸೋಂಕು ತಗಲುವ ಹಾಗೂ ಸೋಂಕು ಹರಡುವ ಸಾಧ್ಯತೆ ಜಾಸ್ತಿ. ಒಟ್ನಲ್ಲಿ ಎಲ್ಲವೂ ನಮ್ಮ ಕೈಯಲ್ಲೇ ಇದೆ ,ಇನ್ನೊಬ್ಬರನ್ನ ,ಸರ್ಕಾರವನ್ನ ಟೀಕಿಸುವ ಮೊದಲು ನಾವು ಏನ್ ಮಾಡಿದ್ದೇವೆ ,ಎನ್ ಮಾಡ್ತಾ ಇದ್ದೇವೆ ಎಂಬುದನ್ನ ನೋಡಿಕೊಳ್ಳಬೇಕಿದೆ.ಕಳೆದ ಬಾರಿಯಂತೆ ಮುಂಡಗೋಡದ ಗ್ರಾಮದೇವತೆ ಮಾರಿಕಾಂಬೆ ಈ ಮಾರಿಯಿಂದ ನಮ್ಮನ್ನೆಲ್ಲ ಸುರಕ್ಷಿತವಾಗಿಟ್ಟಿರಲಿ ,ಆದಷ್ಟು ಬೇಗ ಈ ಮಹಾಮಾರಿ ತೊಲಗಲಿ ,ಬರುವ ವರ್ಷ ಅಧ್ದೂರಿಯಾಗಿ ಜಾತ್ರೆ ಮಾಡುವಂತಾಗಲಿ.

ಪವನ್ ಹೆಬ್ಬಾರೆ
ಮುಂಡಗೋಡ
05/05/2021

Monday, December 14, 2020

ಮತ್ತೆ ಸಿಗೋಣ ಅಂತ ಹೇಳಿ ಹೊರಟವರು ಮೊನ್ನೆ ಮತ್ತೆ ಸಿಕ್ಕಿದ್ದರು..!


ಶಾಲೆ ,ಕಾಲೇಜು ಮುಂದೆ ಡಿಗ್ರಿಯನ್ನ ಪಡೆದು ಹೊರಡುವ ಕೊನೇಯ ದಿನ ಬಹುತೇಕರು ನಾವೆಲ್ಲ ಹೀಗೆ ಹೇಳಿ ಹೊರಟಿರ್ತೀವಿ,ಮತ್ತೆ ಸಿಗೋಣ ಸಿಗ್ತಾ ಇರೋಣ , ನಿಜಕ್ಕೂ ನಮ್ಮ ಬದುಕಿನಲ್ಲಿ ಇದು ಸಾಧ್ಯವಾಗತ್ತ..? ಖಂಡಿತವಾಗ್ಲೂ ಎಲ್ಲರ ಬದುಕಿನಲ್ಲಿ ಅಗಲಿಕ್ಕಿಲ್ಲ ,SSLC ಯ ನಂತರ ಮುಂದೇನು..? ಎಂಬ ಅಲೋಚನೆಯಲ್ಲೇ ಓಡಲು ಶುರುವಾದ ನಮ್ಮ ಬದುಕು ಮುಂದೆ ಪಿಯುಸಿ ಡಿಗ್ರಿ ಮುಗಿದು ಆಚೆ ಬೀಳುವ ಮೊದಲೇ ಒಂದರ ಹಿಂದೊಂದರಂತೆ ಜವಾಬ್ದಾರಿಯ ನೊಗ ಹೆಗಲ ಮೇಲೆ ಬಿದ್ದಿರುತ್ತೆ ,ಇವುಗಳೆಲ್ಲ ಮಧ್ಯೆ ಮಿತ್ರರ ನೆನಪಾಗೋದು ಬಿಡಿ ಜೊತೆಗಿದ್ದ ಮಿತ್ರರೇ ದೂರವಾಗಿರುತ್ತಾರೆ. ಅವಾಗ ಅವಾಗ ಯಾರೋ ಹಳೆಯ ಮಿತ್ರನೊಬ್ಬ ಸಿಕ್ಕಾಗ ,ಶಾಲೆ ಕಾಲೇಜಿನ ದಿನಗಳಲ್ಲಿ ನಮ್ಮ ಆತ್ಮೀಯ ಮಿತ್ರರ ಬಗ್ಗೆ ಕೇಳ್ತಾ ಇರ್ತೀವಿ, ಈಗ ಅವನೆಲ್ಲಿ ಇದ್ದಾನೆ ..? ಎನ್ ಮಾಡ್ತಾ ಇದ್ದಾನೆ ..? ಅವಳು ಹೇಗಿದ್ದಾಳೆ ಎಲ್ಲಿದ್ದಾಳೆ..? ಹಾಗೆ ಮಾತು ಒಂದಿಷ್ಟು ಜೊತೆಗೆ ಅಂದಿನ ನೆನಪುಗಳ ಬಗ್ಗೆ ಮೆಲಕು ಹಾಕಿರ್ತೀವಿ, ಅದೊಂದು ಹತ್ತಿಪ್ಪತ್ತು ನಿಮಿಷಗಳ ಕಾಲದ ಮಿತ್ರನೊಡನೆ ಮಾತು ಮುಗಿಸಿ ಹೊರಡುವುದರೊಳಗೆ ಮನಸ್ಸು ನಮಗಿರಿವಿಲ್ಲದೆ ಪುಳಕಿತವಾಗಿ ,ಆ ದಿನವಿಡೀ ಅಥವಾ ಒಂದಿಷ್ಟು ಘಂಟೆಯಗಳ ವರೇಗಾದರು ನೆನಪಿನ ಉಯ್ಯಾಲೆಯಲ್ಲಿ ಹರ್ಷದಿಂದ ತೇಲಾಡಿರುತ್ತೆ,ಮತ್ತೊಮ್ಮೆ ಅವರನ್ನೆಲ್ಲ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಲ್ಲವಾ ಅಂತ ಆ ಕ್ಷಣಕ್ಕೆ ನಮಗನಿಸುರತ್ತೆ. ಖಂಡಿತ ಇದೆಲ್ಲವೂ ನಡಿದಿರುತ್ತೆ ನಾವು ಗಮನಿಸಿರುವುದಿಲ್ಲ ಅಷ್ಟೇ. ಸುಮ್ಮನೆ ಯೋಚಿಸಿ ನೋಡಿ ನಿಮ್ಮ ಕಾಲೇಜು ಮುಗಿದು ಕನಿಷ್ಟ 30 ವರ್ಷವಾಗಿದೆ ನಿಮ್ಮ ಮಿತ್ರರ ಚೆಹರೆಗಳು ದೂರದ ಮಾತು ಅವರ ಹೆಸರುಗಳೇ ನಿಮಗೆ ಮರೆತಿರುತ್ತೆ ,ಅಂತಹ ನಿಮ್ಮೆಲ್ಲ ಗೆಳಯ /ಗೆಳತಿಯರು ಒಟ್ಟಿಗೆ ಒಂದು ಜಾಗದಲ್ಲಿ ಭೇಟಿಯಾದಾಗ ,ನಿಮ್ಮನ್ನ ಹೊಡೆದು ತಿದ್ದಿ ತೀಡಿ ನಿಮಗೆ ಬುದ್ಧಿಯನ್ನ ಹೇಳಿದ ಗುರುಗಳು ಸಹ ಅಲ್ಲಿಗೆ ಬಂದರೆ ಹೇಗಿರುತ್ತೆ ,, ವ್ಹಾ...! ಖಂಡಿತವಾಗ್ಲೂ ನಮ್ಮ ಬದುಕಿನ ಒಂದು ಅದ್ಭುತವಾದ ದಿನವಾಗಿರುತ್ತೆ..ಮೊನ್ನೆ ಡಿಸೆಂಬರ್  13 ಕ್ಕೆ ಇಂತಹದೇ ಒಂದು ದಿನವಿಡೀ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇನೆ,ಅಲ್ಲಿನ ಸಂಭ್ರಮ ಅವರ ನಡುವಿನ ಮಾತುಗಳು ನಿಜಕ್ಕೂ ನನ್ನ ಮಿತ್ರರನ್ನೆಲ್ಲ ನೆನಪು ಮಾಡಿಸಿದ್ದು ಸುಳ್ಳಲ್ಲ.

