ಶಾಲೆ ,ಕಾಲೇಜು ಮುಂದೆ ಡಿಗ್ರಿಯನ್ನ ಪಡೆದು ಹೊರಡುವ ಕೊನೇಯ ದಿನ ಬಹುತೇಕರು ನಾವೆಲ್ಲ ಹೀಗೆ ಹೇಳಿ ಹೊರಟಿರ್ತೀವಿ,ಮತ್ತೆ ಸಿಗೋಣ ಸಿಗ್ತಾ ಇರೋಣ , ನಿಜಕ್ಕೂ ನಮ್ಮ ಬದುಕಿನಲ್ಲಿ ಇದು ಸಾಧ್ಯವಾಗತ್ತ..? ಖಂಡಿತವಾಗ್ಲೂ ಎಲ್ಲರ ಬದುಕಿನಲ್ಲಿ ಅಗಲಿಕ್ಕಿಲ್ಲ ,SSLC ಯ ನಂತರ ಮುಂದೇನು..? ಎಂಬ ಅಲೋಚನೆಯಲ್ಲೇ ಓಡಲು ಶುರುವಾದ ನಮ್ಮ ಬದುಕು ಮುಂದೆ ಪಿಯುಸಿ ಡಿಗ್ರಿ ಮುಗಿದು ಆಚೆ ಬೀಳುವ ಮೊದಲೇ ಒಂದರ ಹಿಂದೊಂದರಂತೆ ಜವಾಬ್ದಾರಿಯ ನೊಗ ಹೆಗಲ ಮೇಲೆ ಬಿದ್ದಿರುತ್ತೆ ,ಇವುಗಳೆಲ್ಲ ಮಧ್ಯೆ ಮಿತ್ರರ ನೆನಪಾಗೋದು ಬಿಡಿ ಜೊತೆಗಿದ್ದ ಮಿತ್ರರೇ ದೂರವಾಗಿರುತ್ತಾರೆ. ಅವಾಗ ಅವಾಗ ಯಾರೋ ಹಳೆಯ ಮಿತ್ರನೊಬ್ಬ ಸಿಕ್ಕಾಗ ,ಶಾಲೆ ಕಾಲೇಜಿನ ದಿನಗಳಲ್ಲಿ ನಮ್ಮ ಆತ್ಮೀಯ ಮಿತ್ರರ ಬಗ್ಗೆ ಕೇಳ್ತಾ ಇರ್ತೀವಿ, ಈಗ ಅವನೆಲ್ಲಿ ಇದ್ದಾನೆ ..? ಎನ್ ಮಾಡ್ತಾ ಇದ್ದಾನೆ ..? ಅವಳು ಹೇಗಿದ್ದಾಳೆ ಎಲ್ಲಿದ್ದಾಳೆ..? ಹಾಗೆ ಮಾತು ಒಂದಿಷ್ಟು ಜೊತೆಗೆ ಅಂದಿನ ನೆನಪುಗಳ ಬಗ್ಗೆ ಮೆಲಕು ಹಾಕಿರ್ತೀವಿ, ಅದೊಂದು ಹತ್ತಿಪ್ಪತ್ತು ನಿಮಿಷಗಳ ಕಾಲದ ಮಿತ್ರನೊಡನೆ ಮಾತು ಮುಗಿಸಿ ಹೊರಡುವುದರೊಳಗೆ ಮನಸ್ಸು ನಮಗಿರಿವಿಲ್ಲದೆ ಪುಳಕಿತವಾಗಿ ,ಆ ದಿನವಿಡೀ ಅಥವಾ ಒಂದಿಷ್ಟು ಘಂಟೆಯಗಳ ವರೇಗಾದರು ನೆನಪಿನ ಉಯ್ಯಾಲೆಯಲ್ಲಿ ಹರ್ಷದಿಂದ ತೇಲಾಡಿರುತ್ತೆ,ಮತ್ತೊಮ್ಮೆ ಅವರನ್ನೆಲ್ಲ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಲ್ಲವಾ ಅಂತ ಆ ಕ್ಷಣಕ್ಕೆ ನಮಗನಿಸುರತ್ತೆ. ಖಂಡಿತ ಇದೆಲ್ಲವೂ ನಡಿದಿರುತ್ತೆ ನಾವು ಗಮನಿಸಿರುವುದಿಲ್ಲ ಅಷ್ಟೇ. ಸುಮ್ಮನೆ ಯೋಚಿಸಿ ನೋಡಿ ನಿಮ್ಮ ಕಾಲೇಜು ಮುಗಿದು ಕನಿಷ್ಟ 30 ವರ್ಷವಾಗಿದೆ ನಿಮ್ಮ ಮಿತ್ರರ ಚೆಹರೆಗಳು ದೂರದ ಮಾತು ಅವರ ಹೆಸರುಗಳೇ ನಿಮಗೆ ಮರೆತಿರುತ್ತೆ ,ಅಂತಹ ನಿಮ್ಮೆಲ್ಲ ಗೆಳಯ /ಗೆಳತಿಯರು ಒಟ್ಟಿಗೆ ಒಂದು ಜಾಗದಲ್ಲಿ ಭೇಟಿಯಾದಾಗ ,ನಿಮ್ಮನ್ನ ಹೊಡೆದು ತಿದ್ದಿ ತೀಡಿ ನಿಮಗೆ ಬುದ್ಧಿಯನ್ನ ಹೇಳಿದ ಗುರುಗಳು ಸಹ ಅಲ್ಲಿಗೆ ಬಂದರೆ ಹೇಗಿರುತ್ತೆ ,, ವ್ಹಾ...! ಖಂಡಿತವಾಗ್ಲೂ ನಮ್ಮ ಬದುಕಿನ ಒಂದು ಅದ್ಭುತವಾದ ದಿನವಾಗಿರುತ್ತೆ..ಮೊನ್ನೆ ಡಿಸೆಂಬರ್ 13 ಕ್ಕೆ ಇಂತಹದೇ ಒಂದು ದಿನವಿಡೀ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇನೆ,ಅಲ್ಲಿನ ಸಂಭ್ರಮ ಅವರ ನಡುವಿನ ಮಾತುಗಳು ನಿಜಕ್ಕೂ ನನ್ನ ಮಿತ್ರರನ್ನೆಲ್ಲ ನೆನಪು ಮಾಡಿಸಿದ್ದು ಸುಳ್ಳಲ್ಲ.
ಅದು 1988-91 ರಲ್ಲಿ SSLC ಹಾಗೂ ಮುಂದೆ ಡಿಗ್ರಿಯವರೆಗೂ ಜೊತೆಗೆ ಕಲಿತ ಸ್ನೇಹಿತರ ಬಳಗದ ಸ್ನೇಹ ಮಿಲನ ಕಾರ್ಯಕ್ರಮ , ನಾ ಕಲೆತ ಶಾಲೆಯಲ್ಲೇ ನಾ ಹುಟ್ಟುವ ಮೊದಲೇ😜 ಆ ಶಾಲೆಯಲ್ಲಿ ಕಲಿತ ನನ್ನ ಸೀನಿಯರ್ಸಗಳು ,ಸುಮಾರು 30 ವರ್ಷಗಳ ಬಳಿಕ ಮತ್ತೆ ಭೇಟಿಯಾಗಲು ಒಂದಿಷ್ಟು ಜನ ಮಿತ್ರರು ಒಟ್ಟಾಗಿ ತಯಾರಿಯನ್ನ ನಡೆಸಿದ್ದರು, ಇರುವ ಎಲ್ಲ ಮಿತ್ರರನ್ನ ಹುಡುಕಬೇಕು, ಅವರಿವರನ್ನ ಕೇಳಬೇಕು ,ಅವರ ವಿಳಾಸ ,ನಂಬರ್ ಎಲ್ಲವನ್ನು ಕಲೆಹಾಕಬೇಕು ,ಕಲಿಸಿದ ಶಿಕ್ಷಕರನ್ನ ಹುಡುಕಬೇಕು ಕಾರ್ಯಕ್ರಮಕ್ಕೆ ಬರುವಂತೆ ಮನವೊಲಿಸಬೇಕು ,ಅವರು ಬರುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನ ಮಾಡಬೇಕು ,ಇತ್ತ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆ ,ಊಟ ತಿಂಡಿಯ ವ್ಯವಸ್ಥೆಯನ್ನ ಮಾಡಬೇಕು ಅಬ್ಬಾ..! ಒಂದು ಕಾರ್ಯಕ್ರಮದ ಹಿಂದೆ ಅದೆಷ್ಟು ತಯಾರಿಯನ್ನ ಮಾಡಬೇಕೋ ..