Total Pageviews

Sunday, November 19, 2017

ಮೊನ್ನೆ ಬಿದ್ದ ಜೋರು ಮಳೆಗೆ ನೆನಪುಗಳೆಲ್ಲ ಒದ್ದೆಯಾಗಿದ್ದವು

  ಜೂನ್ ತಿಂಗಳ ಮಧ್ಯಂತರದ ವಾರ ರಜಾದಿನವದು ಹೊರಗಡೆ ಬಿಟ್ಟೂ ಬಿಡದೆ ಸುರಿಯುತ್ತಿರುವ ಜೋರು ಮಳೆ ಓದುತ್ತಿರುವ ಪುಸ್ತಕವನ್ನ ಮಡಚಿಟ್ಟು ರೂಮಿನ ಕಿಟಕಿಯಲ್ಲಿ ನಿಂತು ಬೀಳುತ್ತಿರುವ ಮಳೆಯ ಜೊತೆ ಕೈಯಲ್ಲಿ ಹಿಡಿದ ಕಾಫಿಯನ್ನು ಆಸ್ವಾದಿಸುತ್ತ ನಿಂತಿದ್ದೆ . ಇದ್ದಕಿದ್ದಂತೆ ಮೊಬೈಲ್  ರಿಂಗಣಿಸಿ ಯಾರೆಂದು ನೋಡಿದರೆ ಶ್ರೀನಿವಾಸ , ನಾನು ಕರೆ ಎತ್ತಿ ಹಲೋ ಎಂದಿದ್ದಷ್ಟೆ ಆ ಕಡೆಯಿಂದ ಕೇಳಿದ್ದು ಒಂದೆ..! ಎಲ್ಲಿದೀಯ..? ನಾನು ರೂಮಿನಲ್ಲಿದೀನಿ ಎಂದು ಹೇಳುವ ಮೊದಲೇ ನಾವು ಬರ್ತಾ ಇದೀವಿ ಎಂಬ ಉತ್ತರ. ಅಷ್ಟೆ ಎಂಟು ಸೆಕೆಂಡುಗಳ ಕರೆ ಮುಗಿದೇ ಹೋಗಿತ್ತು. ಬರುತ್ತಿರೋರು ಶ್ರೀನಿವಾಸ ಮತ್ತು ನಾಸಿರ್ ಇಬ್ಬರು ಸಹ ನನ್ನ ಕಾಲೇಜಿನ (DIVT) ಮಿತ್ರರು . ನಾನು ಮತ್ತೆ ,ಮಳೆಯ ಹನಿಗಳಲ್ಲಿ ಮೈಮರೆತಿರುವಾಗಲೇ ಮನಸ್ಸು ಮೌನವಾಗಿ ಹಿಂದಕ್ಕೆ ಜಾರಿ ಹೋಗಿತ್ತು .
     ಸುಮಾರು ಒಂಭತ್ತು - ಹತ್ತು ವರ್ಷಗಳ ಹಿಂದಿನ ದಿನಗಳವು. ಆಗಲೂ ಸಹ ಭರ್ತಿ ಮಳೆಗಾಲದ ಸಮಯ. SSLC ಯ ನಂತರ ಮುಂದೇನು ಎಂಬ ಪ್ರಶ್ನೆಯಲ್ಲೇ ಆಯ್ದುಕೊಂಡಿದ್ದು ITI . ಗಳಿಸಿದ ರಾಂಕಿಂಗ್ ಗಳಿಂದ ಕಷ್ಟಪಟ್ಟು ಕೊನೇಯ  ಘಳಿಗೆಯಲ್ಲಿ ಸಿಕ್ಕ ಕಾಲೇಜಿನ ಕೊನೇಯ ಸೀಟು ನಂದೇ ಎಂಬುದನ್ನು ಯಾವ ಕಾಲಕ್ಕೂ ಮರೆಯಲಾಗುವುದಲಿಲ್ಲ  ಬೀಳುವ ಮೊದಲನೇ ಮಳೆಗೆ ಹೊರಬೀಳುವ ಬಸವನ ಹುಳುವಿನ ತರ ಆಗ ತಾನೆ ಮೊದಲನೇ ಬಾರಿಗೆ ನಾನು ಮನೆಯಿಂದ ಹೊರ ಬಿದ್ದಾಗಿತ್ತು . ಹೊಸ ಕಾಲೇಜು ,ಹೊಸ ಮಿತ್ರರು ಎರಡು ವರ್ಷ  ಚೆನ್ನಾಗಿ ಓದಬೇಕು , ಕಲಿಯಬೇಕು ನಂತರ ಒಂದೊಳ್ಳೆ ಕೆಲಸವನ್ನ ಗಳಿಸಬೇಕು ಎಂಬ ಸಂಕಲ್ಪದಲ್ಲೇ , (ನನ್ನದೇನೂ ಹೆಚ್ಚು ಕಡಿಮೆ ಪ್ರತಿ ವಿದ್ಯಾರ್ಥಿಯ ಕನಸು ಸಹ ಇದೆ ಅಲ್ಲವೇ ) ಕಾಲೇಜಿನ ದಿನಗಳನ್ನು  ಆರಂಭಿಸಿದ ನಾನು ಮಿತ್ರದೋಷ , ವಯಸ್ಸು ಒಂದೋ ಮತ್ತೊಂದೋ ನಮ್ಮನ್ನು ಇನ್ಯಾವುದೋ ಬೇರೆಯದೆ  ದಿಕ್ಕಿಗೆ ಕರೆದೊಯ್ದು ಬಿಟ್ಟಿತ್ತು . ಇಂದಿಗೂ ಕಾಲೇಜಿನ ಪ್ರತೀ  ಕೋಣೆಗಳು, ಲ್ಯಾಬುಗಳು, ಲೈಬ್ರರಿ ಹೀಗೆ ಯಾವ ಮೂಲೆಯಲ್ಲಿ ನಿಂತರೂ ಒಂದು ಕಥೆಯನ್ನು ಹೇಳಿಯೇ ಹೇಳುತ್ತೆ . ಇಂಗ್ಲೀಷು ಸರಿಯಾಗಿ ಬರದೆ ಒದ್ದಾಡುತ್ತಲೇ ಬರೆಯುವ ಪ್ರತೀ ತಿಂಗಳ ಪರೀಕ್ಷೆ  ಮೂರು ತಿಂಗಳಿಗೊಮ್ಮೆ ಕಾಲೇಜು ಅಂಚೆಯ  ಮೂಲಕವೇ ಮನೆಗೆ ಕಳಿಸುವ ನಮ್ಮ ಅಂಕ ಪತ್ರಿಕೆ ಬದುಕಿನ ಅತ್ಯಂತ ಕಷ್ಟಕರ ಸಮಸ್ಯೆಯೇನೋ ಎಂದೆನಿಸಿಬಿಡುತ್ತಿತ್ತು . ಪರೀಕ್ಷೆಯಲ್ಲಿ ಒಬ್ಬರಿಗೊಬ್ಬರು ತೋರಿಸುತ್ತಾ ಬರೆಯುತ್ತಿದ್ದೇವೆಂದು ನನ್ನ ಜೊತೆಗೆ ನನ್ನಿಬ್ಬರು ಮಿತ್ರರನ್ನು ಸಹ ತಮ್ಮ ಪಾಲಕರೊಡನೆಯೇ ಮರಳಿ ಕಾಲೇಜಿಗೆ ಬರುವಂತೆ ಹೇಳಿ ಕಾಲೇಜಿನಿಂದ ಹೊರ ಹಾಕಿದ್ದನ್ನು ಮರೆಯುವುದಾದರು ಹೇಗೆ. ಅಂತೂ ಒಂದು ಸಮಾಧಾನಕರ ಸಂಗತಿ ಏನೆಂದರೆ ಈ ಸೋಷಿಯಲ್ ಮೀಡಿಯಾಗಳು ಮನುಷ್ಯನ ಬದುಕಿನಲ್ಲಿ ಪಸರಿಸುವ ಮೊದಲೇ ನಾನು ಕಾಲೇಜಿನ ಬದುಕಿನಿಂದ ,ಪರೀಕ್ಷೆಗಳ ಭಯಗಳಿಂದ ಆಚೆ ಬಂದಿದ್ದು .