ಅದು 1988-91 ರಲ್ಲಿ SSLC ಹಾಗೂ ಮುಂದೆ ಡಿಗ್ರಿಯವರೆಗೂ ಜೊತೆಗೆ ಕಲಿತ ಸ್ನೇಹಿತರ ಬಳಗದ ಸ್ನೇಹ ಮಿಲನ ಕಾರ್ಯಕ್ರಮ , ನಾ ಕಲೆತ ಶಾಲೆಯಲ್ಲೇ ನಾ ಹುಟ್ಟುವ ಮೊದಲೇ😜 ಆ ಶಾಲೆಯಲ್ಲಿ ಕಲಿತ ನನ್ನ ಸೀನಿಯರ್ಸಗಳು ,ಸುಮಾರು 30 ವರ್ಷಗಳ ಬಳಿಕ ಮತ್ತೆ ಭೇಟಿಯಾಗಲು ಒಂದಿಷ್ಟು ಜನ ಮಿತ್ರರು ಒಟ್ಟಾಗಿ ತಯಾರಿಯನ್ನ ನಡೆಸಿದ್ದರು, ಇರುವ ಎಲ್ಲ ಮಿತ್ರರನ್ನ ಹುಡುಕಬೇಕು, ಅವರಿವರನ್ನ ಕೇಳಬೇಕು ,ಅವರ ವಿಳಾಸ ,ನಂಬರ್ ಎಲ್ಲವನ್ನು ಕಲೆಹಾಕಬೇಕು ,ಕಲಿಸಿದ ಶಿಕ್ಷಕರನ್ನ ಹುಡುಕಬೇಕು ಕಾರ್ಯಕ್ರಮಕ್ಕೆ ಬರುವಂತೆ ಮನವೊಲಿಸಬೇಕು ,ಅವರು ಬರುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನ ಮಾಡಬೇಕು ,ಇತ್ತ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆ ,ಊಟ ತಿಂಡಿಯ ವ್ಯವಸ್ಥೆಯನ್ನ ಮಾಡಬೇಕು  ಅಬ್ಬಾ..! ಒಂದು ಕಾರ್ಯಕ್ರಮದ ಹಿಂದೆ ಅದೆಷ್ಟು ತಯಾರಿಯನ್ನ ಮಾಡಬೇಕೋ ..ಬೇರೆ ಯಾವದೇ ಕಾರ್ಯಕ್ರಮ ಆಗಿದ್ದರೆ ಸಾಕಪ್ಪಾ ಸಾಕು ಅನಿಸಿಬಿಡಬಹುದು ,ಆದರೆ ತನ್ನ ಮಿತ್ರರು ಸಿಗುತ್ತಾರೆ ವಿದ್ಯೆ ಕಲಿಸಿದ ಗುರುಗಳು ಬರುತ್ತಾರೆ ಎಂದಾಗ ಮನದಲ್ಲಿ ಮೂಡುವ ಹರ್ಷವಿದೆಯಲ್ಲ ಅದು ಇವೆಲ್ಲದರ ಆಯಾಸವನ್ನ ಹಗುರಗೊಳಿಸಿ ಬಿಡುತ್ತೆ.ತನ್ನ ಹಳೆಯ ಮಿತ್ರರನ್ನೆಲ್ಲ ಭೇಟಿಯಾಗುವ ಆತುರ ಅಂದು ಯಾರು ಬರುತ್ತಾರೆ ಯಾರಿಲ್ಲ ,ಬಂದವರನ್ನ ಇವರೇ ಎಂದು ಗುರುತು ಹಿಡಿಯುವುದದಾರು ಹೇಗೆ ..? ಇವೆಲ್ಲ ಕೂತೂಹಲದ ಜೊತೆಗೆ  ಮೆಲ್ಲಗೆ ಅಂದು ಬೆಳಗ್ಗೆ ಒಬ್ಬಬ್ಬರೇ ಕಾರ್ಯಕ್ರಮದ ಹಾಲಿನತ್ತ ಬರುತ್ತಿದ್ದರೆ ,ಕಾರ್ಯಕ್ರಮದ ಜವಾಬ್ದಾರಿ ಹೊತ್ತವರು ಮಾತ್ರ ಕೊಂಚ ಒತ್ತಡದಲ್ಲೆ ಪೂರ್ವಸಿದ್ಧತೆಯ ತಯಾರಿಗೆ ಅತ್ತಿಂದಿತ್ತ ಓಡಾಡುತ್ತಲೇ ಇದ್ದರು. ಮುಂಡಗೋಡಿನಲ್ಲೇ ಇದ್ದವರು ತಮ್ಮ ತಮ್ಮ ಗೆಳೆಯರ ಜೊತೆ ಗುಂಪುಗೂಡಿ ಇದ್ದರೆ ,ಪರ ಊರುಗಳಿಂದ ಬಂದವರು ಮನಸ್ಸಿನಾಳದಲ್ಲಿ ಚಿಕ್ಕದೊಂದು ಅಳುಕಿಟ್ಟುಕೊಂಡೆ ಬರುತ್ತಿದ್ದರು ,ಬಹಳ ವರ್ಷಗಳ ನಂತರ ಸಿಕ್ಕ ತನ್ನ ಮಿತ್ರರನ್ನ ಬಾಚಿ ತಬ್ಬಿಕೊಂಡು ಮಾತನಾಡಿಸುವುದನ್ನು ನೋಡುವದೇ ಒಂತರ ಮಜವಾಗಿತ್ತು ,ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿರುವಾಗ ತುಂಬಾ ಬದಲಾಗಿ ಬಿಟ್ಟಿದ್ದಿಯ ,ನನ್ನ ಗುರುತು ಹಿಡಿಯಲಿಲ್ಲವ ,ಇವರ್ಯಾರು ಅಂತ ಗೊತ್ತಾಗಿಲ್ಲ ಎಂಬ ಮಾತುಗಳು ಸಹಜವಾಗಿಯೇ ಅಲ್ಲಲ್ಲಿ ಕೇಳಲು ಸಿಗುತ್ತಿತ್ತು.ಸಾಮಾನ್ಯದಂತೆಯೇ ಶುರುವಾದ ಉದ್ಘಾಟನ ಹಾಗೂ ಇನ್ನಿತರ ಕಾರ್ಯಕ್ರಮಗಳ ನಂತರ ನಡೆದ ಸ್ವ-ಪರಿಚಯ ಕಾರ್ಯಕ್ರಮದಿಂದ ಎಲ್ಲರ ಮೊಗದಲ್ಲಿ ನಗು ಅರಳಲಾರಂಭಿಸಿತು ,ಅಲ್ಲಿಂದ ಶುರುವಾದ ಪರಸ್ಪರರ ಮಾತುಗಳು ಅಲ್ಲಿಂದ ಹೊರಡುವವರೆಗೂ ನಿಲ್ಲಲೇ ಇಲ್ಲ ,ಅದ್ಯಾವ ಪರಿ ಮಾತುಗಳು ಆಮೇಲೆ ಶುರುವಾದವೆಂದರೆ ಕಾರ್ಯಕ್ರಮದ ನೀರೂಪಕಿ ಬಂದು ಯಾರು ಮಾತಡಬ್ಯಾಡ್ರಿ ಸ್ವಲ್ಪ ಸುಮ್ಮನ ಕೂತ್ಕೋರಿ - silence please ಅಂದಾಗ ,ನಾನಂತೂ ಗಕ್ಕನೆ ನಕ್ಕುಬಿಟ್ಟೆ , ಅಲ್ಲೇ ಇದ್ದ ಗುರುಗಳ ಹತ್ತಿರ ಮೈಕು ಕೊಟ್ಟು - ಇದೇನು ಕ್ಲಾಸ್ ರೂಮಾ ಅಥವಾ ಸಂತೆ ಮಾರ್ಕೆಟ್ಟಾ ಅಂತ ಅವರೆಲ್ಲರನ್ನ ಒಮ್ಮೆ ಬೈಸಿಬಿಡಬೇಕು ಅಂತ ಆ ಕ್ಷಣಕ್ಕೆ ಅನ್ನಿಸಿದ್ದಂತೂ ಸುಳ್ಳಲ್ಲ.  ಬೆಳಗಿನ ಉದ್ಘಾಟನಾ ಕಾರ್ಯಕ್ರಮದ ನಂತರ ಮಧ್ಯ ಇದ್ದ ಚಿಕ್ಕ ಬಿಡುವಿನಲ್ಲಿ  ಒಂದಿಷ್ಟು ಜನ ಗುಂಪು ಗುಂಪಾಗಿ ಹಳೆಯ ಮಿತ್ರರ ಜೊತೆ ಮಾತು ಕಥೆಯಲ್ಲಿ ತೊಡಗಿದ್ರೆ ಇತ್ತ ಹೊರಗಡೆ ಬಂದವರೆಲ್ಲ ಮಿತ್ರರ ಜೊತೆಗೂಡಿ ಚಿನ್ನಿ ದಾಂಡು ,ಬುಗುರಿ ,ಗೋಲಿ ಆಟಗಳನ್ನ ಹೆಣ್ಣು ಮಕ್ಕಳು ಕುಂಟಪ್ಪಿಲ್ಲೇ ಆಟ ಆಡುತ್ತಿರುವುದನ್ನ ನೋಡಿದರೆ ಆ ಕಾರ್ಯಕ್ರಮದ ಸಭಾಂಗಣ ಥೇಟ್ ಶಾಲೆಯಂಗಳದಂತೆ ಕಾಣುತಿತ್ತು , ಅಷ್ಟರಲ್ಲೇ ದೂರದ ಪ್ರಯಾಣದಿಂದ ಶಿಕ್ಷಕರು ಒಬ್ಬೊಬ್ಬರೇ ಬರಲಾರಂಭಿಸದರು ,ತಮಗೆ ವಿದ್ಯೆ ಕಲಿಸಿದ ಗುರುಗಳು ಬರುತ್ತಿದ್ದಂತೆ ಎಲ್ಲರೂ ಒಡಿ ಹೋಗಿ ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತ ಮಾತಾನಾಡಿಸುತ್ತಿದ್ದರು.

ಗುರುವಂದನಾ ಕಾರ್ಯಕ್ರಮ
ಬಹುತೇಕ ಬಾರಿ ಹೀಗಾಗಿರತ್ತೆ ನಮಗೆ ಪಾಠ ಹೇಳುತ್ತಿದ್ದ ಶಿಕ್ಷಕರು ಅಕಸ್ಮಾತ್ ಎದುರಿಗೆ ಬರುವಾಗ ಮನಸ್ಸು ಕಳ್ಳತನಕ್ಕೆ ಬಿದ್ದು ಅಲ್ಲಿಂದ ಬೇರೆ ದಾರಿ ಹಿಡಿದು ಓಡಿಸಿಬಿಟ್ಟಿರುತ್ತೆ ,ಅನೇಕ ಬಾರಿ ಸ್ವತಃ ನಾನೇ ಈ ತರಹ ನೋಡಿದರು ನೋಡದಂತೆ ನಡೆದುಬಿಟ್ಟಿದ್ದೇನೆ ,ಹಾಗೆ ಮುಖ ತಿರುವಿ ಬಂದಮೇಲೆ ಯೋಚಿಸಿದ್ದೇನೇ ನಾನ್ಯಾಕೆ ಹೀಗೆ  ಬಂದೇನಂತ.ಅಸಲಿಗೆ ವಿಷಯವೇನೆಂದರೆ  ಮಾತನಾಡಿದರೆ  ಏನಂತ ಮಾತನಾಡೋದು..? ಅವರಿಗೆ ನಾನು ನೆನಪಿರಬಹುದ..? ಕೇಳಿದರೆ ನನ್ನ ಬಗ್ಗೆ ಏನಂತ ಹೇಳೋದು .? ಹೀಗೆ ರಸ್ತೆಯಲ್ಲಿ ಮಾತನಾಡೋದು ಸರಿನ ..ಈ ತರಹದ ಅನೇಕ ಪ್ರಶ್ನೆಗಳ ಕಾರಣ ಮಾತನಾಡಿಸಲು ಹಿಂದೇಟು ಹಾಕಿರುತ್ತೇವೆ..ಆದರೆ ಇಲ್ಲಿ ಹಾಗಾಗಲಿಲ್ಲ ವಾತಾವರಣ ಪೂರಕವಾಗಿತ್ತು ,ಮಿತ್ರರನ್ನ ಗುರುಗಳನ್ನ ಮಾತನಾಡಿಸಲೆಂದೇ ಎಲ್ಲರೂ ಸಹ ಬಂದದ್ದು . ಹೈಸ್ಕೂಲ್ ನಿಂದ ಕಾಲೇಜಿನ ತನಕದ ಎಲ್ಲ  ಶಿಕ್ಷಕರು ಸಹ ಬಂದಿದ್ದರು.ಪ್ರತಿಯೊಬ್ಬರು ಸಹ ಅತ್ಯಂತ ಪ್ರೀತಿಯಿಂದ ತಮ್ಮ ಗುರುಗಳನ್ನ ಮಾತನಾಡಿಸುತ್ತ ನಮಸ್ಕರಿಸುತ್ತ ,ಅವರಿಗೆ ಗುರುತು ಸಿಗದಿದ್ದರೂ ಸಹ ತಾವೇ ತಮ್ಮ ಪರಿಚಯವನ್ನು ಹೇಳಿಕೊಳ್ಳುತ್ತಿರುವುದನ್ನು ನೋಡಿದಾಗ ನನಗನಿಸಿದ್ದು ನೆನಪಿನ ಉಯ್ಯಾಲೆ ಅತಿ ಸುಂದರವಾಗಿ ತೂಗುತ್ತಿದೆಯಂತ .ಭಾರತೀಯ ಪರಂಪರೆಯಲ್ಲಿ ಗುರುವಿಗೆ ಕೊಟ್ಟ ಸ್ಥಾನವೇ ಅಂತದ್ದು, ಕೇವಲ ವಿದ್ಯೆಯನ್ನ ಮಾತ್ರವಲ್ಲದೆ ,ವ್ಯಕ್ತಿತ್ವವನ್ನ ಘಟ್ಟಿಗೊಳಿಸುತ್ತ ,ಬದುಕಿನ ಮೌಲ್ಯಗಳನ್ನ ತಿಳಿಸಿ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಮಾಡುತ್ತ ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ಬೆಳೆಯುವಂತೆ ಪ್ರೇರೇಪಿಸುತ್ತಿದ್ದರು ,ಅಲ್ಲಿ ಕೇವಲ ಶಿಕ್ಷಕನಾಗದೆ ಗುರು-ಶಿಷ್ಯರಾಗುತ್ತಿದ್ದರು. ಸರ್ ಅಂತ ಹೇಳುತ್ತಾ , ಯಾವಾಗ ಪರಕೀಯರ ಶಿಕ್ಷಣ ಪದ್ಧತಿಯನ್ನ ಅಳವಡಿಸುವತ್ತ ಸಾಗಿತೋ ಅಂದಿನಿಂದಲೇ ಶಿಕ್ಷಕ ಕೇವಲ ಶಿಕ್ಷಕನಾಗಿ ಬದಲಾಗುತ್ತಾ, ಗುರು ಶಿಷ್ಯರ ನಡುವಿನ ಆ ಭಾಂಧ್ಯವ್ಯದ ಅಂತರ ಬೆಳೆಯುತ್ತ ಸಾಗಿತ ಎಂದೆನಿಸುತ್ತದೆ,ಆದರೆ ಇಲ್ಲಿ ಗುರು ಶಿಷ್ಯರ ಬಾಂಧವ್ಯವಿತ್ತು ,ಆ ಗುರು ಶಿಷ್ಯರ ನಡುವಿನ ನಂಟೆ ಇಂದಿನ ಈ ಕಾರ್ಯಕ್ರಮಕ್ಕೆ ಕಾರಣವಾಗಿದ್ದು . ಮೂವತ್ತು ವರ್ಷಗಳ ನಂತರ ತನಗೆ ವಿದ್ಯೆಯನ್ನು ಕೊಟ್ಟ ಎಲ್ಲ ಗುರುಗಳನ್ನ ಒಂದು ವೇದಿಕೆಯಲ್ಲಿ ಕೂಡಿಸಿ ನಮಗೆ ವಿದ್ಯೆಯನ್ನ ನೀಡಿ ,ನಮ್ಮ ವ್ಯಕ್ತಿತ್ವವನ್ನ ತಿದ್ದಿ ತೀಡಿ ,ಸಮಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗುವತ್ತ ಮಾರ್ಗದರ್ಶನ ನೀಡಿರುವುದಕ್ಕೆ ಗುರುಗಳೇ ತಮಗೊಂದು ಧನ್ಯವಾದ ಅಂತ ಹೇಳುವ ಭಾಗ್ಯ ಬಹುಶ ಎಲ್ಲ ಶಿಷ್ಯಂದರ ನಸೀಬಿನಲ್ಲಿ ಬರೆದಿರುವುದಿಲ್ಲ. ತಮ್ಮ ಮುಂದೆ ಇಷ್ಟಿದ್ದ ಮಕ್ಕಳು ಇಂದು ಎದೆಯೆತ್ತರಕ್ಕೆ ಬೆಳೆದು ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ಬದುಕುರುತ್ತಿರುವುದನ್ನ ನೋಡಿದಾಗ ತನ್ನ  ಮಕ್ಕಳನ್ನೇ ನೋಡಿದಷ್ಟು ಸಂತೋಷ ಗುರುಗಳಿಗೆ ಆಗಿರಬಹುದು.ಅಲ್ಲಿಂದ ಮುಂದೆ ತಮ್ಮ ನಡುವಿನ ಸಾಧಕರಿಗೆ ಸನ್ಮಾನಿಸಿ ಅವರನ್ನ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.