ಬೇರೆ ಯಾವದೇ ಕಾರ್ಯಕ್ರಮ ಆಗಿದ್ದರೆ ಸಾಕಪ್ಪಾ ಸಾಕು ಅನಿಸಿಬಿಡಬಹುದು ,ಆದರೆ ತನ್ನ ಮಿತ್ರರು ಸಿಗುತ್ತಾರೆ ವಿದ್ಯೆ ಕಲಿಸಿದ ಗುರುಗಳು ಬರುತ್ತಾರೆ ಎಂದಾಗ ಮನದಲ್ಲಿ ಮೂಡುವ ಹರ್ಷವಿದೆಯಲ್ಲ ಅದು ಇವೆಲ್ಲದರ ಆಯಾಸವನ್ನ ಹಗುರಗೊಳಿಸಿ ಬಿಡುತ್ತೆ.ತನ್ನ ಹಳೆಯ ಮಿತ್ರರನ್ನೆಲ್ಲ ಭೇಟಿಯಾಗುವ ಆತುರ ಅಂದು ಯಾರು ಬರುತ್ತಾರೆ ಯಾರಿಲ್ಲ ,ಬಂದವರನ್ನ ಇವರೇ ಎಂದು ಗುರುತು ಹಿಡಿಯುವುದದಾರು ಹೇಗೆ ..? ಇವೆಲ್ಲ ಕೂತೂಹಲದ ಜೊತೆಗೆ ಮೆಲ್ಲಗೆ ಅಂದು ಬೆಳಗ್ಗೆ ಒಬ್ಬಬ್ಬರೇ ಕಾರ್ಯಕ್ರಮದ ಹಾಲಿನತ್ತ ಬರುತ್ತಿದ್ದರೆ ,ಕಾರ್ಯಕ್ರಮದ ಜವಾಬ್ದಾರಿ ಹೊತ್ತವರು ಮಾತ್ರ ಕೊಂಚ ಒತ್ತಡದಲ್ಲೆ ಪೂರ್ವಸಿದ್ಧತೆಯ ತಯಾರಿಗೆ ಅತ್ತಿಂದಿತ್ತ ಓಡಾಡುತ್ತಲೇ ಇದ್ದರು. ಮುಂಡಗೋಡಿನಲ್ಲೇ ಇದ್ದವರು ತಮ್ಮ ತಮ್ಮ ಗೆಳೆಯರ ಜೊತೆ ಗುಂಪುಗೂಡಿ ಇದ್ದರೆ ,ಪರ ಊರುಗಳಿಂದ ಬಂದವರು ಮನಸ್ಸಿನಾಳದಲ್ಲಿ ಚಿಕ್ಕದೊಂದು ಅಳುಕಿಟ್ಟುಕೊಂಡೆ ಬರುತ್ತಿದ್ದರು ,ಬಹಳ ವರ್ಷಗಳ ನಂತರ ಸಿಕ್ಕ ತನ್ನ ಮಿತ್ರರನ್ನ ಬಾಚಿ ತಬ್ಬಿಕೊಂಡು ಮಾತನಾಡಿಸುವುದನ್ನು ನೋಡುವದೇ ಒಂತರ ಮಜವಾಗಿತ್ತು ,ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿರುವಾಗ ತುಂಬಾ ಬದಲಾಗಿ ಬಿಟ್ಟಿದ್ದಿಯ ,ನನ್ನ ಗುರುತು ಹಿಡಿಯಲಿಲ್ಲವ ,ಇವರ್ಯಾರು ಅಂತ ಗೊತ್ತಾಗಿಲ್ಲ ಎಂಬ ಮಾತುಗಳು ಸಹಜವಾಗಿಯೇ ಅಲ್ಲಲ್ಲಿ ಕೇಳಲು ಸಿಗುತ್ತಿತ್ತು.ಸಾಮಾನ್ಯದಂತೆಯೇ ಶುರುವಾದ ಉದ್ಘಾಟನ ಹಾಗೂ ಇನ್ನಿತರ ಕಾರ್ಯಕ್ರಮಗಳ ನಂತರ ನಡೆದ ಸ್ವ-ಪರಿಚಯ ಕಾರ್ಯಕ್ರಮದಿಂದ ಎಲ್ಲರ ಮೊಗದಲ್ಲಿ ನಗು ಅರಳಲಾರಂಭಿಸಿತು ,ಅಲ್ಲಿಂದ ಶುರುವಾದ ಪರಸ್ಪರರ ಮಾತುಗಳು ಅಲ್ಲಿಂದ ಹೊರಡುವವರೆಗೂ ನಿಲ್ಲಲೇ ಇಲ್ಲ ,ಅದ್ಯಾವ ಪರಿ ಮಾತುಗಳು ಆಮೇಲೆ ಶುರುವಾದವೆಂದರೆ ಕಾರ್ಯಕ್ರಮದ ನೀರೂಪಕಿ ಬಂದು ಯಾರು ಮಾತಡಬ್ಯಾಡ್ರಿ ಸ್ವಲ್ಪ ಸುಮ್ಮನ ಕೂತ್ಕೋರಿ - silence please ಅಂದಾಗ ,ನಾನಂತೂ ಗಕ್ಕನೆ ನಕ್ಕುಬಿಟ್ಟೆ , ಅಲ್ಲೇ ಇದ್ದ ಗುರುಗಳ ಹತ್ತಿರ ಮೈಕು ಕೊಟ್ಟು - ಇದೇನು ಕ್ಲಾಸ್ ರೂಮಾ ಅಥವಾ ಸಂತೆ ಮಾರ್ಕೆಟ್ಟಾ ಅಂತ ಅವರೆಲ್ಲರನ್ನ ಒಮ್ಮೆ ಬೈಸಿಬಿಡಬೇಕು ಅಂತ ಆ ಕ್ಷಣಕ್ಕೆ ಅನ್ನಿಸಿದ್ದಂತೂ ಸುಳ್ಳಲ್ಲ. ಬೆಳಗಿನ ಉದ್ಘಾಟನಾ ಕಾರ್ಯಕ್ರಮದ ನಂತರ ಮಧ್ಯ ಇದ್ದ ಚಿಕ್ಕ ಬಿಡುವಿನಲ್ಲಿ ಒಂದಿಷ್ಟು ಜನ ಗುಂಪು ಗುಂಪಾಗಿ ಹಳೆಯ ಮಿತ್ರರ ಜೊತೆ ಮಾತು ಕಥೆಯಲ್ಲಿ ತೊಡಗಿದ್ರೆ ಇತ್ತ ಹೊರಗಡೆ ಬಂದವರೆಲ್ಲ ಮಿತ್ರರ ಜೊತೆಗೂಡಿ ಚಿನ್ನಿ ದಾಂಡು ,ಬುಗುರಿ ,ಗೋಲಿ ಆಟಗಳನ್ನ ಹೆಣ್ಣು ಮಕ್ಕಳು ಕುಂಟಪ್ಪಿಲ್ಲೇ ಆಟ ಆಡುತ್ತಿರುವುದನ್ನ ನೋಡಿದರೆ ಆ ಕಾರ್ಯಕ್ರಮದ ಸಭಾಂಗಣ ಥೇಟ್ ಶಾಲೆಯಂಗಳದಂತೆ ಕಾಣುತಿತ್ತು , ಅಷ್ಟರಲ್ಲೇ ದೂರದ ಪ್ರಯಾಣದಿಂದ ಶಿಕ್ಷಕರು ಒಬ್ಬೊಬ್ಬರೇ ಬರಲಾರಂಭಿಸದರು ,ತಮಗೆ ವಿದ್ಯೆ ಕಲಿಸಿದ ಗುರುಗಳು ಬರುತ್ತಿದ್ದಂತೆ ಎಲ್ಲರೂ ಒಡಿ ಹೋಗಿ ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತ ಮಾತಾನಾಡಿಸುತ್ತಿದ್ದರು.