ತನ್ನದರ ಬಗ್ಗೆ ತಾನು ಪಡೆದುಕೊಂಡಿರುವುದರ ಬಗ್ಗೆ ದೋಷಿಸಿಕೊಳ್ಳುವುದು ಮನುಷ್ಯನ ಸಹಜ ಗುಣವೇ. ಹಾಗೆ ನಾವು ಸಹ ಕಾಲೇಜಿನ ದಿನಗಳಲ್ಲಿ ನಮ್ಮ ಕಾಲೇಜಿನ ಬಗ್ಗೆ ಅದೆಷ್ಟು ಬಯ್ಯುತ್ತ ಗೋಣಗಿಕೊಂಡರು ಎಂದು ಮರೆಯಲಾಗದಂತಹ ಅತ್ಯುನ್ನತ ಮಧುಕರ  ನೆನಪುಗಳನ್ನು , ಮಿತ್ರರನ್ನು ಜೊತೆಗೆ ಶಿಕ್ಷಕರನ್ನು ನಮಗೆ ನೀಡಿದೆ. ಕಾಲೇಜಿನ ಕ್ರೀಡಾಕೂಟ , ವಾರ್ಷಿಕೋತ್ಸವ , ಜೀನ್ಸ್ ಡೇ , ವಾಚ್ ಡೇ, ಬ್ಲಾಕ್ & ವೈಟ್ ಡೇ ಹೀಗೆ ಪ್ರತಿಯೊಂದು ದಿನದ  ಆಚರಣೆಗಳಲ್ಲಿಯೂ ನನ್ನದೇನೂ..? ಪ್ರತೀ ಟ್ರೆನಿಯ (ವಿದ್ಯಾರ್ಥಿಯ)ಅದೆಷ್ಟೋ ಲೆಕ್ಕವಿಲ್ಲದಷ್ಟು ನೆನಪುಗಳು ಅಡುಗಿ ಕುಳಿತಿವೆ. ಮಿಂಚಿನಷ್ಟೇ ವೇಗವಾದದ್ದು ಮನುಷ್ಯನ ಮನಸ್ಸು ಮತ್ತು ಆಲೋಚನೆ ಬಿಚ್ಚಿದಷ್ಟು ಬಿಡಿಸಿಕೊಳ್ಳುತ್ತ ಹೋಗುವ  ನೂಲಿನಂತೆ ಒಂದರ ಹಿಂದೆ ಒಂದು ಬಂದ  ನೆನಪುಗಳ ಮಧ್ಯೆ ಕೈಯಲ್ಲಿದ್ದ ಕಾಫಿ ಖಾಲಿಯಾಗಿದ್ದೇ  ಅರಿವಿಗೆ ಬರಲಿಲ್ಲ . ಕಾಲೇಜಿನ ಅವೆರಡೂ ವರ್ಷಗಳಲ್ಲಿ ಮಾಡಿದ ತರಲೆಗಳಿಗಂತೂ ಮಿತಿಯೇ ಇರಲಿಲ್ಲ . ನಮ್ಮ ಇಲೆಕ್ಟ್ರಿಕಲ್ ಬ್ಯಾಚಗೆ ನಾವೇ ಇಟ್ಟುಕೊಂಡ ಹೆಸರು ECD ಎಂದು ಕರೆದುಕೊಳ್ಳುವುದೇ ನಮಗೆ ಎಲ್ಲಿಲ್ಲದ ಆನಂದ ಮತ್ತು ಗರಿಮೆ. ತಿಂಗಳಿಗೆ ಒಂದೆರಡು ದಿನವಾದರೂ ನಾನು ಮತ್ತು ನಮ್ಮ ಬ್ಯಾಚಿನ ಹುಡುಗರು ಒಬ್ಬರಿಲ್ಲ ಒಬ್ಬರು ಪ್ರಾಂಶುಪಾಲರ  ಮುಂದೆ ಹಾಜರಿರಲೇಬೇಕಿತ್ತು . ನಮ್ಮನ್ನು  ಕ್ಲಾಸಿನಲ್ಲಿ ಕೂಳ್ಳಿರಿಸಿದ್ದಕ್ಕಿಂತ ಕಾಲೇಜಿನ ವೇದಿಕೆಯ ಮೇಲೆ ಕುಳ್ಳಿರಿಸಿದ್ದೇ ಹೆಚ್ಚು. ಆದರೆ ವರ್ಷ ಉರುಳಿ ದಿನಗಳು ಕಳೆದಂತೆ ಎಲ್ಲವೂ ಕಡಿಮೆಯಾಗುತ್ತಾ ಸಾಗಿತ್ತು, ಕಾಲೇಜಿನ ಕೊನೆಯ ದಿನಗಳಲ್ಲಿ ನನ್ನಲ್ಲಾದ ಬದಲಾವಣೆ ಸರಿಯಾದ ಸಮಯಕ್ಕೆ ಸಿಕ್ಕ ಶಿಕ್ಷಕರ ಮಾರ್ಗದರ್ಶನ ,ಕ್ಯಾಂಪಸ್ ಕೆಲಸ ಎಲ್ಲವೂ ಸಹ ಬದುಕನ್ನು  ಸುಂಟರಗಾಳಿಯ ವೇಗದಲ್ಲಿ  ಬದಲಾಯಿಸಿಬಿಟ್ಟಿತ್ತು .