ಪರಸ್ಪರ ಮಾತು ,ಹಾಸ್ಯ ,ನಗು ,ಆಟ ಒಂದಿಷ್ಟು ಹಾಡು ,ಗುರುಗಳ ಜೊತೆ ಮಾತು ಮತ್ತು ಸಾಕಷ್ಟು ಕ್ಲಿಕ್ಕಿಸಿಕೊಂಡ ಫೋಟೋಗಳು , ನಡುವೆ ಆ ಒಂದಿಡಿ ದಿನ ಕಳೆದದ್ದು ಗೊತ್ತೇ ಆಗಲಿಲ್ಲ .ಬಾಲ್ಯದ ದಿನಗಳು,ಶಾಲಾ ಕಾಲೇಜಿನ ದಿನಗಳು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ,ಆ ದಿನಗಳೇ ಒಂತರ ಮಜವಾಗಿದ್ದವು ಈಗ ಆ ದಿನಗಳಿಗಂತು ಮರಳಲು ಸಾಧ್ಯವಿಲ್ಲ ಆದರೆ ಈ ಚೆಂದದ ದಿನಗಳ ನೆನಪುಗಳನ್ನ ಮೆಲಕು ಹಾಕಬಹುದಷ್ಟೇ , ಹೊಟ್ಟೆ ತುಂಬ ಹಸಿವು ಸಿಕ್ಕಿದ್ದನ್ನ ತಿಂದು ಚಿಂತೆಯಿಲ್ಲದೆ ಕಣ್ತುಂಬ ನಿದ್ದೆ ಮಾಡುತ್ತಿದ್ದೆವು ,ಬೆಳಗ್ಗೆ ಜಗಳವಾಡಿದ ಮಿತ್ರ ಮಧ್ಯಾಹ್ನದ ಹೊತ್ತಿಗೆ ಮತ್ತೆ ಜತೆಯಾಗುತ್ತಿದ್ದ ,ಗಾಯಗಳು ದೇಹದ ಮೇಲಾಗುತ್ತಿದ್ದವು ಮನಸ್ಸಿನ ಮೇಲಲ್ಲ ,ಹೇಳುತ್ತಾ ಹೊರಟರೆ ಮುಗಿಯದ ಕಥೆಯದು.ಈಗೀಗ ನಮ್ಮೆಲ್ಲರ ಬದುಕಂತು ಓಟಕ್ಕೆ ನಿಂತಂತೆ ಓಡುತ್ತಿದೆ ಯಾರಿಗೂ ಸಹ ಸಮಯವಿಲ್ಲ ,ನಾವು ಬೆಳೆಯುತ್ತ ಬೆಳೆಯುತ್ತ ನಮ್ಮ ಬದುಕು ಬದಲಾಗಿದೆ ಜೊತೆಗೆ ನಮ್ಮೂರು ಕೂಡ, ಹಾಗೆಯೇ ನಮ್ಮ ಹೆಗಲ ಮೇಲಿನ ಜವಾಬ್ದಾರಿಗಳು ತುಸು ಭಾರ ಎನಿಸುವಂತೆಯೇ ಆಗಿವೇ, ಈ ಓಟದ ಮಧ್ಯೆಯೇ ಒಂದು ವಿರಾಮ ಕೊಟ್ಟು ತುಸು ಮಟ್ಟಿಗೆ ಹೆಗಲ ಮೇಲಿನ ಭಾರವನ್ನೆಲ್ಲ ಕಳಿಚಿಟ್ಟು,  ಹಳೆಯದನ್ನೆಲ್ಲ ಒಮ್ಮೆ ನೆನಪು ಹಾಕಿದ ಒಂದಿಡೀ ದಿನವನ್ನ ಹಾಡುತ್ತ ಕುಣಿಯುತ್ತ ಕಳೆದು,ಇಲ್ಲಿಂದ ಹೊರಡುವಾಗ ಒಮ್ಮೆ ಮನಸ್ಸು ಭಾರವಾದಂತೆ ಅನಿಸಿತೋ ಅಲ್ಲಿಗೆ ಈ ಕಾರ್ಯಕ್ರಮದ ಆಶಯ ಪೂರ್ಣಗೊಂಡಂತೆ. ಹೇಗೆ ನಮಗೆ ನಮ್ಮ ಬಾಲ್ಯದ ದಿನಕ್ಕೆ ಮರಳು ಸಾಧ್ಯವಿಲ್ಲವೋ ಹಾಗೆ  ಈ ಸ್ನೇಹಮಿಲನ ಕಾರ್ಯಕ್ರಮವು ಸಹ ಇಂದಿನ ಈ ದಿನ ಕಳೆದರೆ ಮತ್ತೆಂದು ಮರಳದು.ನಮ್ಮ ನೆನಪುಗಳ ಪುಟಗಳಲ್ಲಿ ಒಂದು ಹೊಸ ಪುಟ ಸೇರಿಕೊಂಡಿತು.ಕೊನೆಯದಾಗಿ ಹೇಳುವುದು ಏನಿದೆ
ಮತ್ತೆ ಸಿಗೋಣ ಅಷ್ಟೇ...!