ಗುರುವಂದನಾ ಕಾರ್ಯಕ್ರಮ
ಬಹುತೇಕ ಬಾರಿ ಹೀಗಾಗಿರತ್ತೆ ನಮಗೆ ಪಾಠ ಹೇಳುತ್ತಿದ್ದ ಶಿಕ್ಷಕರು ಅಕಸ್ಮಾತ್ ಎದುರಿಗೆ ಬರುವಾಗ ಮನಸ್ಸು ಕಳ್ಳತನಕ್ಕೆ ಬಿದ್ದು ಅಲ್ಲಿಂದ ಬೇರೆ ದಾರಿ ಹಿಡಿದು ಓಡಿಸಿಬಿಟ್ಟಿರುತ್ತೆ ,ಅನೇಕ ಬಾರಿ ಸ್ವತಃ ನಾನೇ ಈ ತರಹ ನೋಡಿದರು ನೋಡದಂತೆ ನಡೆದುಬಿಟ್ಟಿದ್ದೇನೆ ,ಹಾಗೆ ಮುಖ ತಿರುವಿ ಬಂದಮೇಲೆ ಯೋಚಿಸಿದ್ದೇನೇ ನಾನ್ಯಾಕೆ ಹೀಗೆ ಬಂದೇನಂತ.ಅಸಲಿಗೆ ವಿಷಯವೇನೆಂದರೆ ಮಾತನಾಡಿದರೆ ಏನಂತ ಮಾತನಾಡೋದು..? ಅವರಿಗೆ ನಾನು ನೆನಪಿರಬಹುದ..? ಕೇಳಿದರೆ ನನ್ನ ಬಗ್ಗೆ ಏನಂತ ಹೇಳೋದು .? ಹೀಗೆ ರಸ್ತೆಯಲ್ಲಿ ಮಾತನಾಡೋದು ಸರಿನ ..ಈ ತರಹದ ಅನೇಕ ಪ್ರಶ್ನೆಗಳ ಕಾರಣ ಮಾತನಾಡಿಸಲು ಹಿಂದೇಟು ಹಾಕಿರುತ್ತೇವೆ..ಆದರೆ ಇಲ್ಲಿ ಹಾಗಾಗಲಿಲ್ಲ ವಾತಾವರಣ ಪೂರಕವಾಗಿತ್ತು ,ಮಿತ್ರರನ್ನ ಗುರುಗಳನ್ನ ಮಾತನಾಡಿಸಲೆಂದೇ ಎಲ್ಲರೂ ಸಹ ಬಂದದ್ದು . ಹೈಸ್ಕೂಲ್ ನಿಂದ ಕಾಲೇಜಿನ ತನಕದ ಎಲ್ಲ ಶಿಕ್ಷಕರು ಸಹ ಬಂದಿದ್ದರು.ಪ್ರತಿಯೊಬ್ಬರು ಸಹ ಅತ್ಯಂತ ಪ್ರೀತಿಯಿಂದ ತಮ್ಮ ಗುರುಗಳನ್ನ ಮಾತನಾಡಿಸುತ್ತ ನಮಸ್ಕರಿಸುತ್ತ ,ಅವರಿಗೆ ಗುರುತು ಸಿಗದಿದ್ದರೂ ಸಹ ತಾವೇ ತಮ್ಮ ಪರಿಚಯವನ್ನು ಹೇಳಿಕೊಳ್ಳುತ್ತಿರುವುದನ್ನು ನೋಡಿದಾಗ ನನಗನಿಸಿದ್ದು ನೆನಪಿನ ಉಯ್ಯಾಲೆ ಅತಿ ಸುಂದರವಾಗಿ ತೂಗುತ್ತಿದೆಯಂತ .ಭಾರತೀಯ ಪರಂಪರೆಯಲ್ಲಿ ಗುರುವಿಗೆ ಕೊಟ್ಟ ಸ್ಥಾನವೇ ಅಂತದ್ದು, ಕೇವಲ ವಿದ್ಯೆಯನ್ನ ಮಾತ್ರವಲ್ಲದೆ ,ವ್ಯಕ್ತಿತ್ವವನ್ನ ಘಟ್ಟಿಗೊಳಿಸುತ್ತ ,ಬದುಕಿನ ಮೌಲ್ಯಗಳನ್ನ ತಿಳಿಸಿ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಮಾಡುತ್ತ ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ಬೆಳೆಯುವಂತೆ ಪ್ರೇರೇಪಿಸುತ್ತಿದ್ದರು ,ಅಲ್ಲಿ ಕೇವಲ ಶಿಕ್ಷಕನಾಗದೆ ಗುರು-ಶಿಷ್ಯರಾಗುತ್ತಿದ್ದರು. ಸರ್ ಅಂತ ಹೇಳುತ್ತಾ , ಯಾವಾಗ ಪರಕೀಯರ ಶಿಕ್ಷಣ ಪದ್ಧತಿಯನ್ನ ಅಳವಡಿಸುವತ್ತ ಸಾಗಿತೋ ಅಂದಿನಿಂದಲೇ ಶಿಕ್ಷಕ ಕೇವಲ ಶಿಕ್ಷಕನಾಗಿ ಬದಲಾಗುತ್ತಾ, ಗುರು ಶಿಷ್ಯರ ನಡುವಿನ ಆ ಭಾಂಧ್ಯವ್ಯದ ಅಂತರ ಬೆಳೆಯುತ್ತ ಸಾಗಿತ ಎಂದೆನಿಸುತ್ತದೆ,ಆದರೆ ಇಲ್ಲಿ ಗುರು ಶಿಷ್ಯರ ಬಾಂಧವ್ಯವಿತ್ತು ,ಆ ಗುರು ಶಿಷ್ಯರ ನಡುವಿನ ನಂಟೆ ಇಂದಿನ ಈ ಕಾರ್ಯಕ್ರಮಕ್ಕೆ ಕಾರಣವಾಗಿದ್ದು . ಮೂವತ್ತು ವರ್ಷಗಳ ನಂತರ ತನಗೆ ವಿದ್ಯೆಯನ್ನು ಕೊಟ್ಟ ಎಲ್ಲ ಗುರುಗಳನ್ನ ಒಂದು ವೇದಿಕೆಯಲ್ಲಿ ಕೂಡಿಸಿ ನಮಗೆ ವಿದ್ಯೆಯನ್ನ ನೀಡಿ ,ನಮ್ಮ ವ್ಯಕ್ತಿತ್ವವನ್ನ ತಿದ್ದಿ ತೀಡಿ ,ಸಮಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗುವತ್ತ ಮಾರ್ಗದರ್ಶನ ನೀಡಿರುವುದಕ್ಕೆ ಗುರುಗಳೇ ತಮಗೊಂದು ಧನ್ಯವಾದ ಅಂತ ಹೇಳುವ ಭಾಗ್ಯ ಬಹುಶ ಎಲ್ಲ ಶಿಷ್ಯಂದರ ನಸೀಬಿನಲ್ಲಿ ಬರೆದಿರುವುದಿಲ್ಲ. ತಮ್ಮ ಮುಂದೆ ಇಷ್ಟಿದ್ದ ಮಕ್ಕಳು ಇಂದು ಎದೆಯೆತ್ತರಕ್ಕೆ ಬೆಳೆದು ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ಬದುಕುರುತ್ತಿರುವುದನ್ನ ನೋಡಿದಾಗ ತನ್ನ ಮಕ್ಕಳನ್ನೇ ನೋಡಿದಷ್ಟು ಸಂತೋಷ ಗುರುಗಳಿಗೆ ಆಗಿರಬಹುದು.ಅಲ್ಲಿಂದ ಮುಂದೆ ತಮ್ಮ ನಡುವಿನ ಸಾಧಕರಿಗೆ ಸನ್ಮಾನಿಸಿ ಅವರನ್ನ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.