      ಇಂದು ಕಾಲೇಜಿನಿಂದ ಹೊರ ಬಂದು ಎಂಟು ವರ್ಷವಾಗುತ್ತ ಬಂತು. ವಾಸ್ತವವಾಗಿ ಯಾವುದು ಸಹ ಮೊದಲಿನಂತಿಲ್ಲ . ಪರೀಕ್ಷೆಯ ಭಯ, ಅಂಕ ಪತ್ರಿಕೆ,ನೋಟ್ಸಗಳು ಎಲ್ಲವೂ ಸಹ ಬದಲಾಗಿವೆ, ಆದ್ರೆ ಇವೆಲ್ಲವೂ ಸಹ ಮರಳಿ ಮರಳಿ ಬದುಕಿನಲ್ಲಿ ಬಂದೇ ಬರುತ್ತವೆ. ಬಂದಾಗ ಅವುಗಳ ಸ್ವರೂಪ ಮತ್ತು ಬರುವ ಸಂಧರ್ಭ ಮಾತ್ರ ಬದಲಾಗಿರುತ್ತೆ. ಅಂಕ ಪತ್ರಿಕೆಯ ಜಾಗದಲ್ಲಿ ತಿಂಗಳ ಕೊನೇಯ ಟಾರ್ಗೆಟುಗಳು ಬಂದು ಕುಳಿತರೆ.ಮೊದಲು ಸಮಯ ದಿನಾಂಕವನ್ನು ನಿಗದಿಪಡಿಸಿ ಬರುತ್ತಿದ್ದ ಪರೀಕ್ಷೆಗಳು ಇಂದು ಹೇಳದೆ ಕೇಳದೆ ಹಠಾತ್ತನೆ ಬಂದು ಬದುಕಿನ ಪರೀಕ್ಷೆಯನ್ನು ನಡೆಸಿ ಆ ದಿನಾಂಕ ಮತ್ತು ಸಮಯವನ್ನು ಕೊನೆಯವರೆಗೂ ನೆನಪಿಡುವಂತೆ ಮಾಡಿಬಿಡುತ್ತದೆ. ದಿನಕಳೆದಂತೆ ಹೆಗಲೇರುವ ಒಂದೊಂದೇ ಜವಾಬ್ದಾರಿಗಳ ಮಧ್ಯೆ ಸಮಯವೇ ನೀಡದೆ ಬದುಕು ನಡೆಸುವ ಪರೀಕ್ಷೆಯ  ಕಾರಣಗಳಿಂದಲೋ ಏನೋ, ಕಾಲೇಜಿನ ದಿನಗಳು ಅತ್ಯಂತ ನೆಮ್ಮದಿಯ ದಿನಗಳು ಎಂದು ಸಹಜವಾಗಿಯೇ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಒಟ್ಟಿನಲ್ಲಿ ಹೇಳಬೇಕು ಅಂದ್ರೆ ಪೂರ್ತಿ ಬದುಕಿಗೆ ಸಾಕಾಗುವಷ್ಟು ಪಾಠಗಳನ್ನು ಕಾಲೇಜಿನ ದಿನಗಳು ಕಲಿಸಿಕೊಟ್ಟು ಬಿಡುತ್ತವೆ . ಆದ್ರೆ , ಅವುಗಳನ್ನು ಗ್ರಹಿಸಿ, ಆಲೋಚಿಸಿ ಅರ್ಥ ಮಾಡಿಕೊಳ್ಳುವ ಶಕ್ತಿ  ನಮ್ಮಲ್ಲಿರಬೇಕು ಅಷ್ಟೆ . ಜೇಬಿನಲ್ಲಿ ನಯಾಪೈಸೆ ದುಡ್ಡಿಲ್ಲದಿದ್ದರೂ ಸಹ ನಗು ನಗುತ ಸಂತೋಷವಾಗಿ ಬದುಕುವುದನ್ನು ಕಾಲೇಜು ಅನಿರ್ವಾಯವಾಗಿ ಕಲಿಸಿಕೊಡುತ್ತೆ . ಇಂದು ಮನುಷ್ಯನಿಗೆ ಅದೆಷ್ಟೂ ಗಳಿಸಿಕೊಂಡರು ಸಹ ನೆಮ್ಮದಿಯೇ ಇಲ್ಲ. ಮೇಲಿಂದ ಮೇಲೆ ಬರುವ ಪರೀಕ್ಷೆಗಳು, ಸಮಸ್ಯೆಗಳನ್ನು ಎದುರಿಸುವ ತಾಖತ್ತನ್ನೂ  ನಮ್ಮಲ್ಲಿ ಇಮ್ಮಡಿಗೊಳಿಸಿಬಿಡುತ್ತವೆ. ಖಂಡಿತವಾಗಿಯೂ ನಮಗೆಲ್ಲ ನಾವು ಪರೀಕ್ಷೆಯಲ್ಲಿ ಎನು ಓದಿದೆವೋ ,ಎನು ಬರೆದೆವೋ,ಗಳಿಸಿದ ಅಂಕಗಳೆಷ್ಟೋ ಯಾವುದು ಸಹ ನೆನಪಿನಲ್ಲಿ ಇಲ್ಲ.  ಆದ್ರೆ,ಪರೀಕ್ಷೆಗಳನ್ನು ಪಾಸು ಮಾಡಿದ್ದಂತೂ ನೆನಪಿದೆ. ಫೇಲಾದರೆ ಮತ್ತೆ ಪರೀಕ್ಷೆ ಬರೆದು ಪಾಸಾಗಿದ್ದೂ  ನೆನಪಿದೆ . ಇದಕ್ಕಿಂತ ಒಳ್ಳೆಯ ಪಾಠ ಕಾಲೇಜಿನಿಂದ  ಬದುಕಿಗೆ ಇನ್ನೇನು ಬೇಕು ಹೇಳಿ..? ಸಮಸ್ಯೆಗಳು ಬದುಕಿನಲ್ಲಿ ಅದೆಷ್ಟೇ ಬರಲಿ ಎಂತಹುದೇ ಸಮಸ್ಯೆ ಬರಲಿ , ಅದನ್ನು ಎದುರಿಸಬೇಕು ಮುಂದಕ್ಕೆ ಹೋಗಬೇಕು ಎಂದರೆ ಗೆಲ್ಲುವವರೆಗೂ ನಮ್ಮ ಗುರಿಯನ್ನು ಮುಟ್ಟುವವರೆಗೂ ಹೋರಾಡಲೇಬೇಕು.ಹೋರಾಡಿ-ಗೆದ್ದಾಗಲೇ ನಾವು ಪಾಸಾದಂತೆ.ಆದ್ರೆ ನಮ್ಮಲ್ಲಿ ಅನೇಕ ಜನರಿಗೆ ತಮ್ಮ ಗುರಿ ಯಾವುದೆಂದೇ ತಿಳಿದಿರುವದಿಲ್ಲ. ಗುರಿಯೇ ಇಲ್ಲವೆಂದ ಮೇಲೆ ಗೆಲ್ಲುವುದಾದರು ಎಲ್ಲಿಂದ..?  ಗುರುವಿನ ಸಹಾಯವಿಲ್ಲದೆ ಯಾವ ಗುರಿಯನ್ನಾದ್ರು ಸಹ ತಲುಪುವುದು ಸ್ವಲ್ಪ ಕಷ್ಟಸಾಧ್ಯವೆ..! "ಸರಿಯಾಗಿ ಏಟು ಬಿದ್ದ ಶಿಲೆ ಮಾತ್ರ ಸುಂದರವಾದ ಮೂರ್ತಿಯಾಗುತ್ತೆ" ಎಂಬಂತೆ ಗುರುವು ನೀಡುವ ಮಾರ್ಗದರ್ಶನ , ಆದರ್ಶ , ಶಿಕ್ಷಣ ಮತ್ತು ಶಿಕ್ಷೆ ಮಾತ್ರವೇ ನಮ್ಮನ್ನು ಒಂದು ಸುಂದರ ಮೂರ್ತಿಯಂತೆ ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಲು ಪ್ರೇರೇಪಿಸುತ್ತೆ. ಇಂದಿಗೂ ಕಾಲೇಜಿಗೆ ಹೋದಾಗ ಅಲ್ಲಿ ನಮ್ಮ ಗುರುಗಳನ್ನೊಮ್ಮೆ ನೋಡಿದಾಗ ಅಯ್ಯೋ ಪಾಪ ಎಂದು ಅನಿಸಲು ಶುರುವಾಗತ್ತೆ .