ಪವನ್ ಹೆಬ್ಬಾರೆ 


Friday, September 4, 2020

ನೆಮ್ಮದಿಯ ನಿಟ್ಟುಸಿರು

ದೂರ ಇರಬೇಕೆನ್ನುವಷ್ಟು ಬಂದು ಸುತ್ತಿಕೊಳ್ಳುತ್ತೇ ಈ ರಾಜಕೀಯದ ಬಳ್ಳಿ. ಅದೇಕೋ ಏನೂ ಈ ರಾಜಕೀಯ , ರಾಜಕೀಯ ಪಕ್ಷ ಮತ್ತು ಅಲ್ಲಾಗುವ ಡೊಂಬರಾಟಗಳು ಇವ್ಯಾವವು ಕೂಡ ಮೊದಲಿನೊಂದಲು ಅದೇನೋ ಒಂದು ನಕಾರಾತ್ಮಕ ಭಾವವನ್ನು ನನ್ನಲ್ಲಿ ಸ್ರಷ್ಟಿಸಿ ಬಿಟ್ಟಿವೇ. ಇಂತದೆ ಇನ್ನೂ ಅನೇಕ ಕಾರಣಗಳಿಂದ ಇವೆಲ್ಲ ರಾಜಕೀಯದ ಆಟಗಳಿಂದ ದೊರವೇ ಉಳಿದು ಬಿಟ್ಟಿದ್ದೇನೆ.  ಆದರೆ ಎಲ್ಲ ಪಕ್ಷಗಳಲ್ಲಿಯೂ ನನ್ನ ಆತ್ಮೀಯರು ಇದ್ದೆ ಇದಾರೆ ಎಲ್ಲರೊಂದಿಗೂ ಒಳ್ಳೆಯ ಬಾಂದ್ಯವ್ಯವಿದೆ. ಅದೆಷ್ಟೇ ವೀರೋಧಗಳು ಇದ್ದರು ಅದು ಅವರ ರಾಜಕೀಯ ನಿಲುವುಗಳಲ್ಲಿಯೇ ಹೊರತು ಯಾವದೇ ವ್ಯಕ್ತಿಯ ಜೊತೆಗಿಲ್ಲ. ಆದರೆ ಈಗ ವಿಷಯ ಅದಲ್ಲ. ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಬೆರೆಯುತ್ತಿದ್ದಾನೆ , ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ ಎಂದರೆ , ಆತ ರಾಜಕೀಯಕ್ಕಾಗಿ ಮಾಡುತ್ತಿದ್ದಾನೋ ಏನೋ..? ಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನ..? ಇವನು ಯಾವ ಪಕ್ಷದವನು ಎಂತೆಲ್ಲ, ಆ ವ್ಯಕ್ತಿಯ ಸುತ್ತ ಕಥೆಗಳು ಶುರುವಾಗತ್ತೆ, ಸಾಮಾಜಿಕ ಕಾರ್ಯವೆಂದರೆ ಬರಿ ರಾಜಕೀಯ ಧುರೀಣರು ಎನಿಸಿಕೊಂಡವರು ಹಾಗೂ ರಾಜಕೀಯ ವ್ಯಕ್ತಿಗಳೇ ಮಾಡುವದು ಎಂಬಂತಹ ಅಲಿಖಿತ ಚೌಕಟ್ಟೊಂದು ಸಮಾಜದಲ್ಲಿ ಬೆಳೆದು ನಿಂತಿದೆ. ಖಂಡಿತವಾಗಿಯೂ ಇದು ತಪ್ಪು ಕಲ್ಪನೆಯೇ ಸರಿ. 
ಈಗ ನನ್ನ ವಿಚಾರದಲ್ಲೂ ಸಹ ಆಗಿರುವಂತದ್ದು ಇದೆ., ಪ್ರತಿ ಬಾರಿ ಯಾವದಾದರು ಚುನಾವಣೆ ಬಂತೆಂದರೆ ಯಾಕಾರು ಬರುತ್ತಪ್ಪ ಎನ್ನಿಸುವಷ್ಟು ಹಿಂಸೆಯನಿಸಿ ಬಿಡುತ್ತೆ. ನೀನು ಈ ಪಕ್ಷವ ಆ ಪಕ್ಷವ ಎನ್ನುವದರಿಂದ ಹಿಡಿದು ಸಂಬಂಧವೇ ಇಲ್ಲದ ಕಡೆಯಲ್ಲಿ ಎಲ್ಲ ನನ್ನ ಹೆಸರು ತಳಕು ಹಾಕಿಕೊಂಡು ಬಿಡುತ್ತೆ. ಸತ್ಯವಾಗಿಯೂ ಹೇಳುತ್ತೇನೆ ಈ ರಾಜಕೀಯ ನನ್ನ ಉದ್ದೇಶವೇ ಅಲ್ಲ , ಅಕಸ್ಮಾತ್ ರಾಜಕೀಯವೇ ನನ್ನ ಉದ್ದೇಶವಾಗಿದ್ದರೆ ಇಷ್ಟೊತ್ತಿಗೆ ಯಾವದೇ ಪಕ್ಷದಲ್ಲಿಯೋ  ಅಥವಾ ಕಳೆದ ಚುನಾವಣೆಯಲ್ಲಿ ನೇರವಾಗಿಯೇ ಕಣದಲ್ಲಿ ಭಾಗವಹಿಸುರಿತ್ತಿದ್ದೆ. ಚಕ್ರವರ್ತಿ ಅಣ್ಣನ ಮೂಲಕ ಸೈನಿಕರು ಹಾಗೂ ಸ್ವಾತಂತ್ರ್ಯದ ಕಲಿಗಳ ವೀರಗಾಥೆಯನ್ನ ಕೇಳುತ್ತ ವಿವೇಕಾನಂದರ ಮಾರ್ಗದರ್ಶನದಲ್ಲಿ ಸಾಮಾಜಿಕವಾಗಿ ಬೆರೆತು ರಾಷ್ಟ್ರಿಯತೆಗಾಗಿ ಬದುಕು ಸವಿಸಬೇಕು ಎಂಬ ಆಲೋಚನೆಯನ್ನ ಇಟ್ಟುಕೊಂಡವನು ಅಷ್ಟೇ. ಇನ್ನು ನಮ್ಮನ್ನು ತೀರ ಹತ್ತಿರದಿಂದ ಬಲ್ಲವರಿಗೆ ಗೊತ್ತು ನಾವಿಟ್ಟುಕೊಂಡ ಗುರಿ ಏನೂ ಎಂಬಂತಹದು. ಜಗತ್ತಿನ ಯಾವ ಆಗೂ ಹೋಗುಗಳ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ ದೂರಉಳಿದ ಅಪರೂಪಕ್ಕೊಮ್ಮೆ ಸಿಗುವ ಮಿತ್ರರು ಏನಪ್ಪಾ ನಿನ್ ಬಿಡು ಈಗ ಫುಲ್ ರಾಜಕೀಯ (politicion) ಆಗಿ ಬಿಟ್ಟಿದ್ದಿಯ ಎಂದು ಹೇಳಿದಾಗ ಅವರಿಗೆ ಹೇಗೆ ಮನವರಿಕೆ ಮಾಡುವದು ಎಂದು ಅರಿವಾಗದೆ ನಕ್ಕು ಸುಮ್ಮನಾಗಿಬಿಡುತ್ತೇನೆ. ನನಗೂ ಸಹ ಎಲ್ಲರಂತೆ ಮನೆಯ ಜವಾಬ್ದಾರಿ ಇದೆ,ವಯಕ್ತಿಕ ತಾಕಲಾಟಗಳಿವೆ ,  ವೃತ್ತಿ ಜೀವನದ ಜವಾಬ್ದಾರಿ ಇದೆ , ನನ್ನೂರಿನಿಂದ ದೂರ ಉಳಿದು ಹತ್ತು ವರ್ಷಗಳಿಂದ ಅದೀಕವೇ ಆಯಿತು ಆದರೆ ಎಂದಿಗೂ ಸಹ ನನ್ನೂರಿನ ಈ ಆತ್ಮೀಯತೆ , ಭಾಂದ್ಯವ್ಯ ಅಥವಾ ದೂರಲ್ಲಿದ್ದಿನೇ ಎಂಬಂತಹ ಭಾವ ಎಂದಿಗೂ ಕಾಡಲೇ ಇಲ್ಲ. ಇದಕ್ಕೆಲ್ಲ ಕಾರಣವಾಗಿದ್ದು ನನ್ನ ಯುವಾ ಬ್ರಿಗೇಡ್. ವಿವೇಕಾನಂದರನ್ನ ನನ್ನೊಳಗೆ ಇಂಜೆಕ್ಟ್ ಮಾಡಿದ ಪರಿಣಾಮವೋ ಅಥವಾ ಚಕ್ರವರ್ತಿ ಅಣ್ಣನ ಮೂಲಕ ಒಳಗೆ ಇಳಿದ ರಾಷ್ಟ್ರೀಯತೆಯ ಭಾವವೋ..! ನನ್ನೂರಿನ ಕುರಿತಂತೆ ಅನೇಕ ಕನಸುಗಳನ್ನ ಕಟ್ಟಿಕೊಳ್ಳುವಂತೆ ಮಾಡಿಬಿಟ್ಟಿದೆ. ದೂರದ ಊರಿನಲ್ಲೇನೋ ಒಂದು ಒಳ್ಳೆಯ  ಉದ್ಯಾನವನ, ಬಸ್ ಸ್ಟಾಂಡ್ , ಒಂದೊಳ್ಳೆ ಕಾಲೇಜು, ಒಳ್ಳೆಯ ವ್ಯವಸ್ಥೆಯುಳ್ಳ ಆಸ್ಪತ್ರೆ ,ತರುಣರಿಗೆ ಒಂದಿಷ್ಟು ಕೆಲಸ,  ಕೊನೆಗೆ ಒಳ್ಳೆಯದೊಂದು ರಸ್ತೆ ಕಂಡಾಗಲು ಸಹ ಇದೂ ನಮ್ಮೂರಲ್ಲಿ ಇದ್ದರೆ ಎಷ್ಟು ಚೆಂದವಲ್ಲವ ಎಂದೆನಿಸುತ್ತದೆ. ಮಾತ್ ಆಡಿದರೆ ಸಾಕು ಅದು ಹಾಗೆ ಇದು ಹೀಗೆ ಅಂತ ಹತ್ತು ಹಲವು ಸಮಸ್ಯೆಗಳನ್ನೇ ಹೇಳುತ್ತಾರೆಯೇ ಹೊರತು ಅದಕ್ಕೆ ಪರಿಹಾರ ಏನೂ ..? ಏನೂ ಮಾಡಬಹುದು ಎಂಬ ಪ್ರಶೇ ಬಂದಾಗ ನಿಜಕ್ಕೂ ಅವರ ಹತ್ರ ಉತ್ತರವೇ ಇರಲ್ಲ. ಇನ್ನು ಇವಗಳನ್ನೆಲ್ಲ ಸರಿ ಮಾಡುವ ಒಟ್ಟು ಅವಕಾಶ ಕೈಯಲ್ಲಿ ಇದ್ದಾಗ ಒಂದಿಷ್ಟು ನೋಟುಗಳಿಗೆ ಬಲಿಯಾಗಿ ಮತಗಳನ್ನು ಮಾರಿಕೊಂಡು ಮತ್ತೈದು ವರ್ಷ ಸಮಸ್ಯೆಗಳ ಸರಮಾಲೆಯಲ್ಲಿ ಇನ್ನೊಂದಿಷ್ಟು ಸಮಸ್ಯೆಗಳನ್ನ ಪೋಣಿಸುತ್ತ ಕೂತು ಬಿಡುತ್ತಾರೆ. ಮೊನ್ನೆ ನಡೆದ ಪಟ್ಟಣ ಚುನಾವಣೆಯಂತೂ ನಿಜಕ್ಕೂ ತುಂಬಾ ಬೇಸರ ತಂದು ಬಿಟ್ಟಿದೆ. ಯಾವ ಚುನಾವಣಾ ಅಭ್ಯರ್ಥಿಯು ಅಥವಾ ನಾಯಕನು ಬ್ರಷ್ಟನಾಗಿರುವದಿಲ್ಲ ಅಥವಾ ಕೆಟ್ಟವನಾಗಿರುವದಿಲ್ಲ  , ಆತ ಹೇಗೆ ಇದ್ದರೂ ಸಹ ಅದು ಮತದಾರರ ಸ್ರಷ್ಟಿ ಅಷ್ಟೇ. ಒಂದಂತೂ ಸತ್ಯ ಅರಿವಿಗೆ ಬಂದಾಗಿದೆ ಎಲ್ಲಿಯವರೆಗೆ ನೋಟಿನ ಮೇಲೆ ಓಟಿನ ಆಟ ನಡೆಯತ್ತೋ ಅಲ್ಲಿಯ ವರೆಗೆ ಮುಂಡಗೋಡ ಸುಧಾರಿಸುವದಿಲ್ಲ ಬರೆದಿಟ್ಟುಕೊಂಡು ಬಿಡಿ ಇದನ್ನ. ಅದು ಆದರೂ ಸಹ ಅಮೆ ಗತಿಯದ್ದೇ . ಉದಾಹರಣೆಗೆ ಈ ವರ್ಷ ಏನಾದ್ರೂ ಮುಂಡಗೋಡಿಗೆ ಬಸ್ ಸ್ಟಾಂಡ್ ನಿರ್ಮಾಣವಾದರೆ ಅದಕ್ಕೆ ಏನೇನ್ನುವಿರಿ..? 
ನನ್ನವರಿಗೆ ಅದ್ಯಾಕೆ ಇವೆಲ್ಲ ಬೇಕು ಅಂತ ಅನಿಸುವದಿಲ್ಲವೋ , ಅರ್ಥವಾಗುವದಿಲ್ಲವೋ  ಭಗವಂತನೇ ಬಲ್ಲ. ಅಥವಾ ಈ ಊರೇ ಇಷ್ಟು ಎಂದು ನಿರ್ಧರಿಸಿ ಬಿಟ್ಟಂತೆ ಇದೆ. ಹೇಳುತ್ತಾ ಹೋದರೆ ಇದು ಮುಗಿಯದೆ ಹೊದಿತು ಸಾಕು. ಇನ್ನೇನು ಲೋಕಸಭೆ ಚುನಾವಣೆ ಮತ್ತೆ ಬರುತ್ತಿದೆ ರಾಜಕೀಯ ಹೌದೋ ಅಲ್ಲವೋ ಆದರೆ ಈ ಬಾರಿ ಮತ್ತೆ ಮೋದಿಯನ್ನ ಬಲಿಷ್ಠಪಡಿಸಬೇಕಿದೆ , ದೇಶಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ಸೇವಕನಿಗೆ ಮತ್ತೊಮ್ಮೆ ಅವಕಾಶ ನೀಡಬೇಕಿದೆ. ಮೋದಿಯ ಕುರಿತು ಮಾತನಾಡುತ್ತೇನೆಂದೆರೆ ನಾನು ಭಾಜಪಾ ಆಗಿಬಿಟ್ನ..? 😉😛😆(2018 ರಲ್ಲಿ ಬರೆದದ್ದು)

Monday, April 6, 2020

ಶಕ್ತಿಮಾನ್ ಗೆ ಶಕ್ತಿಗಳು ದೊರೆತಿದ್ದು ಎಲ್ಲಿಂದ..?

  ಭಾರತದಲ್ಲಿ ಶಕ್ತಿಮಾನ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.? 90ರ ದಶಕದ ಕೊನೆಯಲ್ಲಿ ಶುರುವಾದ ಈ ಧಾರಾವಾಹಿಯ ಸರಣಿಯು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಅಚ್ಚುಮೆಚ್ಚಿನದಾಗಿತ್ತು.ಶಕ್ತಿಮಾನ್ ಭಾರತದ ಮೊದಲ ಸೂಪರ್ ಹೀರೊ. ಈಗ ಕರೋನ ಕಾರಣದಿಂದ ಪೂರ್ತಿ ದೇಶವೇ ಲಾಕ್ ಡನ್ ಆದ ಹಿನ್ನೆಲೆಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಖ್ಯಾತ tv ಸರಣಿಗಳಾದ "ರಾಮಾಯಣ" "ಮಹಾಭಾರತದ" ಜೊತೆ ಸುಮಾರು 21ವರ್ಷಗಳ ಬಳಿಕ ಶಕ್ತಿಮಾನ್ ಕೂಡ ಪ್ರಸಾರವಾಗುತ್ತಿದೆ. ಶಕ್ತಿಮಾನ್ ನಂತರ ನಾವು ಸಾಕಷ್ಟು ಸೂಪರ್ ಹೀರೋಗಳನ್ನ ನೋಡಿದಿವಿ  ಐರನ್ ಮ್ಯಾನ್ ,ಸ್ಪೈಡರ್ ಮ್ಯಾನ್ , ಹಲ್ಕ್ , ಕ್ರಿಶ್ ,ರಾ-ವನ್ ಇತ್ತೀಚಿಗೆ ತೆರೆಕಂಡ ರಜನಿಕಾಂತನ ಚಿಟ್ಟಿ ಜೊತೆಗೆ ಅನೇಕ ಸೂಪರ್ ಹೀರೋಗಳು ಆಗಿಹೋದರು ಆದರೆ ಇವರೆಲ್ಲ ಸೂಪರ್ ಹೀರೋಗಳಾದ ಹಿನ್ನೆಲೆಯಲ್ಲಿ ಒಂದು ಕಥೆ ಇದೆ ಅಥವಾ ಇನ್ಯಾವದೋ ಒಂದು ಕಡೆಯಿಂದ ಇವರಿಗೆ  ಶಕ್ತಿ ಲಭಿಸಿರುತ್ತದೆ ಆದರೆ ಇವಗಳೆಲ್ಲ ಕೇವಲ ಕಪೋಕಲ್ಪಿತ ಕಥೆಗಳು ನಿಜ ಜೀವನದಲ್ಲಿ ಸಾಧ್ಯವಿಲ್ಲ ಎಂಬುದು ಸಿನೆಮಾ/ಪಾತ್ರದಿಂದ ಆಚೆ ಬರುತ್ತಲೇ ಅರಿವಾಗುತ್ತೆ.ಈಗ ವಿಷಯಕ್ಕೆ ಬರೋಣ ಶಕ್ತಿಮಾನ್ ಗೆ ಶಕ್ತಿಗಳು ಬಂದಿದ್ದು ಎಲ್ಲಿಂದ..? ಆತ ಹೇಗೆ ಗಳಿಸಿಕೊಂಡ ಈ ಶಕ್ತಿಗಳನ್ನ.? ಮತ್ತೆ ಮರುಪ್ರಸಾರವಾಗುತ್ತಲೇ  ಇಂತಹ ಪ್ರಶ್ನೆ ಮನಸಲ್ಲಿ ಮೂಡತೊಡಗಿದವು.ಇವುಗಳ ಉತ್ತರಕ್ಕೆ ಈ ಪುಟ್ಟ ಪರಿಶ್ರಮ.ಶಕ್ತಿಮಾನ್ ನ ಮೊದಲನೇ ಸಂಚಿಕೆ ನೋಡಿದವರಿಗೆ ಗೊತ್ತಿರುತ್ತೆ ಆದರೆ ಹೆಚ್ಚಿನವರು ಅದನ್ನ ನೋಡಿಯೇ ಇಲ್ಲ ಅಕಸ್ಮಾತ್ ನೋಡಿದ್ರು ಕೂಡ ನನ್ನಂಥವರಿಗೆ ಅರ್ಥವಾಗಿರಲಿಕ್ಕಿಲ್ಲ ಯಾಕಂದ್ರೆ ನನಗಾಗ ಎಂಟೋ ಓಬತ್ತೋ ವರ್ಷ😉 ,ಯಾಕೋ ಇಂದು ಈ ವಿಷಯದಲ್ಲಿ ತುಂಬಾ ಅಸಕ್ತನಾಗಿ ಉತ್ತರಗಳನ್ನ ಹುಡುಕಾಡುತ್ತ ಕೂತೆ.



ಶಕ್ತಿಮಾನ್ ಎಂದರೆ ಮೊದಲು ನೆನಪಾಗೋದು ಆತ ಗಿರಿ ಗಿರಿ ತಿರುಗುವದು ಜೊತೆಗೆ ತಲೆಯಲ್ಲಿ ಗುನುಗೂಡುವದೇ  ಅದರ ಶೀರ್ಷಿಕೆಯ ಹಾಡು ಶಕ್ತಿಮಾನ್ ಶಕ್ತಿಮಾನ್ ಶಕ್ತಿಮಾನ್ (ಹಾಡಿನ ದಾಟಿಯಲ್ಲೇ ಒಮ್ಮೆ ಓದಿಬಿಡಿ 😜)
ಈ ಹಾಡಿನ ದಾಟಿಯಿಂದ ಸ್ವಲ್ಪ ಒಳಗೆ ಇಳಿದು ಅದರ  ಸಾಹಿತ್ಯವನ್ನ ನೋಡುತ್ತಾ ಹೋದರೆ ಶಕ್ತಿಮಾನ್ ನ ರೂಪ ಅನಾವರಣ ಗೊಳ್ಳುವದರ ಜೊತೆಗೆ ನಿರ್ದೇಶಕ ಏನೂ ಹೇಳಲು ಹೊರಟಿದ್ದಾನೆ ಅನ್ನೋದು ಅರ್ಥವಾಗುತ್ತ ಹೋಗುತ್ತೆ. ಮೊದಲು ಆತ ಶಕ್ತಿ ಪಡೆದುಕೊಂದದ್ದು ಹೇಗೆ ಅಂತ ನೋಡೋಣ. 
ಅದು ಶಕ್ತಿಮಾನ್ ನ  ಮೊದಲ ಸಂಚಿಕೆ ,ಹಿನ್ನಲೆ ಧ್ವನಿಯಿಂದ ಶುರುವಾಗತ್ತೆ. ಅನಂತ ಬ್ರಹ್ಮಾಂಡ ಅಂತರಿಕ್ಷ ಮತ್ತು ಅದರ ಒಂದು ಸಣ್ಣ ಭಾಗ ಪ್ರಥ್ವಿ - ಹತ್ತು ಸಾವಿರ ವರ್ಷಗಳ ಹಿಂದೆ ನಿರ್ಮಲ ,ಸುಂದರ ಮತ್ತು ಈ ಪವಿತ್ರ ಪ್ರಥ್ವಿಯ ಮೇಲೆ ಸುರ್ಯಾಂಶು ಅಂದರೆ ಸೂರ್ಯ ವಂಶಿಗಳ ರಾಜ್ಯವಿತ್ತು.ಯೋಗಿ ಮತ್ತು ತಪಸ್ವಿಗಳಿಂದ ಈ ಪ್ರಥ್ವಿಯ ಮೇಲೆ ಬೆಳಕು ತೇಜಸ್ವಿಮಯವಾಗಿತ್ತು.ಪೂಜೆ ವೇದ ಮತ್ತು ಮಂತ್ರ ಪಠಣಗಳಿಂದ ಈ ಪ್ರಥ್ವಿಯೂ ಪವಿತ್ರವಾಗಿತ್ತು.ಯೋಗ ಶಕ್ತಿಗಳಿಂದ ಈ ಪ್ರಥ್ವಿಯನ್ನ ಪವಿತ್ರ ಆತ್ಮಗಳು ಸಂಭಾಳಿಸುತ್ತಿದ್ದವು.ಇವತ್ತಿನಿಂದ ಆರುಸಾವಿರ ವರ್ಷಗಳ ಹಿಂದೆ ಕಲಿಯುಗದ ಆರಂಭವಾಯಿತು.ಕಲಿ ಜನಗಳಲ್ಲಿ ಪ್ರವೇಶಮಾಡಿದ ,ವಿಚಾರಗಳು ವಿಕಾರದಲ್ಲಿ ಬದಲಾದವು.ಇಂದು ಎಲ್ಲ ರೀತಿಯ ವಿಕಾರಗಳಿಂದ ಪ್ರಥ್ವಿ ದ್ರಷ್ಟವಾಗುತ್ತಿದೆ.ಅತ್ಯಾಚಾರ ಬೆಳೆದು ನಿಂತಿದೆ ಮಾನವಿಯತೆ ದಿನದಿನವೂ ಸಾಯುತ್ತಿದೆ.ಪ್ರತಿ ದಿನವೂ ಹೆಚ್ಚುತ್ತಿರುವ ಕ್ರೋಧ & ಅತ್ಯಾಚಾರಗಳಿಂದ ಈ ಪ್ರಥ್ವಿಯೂ ನಡುಗುತ್ತಿದೆ ರಕ್ತದ ಆಹಾಕಾರವಾಗುತ್ತಿದೆ. ಎಲ್ಲಕಡೆಯಲ್ಲೂ ಕತ್ತಲು ಪ್ರತಿಕ್ಷಣವೂ ಕೇವಲ ಕತ್ತಲು .ಈ ಅಂಧಕಾರದ ಸಾಮ್ರಾಜ್ಯದಲ್ಲಿ ಮಾನವೀಯತೆಯನ್ನು ಅನ್ಯಾಯದಿಂದ ಅತ್ಯಾಚಾರದಿಂದ ರಕ್ಷಿಸಲು ಜನ್ಮಗೊಂಡ ಒಂದು ಸೂರ್ಯನ ಅಂಶ.ಹಿನ್ನಲೆಯ
 ಧ್ವನಿಯಲ್ಲಿ ಇಷ್ಟು ಧ್ವನಿ ಉರಳುತ್ತಿದ್ದಂತೆ ಮೊದಲು ದ್ರಶ್ಯ ಶುರುವಾಗತ್ತೆ ವ್ಯಕ್ತಿಯೊಬ್ಬ ಯಜ್ಞದ ಮುಂದೆ ಕುಳಿತು ಹವನವನ್ನು ಮಾಡುತ್ತ ಗಾಯತ್ರಿ ಮಂತ್ರವನ್ನ ಹೇಳುತ್ತಿರುತ್ತಾನೆ.ಯಜ್ಞಾಹುತಿ ಮುಗಿಯುತ್ತಿದ್ದಂತೆ ಎದ್ದು ನಿಂತು ಗುರುಗಳಿಗೆ ಪ್ರಣಾಮವನ್ನು ಮಾಡುತ್ತಾನೆ .ಒಂದಿಷ್ಟು ಮಾತುಗಳ ನಂತರ ಗುರು ಹೇಳ್ತಾನೆ ನೀನಿಗ ಪಂಚಮಹಾಭೂತ ಯಾತ್ರೆಯನ್ನ ಕೈಗೊಳ್ಳಬೇಕು.ನಿನ್ನ ಯೋಗದ ಶಕ್ತಿಯ ಮೂಲಕ ಪಂಚಮಹಾಭೂತಗಳಲ್ಲಿ ವಿಭಕ್ತವಾಗಬೇಕು.ನೀನು ಈ ಕಾರ್ಯಕ್ಕೆ ಶಖ್ಯವಾಗಿದಿಯ ನಿನ್ನ ಕುಂಡಲಿನಿ ಪರಿಪೂರ್ಣ ಜಾಗ್ರತವಾಗಿದೆ.ಆತ ಗುರುಗಳ ಅಪ್ಪಣೆಯಂತೆ  ಯಜ್ಞದಲ್ಲಿ  ಕುಳಿತು ತನ್ನನ್ನು ತಾನು ವಿಭಕ್ತಗೊಳಿಸಿ ಗುರುವಿನ ಒಂದೊಂದೇ ಆಜ್ನ್ಯೆಯನ್ನು ಪಾಲಿಸುತ್ತಾ ಪಂಚಮಹಾಭೂತಗಳಿಂದ ತನ್ನ ಶಕ್ತಿಯನ್ನ ಸಂಪಾದಿಸುತ್ತ ಸಾಗುತ್ತಾನೆ. ಮುಂದಿನ ದ್ರಶ್ಯ ಸಾಗುತ್ತೆ.
ಭೂಮಿಯು ಸ್ಥಾಯಿತ್ವ ,ಆಧಾರ ಮತ್ತು ಸ್ನೇಹಶೀಲತೆಯನ್ನು ನೀಡುತ್ತೆ ,ಇದರಂತೆ ನೀನು ಧೀರ ಶೀಲ ಮತ್ತು ಸ್ಥಿರವಾಗು.
ವಾಯುವು -ಪ್ರಾಣಶಕ್ತಿ ,ಸ್ವರ ಮತ್ತು ನಾದವಾಗಿದೆ ಇದರಿಂದ ನೀನು ವಾಯುವಿನ ತರ ತಿವ್ರಗಾಮಿ ಮತ್ತು ನಿನ್ನ ಶ್ರವಣ ಶಕ್ತಿ ಅಭೂತಪೂರ್ಣವಾಗುವುದು.
ಅಗ್ನಿ - ಶಕ್ತಿ ಮತ್ತು ಪ್ರಚಂಡವಾಗಿದೆ ,ಪವಿತ್ರವಾಗಿದೆ ,ಕ್ರೋಧವಾಗಿದೆ ಇದರಿಂದ ಸಂಚರಿಸಿ ಯಾರು ಕೂಡ ಅಪವಿತ್ರವಾಗಿರುವದಿಲ್ಲ.ಇದನ್ನ ಪ್ರತೀಕದ ರೂಪದಲ್ಲಿ ಸ್ವೀಕರಿಸು.
ನೀರು ಜೀವನವಾಗಿದೆ ,ನಿರ್ಮಲವಾಗಿದೆ, ಪ್ರಶಾಂತವಾಗಿದೆ. ನೀರು ಅನಶ್ವರವಾಗಿದೆ ಇದನ್ನು ಪ್ರತೀಕವಾಗಿ ಸ್ವೀಕರಿಸಿ ನೀನು ಜೀವನ ರಕ್ಷಕನಾಗು 
ಆಕಾಶದ- ಆಳವು ಜ್ನ್ಯಾನದ ರೀತಿಯಲ್ಲಿ ಅನಂತವಾಗಿದೆ ,ಬ್ರಹ್ಮನ ತರ ವಿಶಾಲವಾಗಿದೆ ,ಶೂನ್ಯವಾಗಿದ್ದರು ಸಹ ಸಕಲ ಉತ್ಪತ್ತಿಗೆ ಕಾರಣವಾಗಿದೆ.ಈ ಗುಣಗಳನ್ನು ಮಹತ್ವವಾಗಿ ಪರಿಗಣಿಸಿ ಅದರಂತೆ ನೀನು ಬಣ್ಣ ಮತ್ತು ಆಕಾರದ ಬಂಧನಗಳಿಂದ ಮುಕ್ತನಾಗು.
ಹೀಗೆ ತಾನು ತನ್ನ ಯೋಗಶಕ್ತಿಯ ಮೂಲಕ ವಿಭಕ್ತನಾಗಿ ಪಂಚಭೂತಗಳಿಂದ ಒಂದೊಂದು ಶಕ್ತಿಯನ್ನ ಪಡೆದು ಶಕ್ತಿಮಾನವನಾಗಿ ಬಂದು ನಮ್ಮ ಮುಂದೆ ನಿಲ್ಲುತ್ತಾನೆ.