ಪರಸ್ಪರ ಮಾತು ,ಹಾಸ್ಯ ,ನಗು ,ಆಟ ಒಂದಿಷ್ಟು ಹಾಡು ,ಗುರುಗಳ ಜೊತೆ ಮಾತು ಮತ್ತು ಸಾಕಷ್ಟು ಕ್ಲಿಕ್ಕಿಸಿಕೊಂಡ ಫೋಟೋಗಳು , ನಡುವೆ ಆ ಒಂದಿಡಿ ದಿನ ಕಳೆದದ್ದು ಗೊತ್ತೇ ಆಗಲಿಲ್ಲ .ಬಾಲ್ಯದ ದಿನಗಳು,ಶಾಲಾ ಕಾಲೇಜಿನ ದಿನಗಳು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ,ಆ ದಿನಗಳೇ ಒಂತರ ಮಜವಾಗಿದ್ದವು ಈಗ ಆ ದಿನಗಳಿಗಂತು ಮರಳಲು ಸಾಧ್ಯವಿಲ್ಲ ಆದರೆ ಈ ಚೆಂದದ ದಿನಗಳ ನೆನಪುಗಳನ್ನ ಮೆಲಕು ಹಾಕಬಹುದಷ್ಟೇ , ಹೊಟ್ಟೆ ತುಂಬ ಹಸಿವು ಸಿಕ್ಕಿದ್ದನ್ನ ತಿಂದು ಚಿಂತೆಯಿಲ್ಲದೆ ಕಣ್ತುಂಬ ನಿದ್ದೆ ಮಾಡುತ್ತಿದ್ದೆವು ,ಬೆಳಗ್ಗೆ ಜಗಳವಾಡಿದ ಮಿತ್ರ ಮಧ್ಯಾಹ್ನದ ಹೊತ್ತಿಗೆ ಮತ್ತೆ ಜತೆಯಾಗುತ್ತಿದ್ದ ,ಗಾಯಗಳು ದೇಹದ ಮೇಲಾಗುತ್ತಿದ್ದವು ಮನಸ್ಸಿನ ಮೇಲಲ್ಲ ,ಹೇಳುತ್ತಾ ಹೊರಟರೆ ಮುಗಿಯದ ಕಥೆಯದು.ಈಗೀಗ ನಮ್ಮೆಲ್ಲರ ಬದುಕಂತು ಓಟಕ್ಕೆ ನಿಂತಂತೆ ಓಡುತ್ತಿದೆ ಯಾರಿಗೂ ಸಹ ಸಮಯವಿಲ್ಲ ,ನಾವು ಬೆಳೆಯುತ್ತ ಬೆಳೆಯುತ್ತ ನಮ್ಮ ಬದುಕು ಬದಲಾಗಿದೆ ಜೊತೆಗೆ ನಮ್ಮೂರು ಕೂಡ, ಹಾಗೆಯೇ ನಮ್ಮ ಹೆಗಲ ಮೇಲಿನ ಜವಾಬ್ದಾರಿಗಳು ತುಸು ಭಾರ ಎನಿಸುವಂತೆಯೇ ಆಗಿವೇ, ಈ ಓಟದ ಮಧ್ಯೆಯೇ ಒಂದು ವಿರಾಮ ಕೊಟ್ಟು ತುಸು ಮಟ್ಟಿಗೆ ಹೆಗಲ ಮೇಲಿನ ಭಾರವನ್ನೆಲ್ಲ ಕಳಿಚಿಟ್ಟು, ಹಳೆಯದನ್ನೆಲ್ಲ ಒಮ್ಮೆ ನೆನಪು ಹಾಕಿದ ಒಂದಿಡೀ ದಿನವನ್ನ ಹಾಡುತ್ತ ಕುಣಿಯುತ್ತ ಕಳೆದು,ಇಲ್ಲಿಂದ ಹೊರಡುವಾಗ ಒಮ್ಮೆ ಮನಸ್ಸು ಭಾರವಾದಂತೆ ಅನಿಸಿತೋ ಅಲ್ಲಿಗೆ ಈ ಕಾರ್ಯಕ್ರಮದ ಆಶಯ ಪೂರ್ಣಗೊಂಡಂತೆ. ಹೇಗೆ ನಮಗೆ ನಮ್ಮ ಬಾಲ್ಯದ ದಿನಕ್ಕೆ ಮರಳು ಸಾಧ್ಯವಿಲ್ಲವೋ ಹಾಗೆ ಈ ಸ್ನೇಹಮಿಲನ ಕಾರ್ಯಕ್ರಮವು ಸಹ ಇಂದಿನ ಈ ದಿನ ಕಳೆದರೆ ಮತ್ತೆಂದು ಮರಳದು.ನಮ್ಮ ನೆನಪುಗಳ ಪುಟಗಳಲ್ಲಿ ಒಂದು ಹೊಸ ಪುಟ ಸೇರಿಕೊಂಡಿತು.ಕೊನೆಯದಾಗಿ ಹೇಳುವುದು ಏನಿದೆ
ಮತ್ತೆ ಸಿಗೋಣ ಅಷ್ಟೇ...!
ಪವನ್ ಹೆಬ್ಬಾರೆ
No comments:
Post a Comment