ಯಾಕೆ ಗೊತ್ತಾ..? SSLC ಯ ನಂತರ ಮುಂದೇನು ಎಂಬಂತೆ ಆಗತಾನೆ ಪ್ರೌಢಶಾಲೆಯಿಂದ ಕಾಲೇಜು ಸೇರಿದ ಹೆಚ್ಚಿನ ವಿದ್ಯಾರ್ಥಿಗಳು, ಇಂಗ್ಲೀಷೂ ಸಹ ಅಷ್ಟಾಗಿ ಬರಲ್ಲ , ಮಕ್ಕಳ ಹುಡುಗಾಟಿಕೆಯ ಬುದ್ದಿಯಂತು ಇನ್ನೂ ಬಿಟ್ಟು ಹೋಗಿರುವುದೇ ಇಲ್ಲ .ಇಂತಹ ವಿದ್ಯಾರ್ಥಿಗಳನ್ನು ಸಂಭಾಳಿಸುತ್ತ ಪಾಠ ಮಾಡಬೇಕು,ತಿಳಿ ಹೇಳಬೇಕು , ಅರ್ಥಮಾಡಿಸಬೇಕು  ಎಷ್ಟೊಂದು ಕಷ್ಟವಲ್ಲವೇ..? ನಾನು ಸಹ ಆಗ ಇದ್ದಿದ್ದೂ ಹೀಗಿಯೇ ಎಂಬುದು ನೆನಪಾಗುತ್ತಲೇ, ಒಳಗಿನಿಂದ ತುಟಿಯ ಮೇಲೊಂದು ನಗು ಅರಳಿ ನಿಲ್ಲುತ್ತಲೇ ಅಲ್ಲಿಂದ ಹೊರಟು ಬಿಡುತ್ತೇನೆ."ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬಂತೆ ಗತ ವೈಭವದ ಇತಿಹಾಸದಲ್ಲಿ ತನ್ನ ಸ್ಪರ್ಶ ಜ್ಯ್ನಾನದಿಂದ, ತನ್ನೆಲ್ಲ ಜ್ಯ್ನಾನ-ಶಕ್ತಿಯನ್ನು  ಧಾರೆ ಎರೆದು  ಶಿಷ್ಯರನ್ನ ಉದ್ಧರಿಸಿದ ಅದೆಷ್ಟೋ ಉದಾಹರಣೆಗಳು ಭಾರತದಲ್ಲಿ ಕಾಣಲು ಸಿಗುತ್ತೆ.  ಇದೇ ಕಾರಣಕ್ಕೇನೆ ಭಾರತದಲ್ಲಿ ಗುರುವಿಗೆ ಮಹತ್ವದ ಸ್ಥಾನಮಾನವನ್ನು  ನಮ್ಮ ಪೂರ್ವಜರು ನೀಡಿದ್ದಿರಬೇಕು . ಬಿಡಿ. ಇನ್ನೇನೂ ಮಿತ್ರರು ಬಂದೆ ಬಿಟ್ಟರು ಅನಿಸುತ್ತೆ . ಅವರು ಸಿಕ್ಕಾಗೆಲ್ಲ ಅದೇ ಕಾಲೇಜಿನ ದಿನಗಳ ನೆನಪು, ಹರಟೆ ,ಒಂದಿಷ್ಟು ಭವಿಷ್ಯದ ಬಗ್ಗೆ ಚಿಂತನೆ . ಅಲ್ಲಿಗೆ ಮನಸ್ಸಿಗೆ ಒಂದಿಷ್ಟು ನೆಮ್ಮದಿಯ ನಿರಾಳ ಭಾವ.

ಪvaन  Hebbare

No comments:

Post a Comment