ಇನ್ನೂ ಶಕ್ತಿಮಾನದೂ ಒಂದು ತೂಕವಾದರೆ ಅದರ ಶೀರ್ಷಿಕೆ ಗೀತೆಯ ತೂಕ ಇನ್ನೊಂದ ಕಡೆಗೆ.ನನಗಂತೂ ಶಕ್ತಿಮಾನಗಿಂತ ಈ ಹಾಡೇ ಬಲು ಅಚ್ಚುಮೆಚ್ಚು ಹಾಡಿನ ಒಂದೊಂದು ಸಾಲುಗಳು ಸಹ ಅದ್ಬುತ .ಬನ್ನಿ ಹಾಡಿನ ಅರ್ಥವನ್ನ ನೋಡೋಣ .
ಹಾಡಿನ ಮೊದಲನೇ ಚರಣದಲ್ಲಿ ಹೀಗಿದೆ 
अदभुत अदम्य साहस की परिभाषा है
ये मिटती मानवता की आशा है
ये श्रृष्टि की शक्ति का वरदान है
ये अवतार नहीं है ये इंसान है
ಅರ್ಥ -ಅದ್ಬುತ ಅದಮ್ಯ ಸಾಹಸದ ಮೂರ್ತಿಯಾಗಿದ್ದಾನೆ,ನಶಿಸಿಹೋಗುತ್ತಿರುವ ಮಾನವಿತೆಯ ಆಶಾಕಿರಣವಾಗಿದ್ದಾನೆ,ಇದು ಸ್ರಷ್ಟಿಯ ಶಕ್ತಿಯ ವರದಾನವಾಗಿದೆ ,ಇದು ಯಾವದೇ ಅವತಾರವಲ್ಲ ಸಾಮಾನ್ಯ ಮನುಷ್ಯನಾಗಿದ್ದಾನೆ.

ಎರಡನೇ ಚರಣದಲ್ಲಿ ಹೀಗಿದೆ
ये आत्मशक्ति है
दुनिया बदल सकती है
फूलों में ढल सकती है
शोलों सी जल सकती है
होता है जब आदमी को
अपना ज्ञान.. कहलाया वो शक्तिमान
ಇದು ಆತ್ಮಶಕ್ತಿಯಾಗಿದೆ,ಜಗತ್ತನ್ನು ಬದಲಾಯಿಸಬಹುದು,ಹೂವಿನಲ್ಲಿ ಒಂದಾಗಬಹುದು, ಬೆಂಕಿಯಂತೆ ಧಗ ಧಗಿಸಬಹುದು,ಯಾವಾಗ ಮನುಷ್ಯನಿಗೆ ತನ್ನ ಜ್ನ್ಯಾನದ ಪರಿಚಯವಾಗತ್ತೋ ಆಗ ಆತ ಶಕ್ತಿಮಾನ್ ಎನಿಸಿಕೊಳ್ತಾನೆ.

ಶಕ್ತಿಮಾನ್ ಶಕ್ತಿಗಳನ್ನ ಪಡೆದುಕೊಂಡ ರೀತಿ ,ಶೀರ್ಷಿಕೆಯ ಹಾಡು ಮತ್ತು ಒಂದಿಷ್ಟು ಸರಣಿಗಳನ್ನು ನೋಡಿದಾಗ ಸ್ಪಷ್ಟವಾಗಿ ಅರ್ಥವಾಗತ್ತೆ ನಿರ್ದೇಶಕ ಯಾವುದನ್ನು ಹೇಳಲು ಹೊರಟಿದ್ದಾನೆ ಅಂತ.ಈ ಕಲಿಯುಗದ ಅಂಧಕಾರದಲ್ಲಿ ಬೇಕಾಗಿರುವದು ಸತ್ಯದ ಬೆಳಕು ಅದು ಕೇವಲ ನಮ್ಮಿಂದ ಮತ್ತು ಆಧ್ಯಾತ್ಮದ ಚಿಂತನೆಯಿಂದ ಮಾತ್ರ ಸಾಧ್ಯ.ಶೀರ್ಷಿಕೆಯ ಗೀತೆಯ ಒಟ್ಟು ಸಾರಾಂಶ ಶಕ್ತಿಮಾನ್ ಯಾವದೇ ಅವತಾರ ಪುರಷನಲ್ಲ ಸಾಮಾನ್ಯ ಮನುಷ್ಯ ,ಸಕಲ ಶಕ್ತಿಯು ಕೂಡ ಮನುಷ್ಯನ ಅಂತರಾಳದಲ್ಲಿ ಅಡಗಿ ಕೂತಿದೆ ಅದನ್ನ ಕಂಡುಕೊಳ್ಳುವ ಪ್ರಯತ್ನವನ್ನ ಮಾಡಬೇಕು,ಅದರಲ್ಲಿ ಸಫಲನಾದಾಗ ಮನುಷ್ಯ ಶಕ್ತಿಮಾನವನಾಗುತ್ತಾನೆ. ಹೀಗೆ ಲೋಕ ಕಲ್ಯಾಣಕ್ಕಾಗಿ ಶಕ್ತಿಗಳನ್ನ ಗಳಿಸಿಕೊಂಡ ಯೋಗಿಯೂ ಜಗತ್ತನ್ನೇ ಆಳಬಹುದು. ಒಂದು ಸೂಪರ್ ಹೀರೊನ ಕಥೆಯನ್ನು ಹೆಣೆಯಬೇಕಾದ್ರು  ಸಹ ಇಷ್ಟೊಂದು ಅಚ್ಚುಕಟ್ಟಾಗಿ ,ವಾಸ್ತವಕ್ಕೆ ಹತ್ತಿರವಾಗಿ ತಯಾರಿಸುವುದಕ್ಕೆ ಸಾಧ್ಯವಿರುವದು ಭಾರತಕ್ಕೆ ಮಾತ್ರ.ಭಾರತದ ಶಕ್ತಿಯೇ ಆಧ್ಯಾತ್ಮ .ಇದನ್ನೆಲ್ಲ ನೋಡಿದ ಮೇಲೆ ನನಗೆ ಉತ್ತರವಂತೂ ದೊರೆತಿತ್ತು ಜೊತೆಗೆ ಅರ್ಥವಾಗಿದ್ದು ಎರಡು ವಿಚಾರ ಮೊದಲನೆಯದು ಶಕ್ತಿಮಾನ್ ಕೂಡ ಕೋಮುವಾದಿಯೇ😜.ಎರಡನೆಯದು ಕರೋನ ಎಂಬ ಅಂಧಕಾರದಿಂದ ಈ ದೇಶವನ್ನ ರಕ್ಷಿಸುತ್ತಿರುವ ನಮ್ಮ ಮೋದಿ ಕೂಡ ಶಕ್ತಿಮಾನ್.


Pavan Hebbare 
Mundgod








Wednesday, September 25, 2019

ಮುಂಡಗೋಡಿನ ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ನೆನಪುಗಳ ಮಳೆ

ಮೊನ್ನೆ ಸಂಜೆ ಗ್ರೂಪ್ಪಿನಲ್ಲಿ ಗೆಳೆಯ Pramod ಈ ಫೋಟೋವನ್ನ ಹಾಕಿದ್ದ, ಇದನ್ನ ನೋಡುತ್ತಿದ್ದಂತಲೆ ಭರ್ತಿ ಮಳೆಗಾಲದ ಹೊತ್ತಲಿ ಮೋಡದ ಮರೆಯಿಂದ ಇಣುಕಿದ ಎಳೆಯ ಸೂರ್ಯನ ಕಿರಣಗಳಂತೆ ,ಮನಸ್ಸಿನ ಮರೆಯಿಂದ ಹೈಸ್ಕೂಲಿನ ನೆನಪುಗಳು ಇಣುಕಲಾರಂಭಿಸದವು. ವ್ಹಾ..! ಈ ಮನಸ್ಸೇ ಒಂತರ ವಿಚಿತ್ರ ಯಾವದೋ ಒಂದು ಜಾಗ, ವಸ್ತು, ಊರು, ಬಣ್ಣ, ಬಟ್ಟೆ ,ಹಾಡು ಇನ್ನೂ ಯಾವ ಯಾವುದರಲ್ಲೊ ಸಾಗರದಾಳದಷ್ಟು ನೆನಪುಗಳನ್ನ ಬಚ್ಚಿಟ್ಟುಕೊಂಡುಬಿಟ್ಟಿರುತ್ತೆ.ನಮ್ಮ ಮುಂಡಗೋಡದ ಹೈಸ್ಕೂಲಿನ ಈ ಬ್ಯಾಚ್ ನ ನೋಡುತ್ತಿದ್ದಂತೆಯೇ ಹೈಸ್ಕೂಲಿನ ನೆನಪುಗಳೆಲ್ಲ ಒಮ್ಮೆ ಮಳೆಯಂತೆ ಸುರಿಯಲಾರಂಭಿಸಿದವು.


ಮುಂಡಗೋಡಿನ ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜು 1965 ರಿಂದ ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರದ ದಾನವನ್ನ ಮಾಡಿ ,ಬದುಕಿನ ಹಾದಿಯನ್ನು ಕಟ್ಟಿ ಕೊಟ್ಟಿದೆ.ಬೆಳಗಿನ ಸಮಯ ಕಾಲೇಜುಗಳು ನಡೆದರೆ ,11 ರ ನಂತರ ಹೈಸ್ಕೂಲಿನ ತರಗತಿಗಳು. ಸುಮಾರು ಹದಿನೈದು ವರ್ಷಗಳ ಹಿಂದೆ ಪ್ರಾಥಮಿಕ 7ನೇ ತರಗತಿಯನ್ನ ಮುಗಿಸಿ ಚಡ್ಡಿ ಬಿಟ್ಟು ಪ್ಯಾಂಟು ಹಾಕಿ ಎಂಟನೇ ತರಗತಿಯಿಂದ ಈ ಶಾಲೆಯಲ್ಲಿ ನನ್ನ ಓದು ಶುರುವಾದದ್ದು. ಒಂದು ಕ್ಲಾಸ್ ಎಂದರೆ ಅಬ್ಬಬ್ಬಾ ಎಂದರು 40 ಜನ ಆದರೆ ಇಲ್ಲಿ ಕಡಿಮೆ ಎಂದರು 350 ವಿದ್ಯಾರ್ಥಿಗಳು . A B C D ಎಂದು ನಾಲ್ಕು ವಿಭಾಗ ಮಾಡಿ ಒಂದೊಂದು ತರಗತಿಯಲ್ಲೂ ಸುಮಾರು 80 ವಿದ್ಯಾರ್ಥಿಗಳನ್ನ ಹಾಕಲಾಗಿತ್ತು.ಇದೊಂತರ ಹಕ್ಕಿಗಳಿಗೆ ಆಲದಮರದಂತಾಗಿತ್ತು.ತಾಲೂಕಿನ ಎಲ್ಲ ಶಾಲೆಗಳಿಂದ ವಿದ್ಯಾರ್ಥಿಗಳು ಬಂದು ಸೇರೋದು ಇಲ್ಲಿಯೇ ಅಲ್ವಾ. ಇದ್ದ ಇಂತಹ ಸ್ಥಿತಿಯಲ್ಲಿ , ಮನೆಯ ಆರ್ಥಿಕ ಪರಿಸ್ಥಿತಿಗೊ ಇನ್ನೊಂದು ಕಾರಣಕೋ ಶಾಲೆ ಬಿಟ್ಟ ವಿದ್ಯಾರ್ಥಿಗಳಿಗಂತು ಲೆಕ್ಕವಿಲ್ಲ.ಹಲವರ ಶಿಕ್ಷಣ ಪ್ರಾಥಮಿಕ ಹಂತದಲ್ಲೇ ಕೊನೆಯಾದರೆ , ಇನ್ನು ಹಲವರದ್ದು ಹೈಸ್ಕೂಲು. ಮುಂಡಗೋಡಿನ ಬಹುಪಾಲು ವಿದ್ಯಾರ್ಥಿಗಳ ಶಿಕ್ಷಣ ಕಾಲೇಜು ಹಂತದಲ್ಲೇ ಕೊನೆಯಾಗಿಬಿಡುತ್ತೆ ಎಂಬುದು ಮುಂಡಗೋಡಿನ ದುರ್ದೈವವೇ ಸರಿ. ಅಂತೂ ಶತಮಾನಗಳಿಂದ ಪ್ರತಿ ವರ್ಷವೂ, ಹೊಸದಾದ ತನ್ನದೇ ಕಥೆಗಳನ್ನ ,ನೆನಪುಗಳನ್ನ, ಪ್ರೀತಿಯನ್ನ, ತನ್ನ ಒಡಲಲ್ಲಿ ಬಚ್ಚಿಟ್ಟುಕೊಳ್ಳುತ್ತ ಸಾಗಿದೆ ನಮ್ಮ ಈ ಸರಕಾರಿ ಪದವಿ ಪೂರ್ವ ಕಾಲೇಜು.
ಒಂದು ಶಾಲೆ ,ಅಲ್ಲಿನ ಶಿಕ್ಷಕರು ಒಂದೇ ಆಗಿದ್ದರು ಕೂಡ ಪ್ರತಿ ವರ್ಷ ಬರುವ ಹೊಸ ವಿದ್ಯಾರ್ಥಿಗಳೊಂದಿಗೆ ಅಲ್ಲಿ ಹೊಸ ಅನುಭವ ಮತ್ತು ಪ್ರತಿ ಭಾರಿಯು ಹೊಸ ಕಥೆಗಳೇ ಶುರುವಾಗಿರತ್ತೆ ಕಾರಣ ಸಮಯ ಬದಲಾಗಿರತ್ತೆ.ಅಂತೆಯೇ ನಮ್ಮದು ಒಂದು ಶಾಲೆ ಒಂದಿಷ್ಟು ನೆನಪಿನ ಮಡಿಕೆಗಳು ಜೀವನದುದ್ದಕ್ಕೂ ಮರೆಯಲಾರೆ.
ಒಂದೇ ಬೆಂಚಿನಲ್ಲಿ ಮೂರು ಜನ ಕೂತು ಜಾಗಕ್ಕೆ ಜಗಳವಾಡುವದು, ಬೆಳಗ್ಗೆ ಬಂದ ಕೂಡಲೇ ನಮ್ಮ ಬೆಂಚನ್ನ ಹುಡಕಾಡಿ ತಂದು ಹೊಂದಿಸಿಕೊಳ್ಳುವದೇ ಆ ದಿನದ ನಮ್ಮ ದೊಡ್ಡ ಸಾಧನೆ. ಯಾಕಂದ್ರೆ ಬೆಳಗ್ಗೆ ನಡೆಯುವ ಕಾಲೇಜಿನ ಸಮಯದಲ್ಲಿ ನಮ್ಮ ಬೆಂಚುಗಳು ಯಾವ ಯಾವದೇ ಕೊಠಡಿಗಳಿಗೆ ರವಾನೆಯಾಗಿ ಬಿಡುತ್ತಿದ್ದವು.ದಿನದ ಮೊದಲ ಕ್ಲಾಸು ,ಕ್ಲಾಸ್ ಟೀಚರ್ ದೇ ಎನ್ನುವ ಅಲಿಖಿತ ನಿಯಮದ ಕಾರಣ ನಮ್ಮ ಕ್ಲಾಸು ವಿಜ್ನ್ಯಾನದ ಕ್ಲಾಸು.ಮೊದಲ ಪಾಠವೇ ಅಯಸ್ಕಾಂತ 😆. ನಮ್ಮ ವಿಜ್ಯ್ನಾನದ ಸರ್ AL ನಾಯ್ಕ್ ಅವರಿಂದ ಏನೂ ಕಲಿತೇನೋ ಬಿಟ್ಟನೋ ಗೊತ್ತಿಲ್ಲ ಆದ್ರೆ ಅವರು ಅವಾಗ ಅವಾಗ ಹೇಳಿದ "ಮನುಷ್ಯನಿಗೆ ಒಂದು ಸಮಯದಲ್ಲಿ ಬಾಲ ಇತ್ತಂತೆ ,ಕಾಲ ಕ್ರಮೇಣ ಅದರ ಅವಶ್ಯಕತೆ ಕಡಿಮೆ ಯಾಗಿ ಅದು ನಶಿಸಿ ಹೋಯಿತಂತೆ .ಈಗ ಮನುಷ್ಯನ ತಲೆಯಲ್ಲಿ ಮೆದುಳು ಅನ್ನೋದ್ ಒಂದಿದೆ ಅದನ್ನ ಸ್ವಲ್ಪನಾದ್ರು ಉಪಯೋಗಿಸಿ ಇಲ್ಲಾಂದ್ರೆ ಮುಂದೆ ಹುಟ್ಟುವ ಮಕ್ಕಳಲ್ಲಿ ಮೆದುಳೆ ಇಲ್ಲದಂತಾಗೋದು" ಈ ಮಾತು ಇದುವರೆಗೂ ಮರೆತಿಲ್ಲ. ಇದೆ ಸರ್ ನಮಗೆ ಬೈದು ಬೈದು ಕ್ಲಾಸಿನ ನಂತರ ಶಾಲೆಯ ಒಳ ಮೈದಾನದಲ್ಲಿ ನೆಟ್ಟ ಸಸಿಗಳಿಗೆ ನೀರು ಹಾಕಿಸ್ತಾ ಇದ್ರು ಅವಾಗೇನೋ ಬೈತಾ ಬೈತಾನೆ ನೀರು ಹಾಕ್ತಿದ್ವಿ ಆದ್ರೆ ಇಂದೂ ಆ ಸಸಿಗಳು ದೊಡ್ಡದಾಗಿದ್ದನ್ನ ನೋಡಿದ್ರೆ ಏನೋ ಒಂದು ಸಂತಸ ಮನಸ್ಸಿಗೆ. ಮೊದಲ ತರಗತಿ ಮುಗಿಯುತ್ತಿದ್ದಂತೆ ಹಿಂದೆ ಮೈದಾನದಲ್ಲಿ ಕ್ರಿಕೆಟ್ ಆಟಗಳು ಶುರುವಾದಾಗ ನಮಗದು ಸಿಗುವ ಫ್ರೀ ಮನೋರಂಜನೆಗೆ ಸಾಟಿ ಯಾವದು..? ಆ ಸಮಯಕ್ಕೆ ಮಾರಾಟಕ್ಕೆ ಬರುವ ಐಸ್ ಕ್ಯಾಂಡಿ ,ನೆಲ್ಲಿಕಾಯಿ,ಸಮೋಸಾಗಳನ್ನ ಕಿಟಕಿಯಿಂದ ಕೊಂಡು ಕದ್ದುಮುಚ್ಚಿ ತಿನ್ನವ ಮಜವೇ ಬೇರೆ.ಮೊಬೈಲಿನ ಯುಗ ಆಗಿನ್ನೂ ಶುರುವಾಗುವ ಹಂತದಲ್ಲಿತ್ತು. ಚಾಲ್ತಿಯಲ್ಲಿ ಇದ್ದದ್ದು ಪ್ರೇಮ ಪತ್ರಗಳೆ.ಯಾರದ್ದೋ ಕವನ ಯಾರದ್ದೋ ಪತ್ರ ಯಾರೋ ಬರೆಯೋರು ಯಾರೋ ಕೊಡೋದು ,ಆ ಪತ್ರ ಇನ್ನೆಲ್ಲೋ ಸೇರಿ ನಡೆಯುವ ರಾದ್ಧಾಂತ ಅಬ್ಬಾ ಒಂದ ಎರಡಾ ಕಥೆಗಳು. ಆಗತಾನೆ ಲಗ್ಗೆಯಿಟ್ಟ ಒಂದೇ ಕಂಪ್ಯೂಟರ್ ನಲ್ಲಿ ಎರಡೂ - ಮೂರು ತಿಂಗಳಿಗೊಮ್ಮೆ ನಡೆಯುವ ಒಂದು ಕ್ಲಾಸಲ್ಲಿ ಒಂದೇ ಕಂಪ್ಯೂಟರ್ ನಲ್ಲಿ ಐದೈದು ಜನ ಕೂತು ಬಣ್ಣ ಹಚ್ಚೋದರಲ್ಲಿ (MS paint) ಸಿಕ್ಕ ಖುಷಿ ಇಂದು, ಇಂದೂ ತೊಡೆಯ ಮೇಲೆ ಇಟ್ಟು ಕೂರುವ ಲ್ಯಾಪಿನಲ್ಲಿ ಸಹ ಸಿಗದು.

ಓದು ಇಲ್ಲಿನ ವಿದ್ಯಾರ್ಥಿಗಳಿಗೆ ಕಷ್ಟವೇ ಆಗಿತ್ತು,ಬಹುತೇಕ ವಿದ್ಯಾರ್ಥಿಗಳು ತಮ್ಮ ಓದಿನ ಖರ್ಚು ವ್ಯಚ್ಚಗಳನ್ನ ತಾವೇ ಭರಿಸಬೇಕಿತ್ತು,ಬೆಳಗಿನ ಪೇಪರ್ ಗಳನ್ನ ಹಾಕವ ಕೆಲಸದಿಂದ ಹಿಡಿದು ಸಂಜೆ ಹೋಟೆಲಿನಲ್ಲಿ ಮಾಡುವ,ಅನೇಕ ಅರೆಕೆಲಸಗಳ ಜೊತೆ ಬೇಸಿಗೆ ರಜೆಗಳಲ್ಲಿ ದಿನದ ಕೂಲಿಯಾಗಿ ದುಡಿದು ತಮ್ಮ ಓದಿನ ಅಗತ್ಯ ದುಡ್ಡನ್ನು ಭರಿಸಿಕೊಳ್ಳಬೇಕಿತ್ತು. ಎಷ್ಟೆಲ್ಲ ಕಷ್ಟಗಳಿದ್ದರು ನಮ್ಮಂತ ಅದೆಷ್ಟೋ ಉಡಾಳರನ್ನ ,ದಡ್ಡರನ್ನ ತಿದ್ದಿ ತೀಡಿ ಪಾಸು ಮಾಡುವಂತೆ ಮಾಡಿ ಮುಂದಕ್ಕೆ ಸಾಗಿ ಹಾಕಿದ ಅಲ್ಲಿನ ಶಿಕ್ಷಕ ಬಳಗಕ್ಕೆ ಎಷ್ಟು ಕೃತಜ್ಞತೆಗಳನ್ನ ಸಲ್ಲಿಸಿದರು ಕಡಿಮೆಯೇ. ಪ್ರತಿಯೊಬ್ಬ ಗುರುಗಳದ್ದು ತನ್ನದೇ ಆದ ಪಾಠ,ಮಾತು ಪ್ರೀತಿ ಹೀಗೆ ವಿಭಿನ್ನ ಶೈಲಿ. ಕಲ್ಯಾಣಶೆಟ್ಟಿ ಸರ್ ಅವರ ಮಾತಿನ ಧಾಟಿಯನ್ನ ನಾವು ಎಂದಾದರೂ ಮರೆಯುವದು ಸಾಧ್ಯವುಂಟಾ..? AL ನಾಯ್ಕ್ ಸರ್ ಗಾಡಿ ಓಡಿಸುವದನ್ನ ನೋಡಿ ಗುಸು ಗುಸು ನಕ್ಕಿದ್ದನ್ನ ಇನ್ನೂ ಮರೆತಿಲ್ಲ, ಭಂಡಾರಿ ಮೇಡಂ ನ ನೋಡಿದಾಗ ಅಂದಿದ್ದಷ್ಟೇ ಭಯ ಇಂದಿಗೂ ಇದೆಯೇನೋ..!ಅವರು ಕಲಿಸಿದ ಗಣಿತದ ಲೆಕ್ಕಗಳಿಗಿಂತ ಭೂಮಿಯ ಮೇಲೆ ಅಂಕಿಗಳು, ಲೆಕ್ಕಗಳು ಹೇಗೆ ಹುಟ್ಟಿಕೊಂಡವು ಎಂಬ ವಿಷಯದ ಬಗ್ಗೆ ಅವರು ಮಾಡಿದ ಮೂರ್ನಾಲ್ಕು ದಿನಗಳ ಆ ಪಾಠ ಇಂದಿಗೂ ಮರೆತಿಲ್ಲ. ವಿಠೋಬ್ ನಾಯ್ಕ್ Vithoba Nayak ಸರ್ ಅವರ ಪಾಠ ಕ್ಕಿಂತಲು ಅವರ ಪ್ರೀತಿಯಿಂದ ನಮ್ಮನ್ನ ಮುಂದಿನ ಜೀವನದ ಬಗ್ಗೆ ಭವಿಷ್ಯದ ಬಗ್ಗೆ ವಿಚಾರ ಮಾಡುವಂತೆ ಮಾಡುವ ಅವರ ಶೈಲಿಯೇ ಚೆಂದವಾಗಿತ್ತು. ಹಿಂದಿಯ ನದಾಫ್ ಸರ್ ಕಲಿಸಿದ ಹಿಂದಿಯ ಪಾಠವಂತು ನೆನಪಿಲ್ಲ, ಆದರೆ ತನ್ನ ಶರ್ಟ್ನ್ ನ ಬಿಚ್ಚಿ ರೈಲನ್ನು ನಿಲ್ಲಿಸಿ ಜನರ ಪ್ರಾಣವನ್ನ ಉಳಿಸಿದ ಆ ಪಾಠವನ್ನ ಅವರು ನಮಗೆ ಅರ್ಥಮಾಡಿಸಲು ಮಾಡಿದ ಸರ್ಕಸ್ ಇಂದು ನೆನಪಾದರೆ ನಗು ಒಮ್ಮೆ ಬಿಕ್ಕಳಿಸಿ ಬರುತ್ತೆ. ಆಟ-ಪಾಠ , ಕಲೆ ಹೀಗೆ ಎಲ್ಲ ವರ್ಗದಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಕಡಿಮೆಯೇನಲ್ಲ. ಪ್ರತಿ ವರ್ಷ SSLC ನಲ್ಲಿ ತಾಲೂಕಿನ ಒಂದೆರಡು ನಂಬರ್ ಗಳಲ್ಲಿ ಒಂದಾದರೂ ಈ ಶಾಲೆಯದ್ದು ಇದ್ದೆ ಇರತ್ತೆ.ಇನ್ನೂ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲೂ ಸಾಧನೆಗೈದ ಕ್ರೀಡಾಪಟುಗಳು ಸಂಖ್ಯೆಯೂ ಕೂಡ ದೊಡ್ಡದಿದೆ. ಪ್ರತಿಭಾ ಕಾರಂಜಿಯಿಂದ ಗುರುತಿಸಿಕೊಂಡ ಪ್ರತಿಭೆಗಳಿಗೇನೂ ಕೊರತೆಯಿಲ್ಲ.

ಇಷ್ಟೆಲ್ಲ ನೋವು ನಲಿವುಗಳ ಮಧ್ಯ ಹೈಸ್ಕೊಲಿನ ಆ ಮೂರು ವರ್ಷಗಳನ್ನ ಸಮಯ ನಮ್ಮ ಕೈಯಿಂದ ಕಿತ್ತುಕೊಂಡಿದ್ದು ಗೊತ್ತೇ ಆಗಲಿಲ್ಲ,ಅಂತೂ ಕೊನೆಯ ದಿನ ವಿದಾಯ ಹೇಳುವ ದಿನವೂ ಕೂಡ ನಮ್ಮ ಚೇಷ್ಟೆ ,ತುಂಟಾಟ ನಡೆದೇ ಇತ್ತು .ಕಾಲೇಜಿನ ಆಚೆ ಕಟ್ಟಿದ ಹೊಸ ಕಟ್ಟಡಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭ ನಡೆದು ಒಂದಿಷ್ಟು ಜನ ಹುಡಗ ಹುಡಗಿಯರ ಭಾಷಣದ ಮಧ್ಯೆ ಸುರಿದ ಅವರ ಕಣ್ಣೀರು ಕಂಡು ಗುಸು ಗುಸು ನಕ್ಕ ನಾವು ಇನ್ನೂ ತುಂಟಾಟದಲ್ಲೇ ಮೈ ಮರೆತಿದ್ದೆವು.ಆಫೀಸ್ ರೂಮಿನಲ್ಲಿ ತಮಗೆ ಅಂತ ತಂದುಕೊಂಡ ವಡೆಗಳನ್ನ ಯಾರಿಗೂ ತಿಳಿಯದಂತೆ ಆಫೀಸಿನ ಒಳಹೊಕ್ಕು ನಾನು ನನ್ನ ಮಿತ್ರರು ಕದ್ದು ತಿಂದದ್ದು ಜೀವನಪೂರ್ತಿ ಒಂದು ಮರೆಯಲಾಗದ ನೆನಪು. ಎಲ್ಲವನ್ನೂ ಮುಗಿಸಿ ಮನೆಗೆ ಹೋಗುವ ವರೆಗೂ ಮಿತ್ರರ ಜೊತೆ ನಗುತ್ತಲೇ ಇದ್ದ ನಾನು, ಒಮ್ಮೆ ಮನೆ ಮುಟ್ಟಿದ ಮೇಲೆ ನಾಳೆಯಿಂದ ನನ್ನ ಶಾಲೆ ಇಲ್ಲ ಮುಗಿದೆ ಹೋಯಿತ ಅಂತ ನೆನೆದು ಮನಸ್ಸು ಭಾರವಾಗಿ ಸುಮ್ಮನೆ ಒಂದೆರಡು ಘಂಟೆ ಮಲಗಿಬಿಟ್ಟಿದ್ದೆ. ಈಗೇನೂ ನಮ್ಮದೇ ಜೊತೆ ಕಲೆತ ಮಿತ್ರರು ಅಲ್ಲಿ ಶಿಕ್ಷಕರಾಗಿ ಸೇರಿಕೊಂಡಿದ್ದಾರೆ.ಕೆಲವೇ ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದ ನೆನಪು ಈಗಿರುವ ಹಳೆಯ ಕಟ್ಟಡವನ್ನು ಪೂರ್ತಿಯಾಗಿ ಕೆಡವಲು ಆದೇಶವನ್ನ ನೀಡಿದೆಯಂತೆ ,ಒಮ್ಮೆ ಅದನ್ನ ನೆಲಸಮಗೊಳಿಸುವ ಮೊದಲು ಮತ್ತೊಮ್ಮೆ ನನ್ನ ಮಿತ್ರರ ಜೊತೆಗೂಡಿ ಒಂದು ಸುತ್ತು ಶಾಲೆಯನ್ನ ಸುತ್ತುವ ಆಸೆಯಷ್ಟೇ..!
ಪವನ್ ಹೆಬ್ಬಾರೆ